ಶತಕವೀರರ ಟೀಮ್ ಇಂಡಿಯಾ: ವಿಶ್ವಕಪ್ ತಂಡಗಳ ವಿಶೇಷತೆ ಹೀಗಿದೆ…

ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಎಲ್ಲ ತಂಡಗಳು ಪೂರ್ಣಪ್ರಮಾಣದಲ್ಲಿ ಸಜ್ಜಾಗುತ್ತಿವೆ. ಎಲ್ಲ ತಂಡಗಳು ಕಳೆದ ತಿಂಗಳಲ್ಲೇ ಪ್ರಕಟಗೊಂಡಿದ್ದು, ಯುವ-ಅನುಭವಿ ಆಟಗಾರರಿಂದ ತುಂಬಿವೆ. ಈ ತಂಡಗಳಲ್ಲೂ ಕೆಲ ವಿಶೇಷತೆಗಳಿದ್ದು, ಅವುಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ವಿಶ್ವಕಪ್ ತಂಡಗಳ ಪೈಕಿ ಭಾರತ ಗರಿಷ್ಠ ಶತಕದ ದಾಖಲೆ ಹೊಂದಿದೆ. ಭಾರತದ ಆಟಗಾರರು ಒಟ್ಟಾರೆ 90 ಶತಕಗಳನ್ನು ಸಿಡಿಸಿದ್ದು, ಈ ಪೈಕಿ ನಾಯಕ ಕೊಹ್ಲಿ ಗರಿಷ್ಠ 41 ಶತಕ ದಾಖಲಿಸಿದ್ದಾರೆ. ರೋಹಿತ್ ಶರ್ಮ (22), ಧವನ್ (16), ಧೋನಿ (10) ನಂತರದಲ್ಲಿದ್ದಾರೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಕನಿಷ್ಠ ತಲಾ 12 ಶತಕ ಸಿಡಿಸಿದ ಆಟಗಾರರನ್ನು ಹೊಂದಿವೆ. ಆತಿಥೇಯ ಇಂಗ್ಲೆಂಡ್ ತಂಡದಲ್ಲಿ ಗರಿಷ್ಠ 7 ಆಟಗಾರರು ಕನಿಷ್ಠ ಒಂದಾದರೂ ಶತಕ ಸಿಡಿಸಿದ ಸಾಧಕರಾಗಿದ್ದಾರೆ. ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳಲ್ಲಿ ತಲಾ 5 ಆಟಗಾರರು ಶತಕವೀರರಾಗಿದ್ದಾರೆ.

ಭಾರತ ಅನುಭವಿಗಳ ತಂಡ

ಟೀಮ್ ಇಂಡಿಯಾ ಟೂರ್ನಿಯ ಅತ್ಯಂತ ಅನುಭವಿ ತಂಡವೆನಿಸಿದೆ. ಭಾರತ ತಂಡದ ಆಟಗಾರರು ಒಟ್ಟಾರೆ 1,573 ಏಕದಿನ ಪಂದ್ಯ ಆಡಿದ ಅನುಭವ ಹೊಂದಿದ್ದಾರೆ. ಧೋನಿ ಗರಿಷ್ಠ 341 ಏಕದಿನ ಆಡಿದ್ದರೆ, ಕೊಹ್ಲಿ 227 ಏಕದಿನ ಪಂದ್ಯಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ 206 ಏಕದಿನ ಪಂದ್ಯದೊಂದಿಗೆ ನಂತರದಲ್ಲಿದ್ದಾರೆ. ಒಟ್ಟಾರೆ 1,299 ಏಕದಿನ ಪಂದ್ಯವಾಡಿದ ಅನುಭವಿಗಳಿಂದ ತುಂಬಿರುವ ಬಾಂಗ್ಲಾದೇಶ ಟೂರ್ನಿಯ 2ನೇ ಅನುಭವಿ ತಂಡವೆನಿಸಿದೆ.

ಪಾಕ್ ಅತಿ ಕಿರಿಯ ತಂಡ

19 ವರ್ಷದ ವೇಗಿ ಮೊಹಮದ್ ಹಸ್​ನೇನ್​ರನ್ನು ಹೊಂದಿರುವ ಪಾಕಿಸ್ತಾನ ವಿಶ್ವಕಪ್ ಆಡಲಿರುವ ಅತಿ ಕಿರಿಯ ತಂಡ. ಆಟಗಾರರ ಸರಾಸರಿ ವಯಸ್ಸು 27.3. ಅಫ್ಘಾನಿಸ್ತಾನ 27.4 ಸರಾಸರಿ ವಯಸ್ಸಿನೊಂದಿಗೆ ಟೂರ್ನಿಯ 2ನೇ ಅತಿ ಕಿರಿಯ ತಂಡವೆನಿಸಿದೆ.

ಬಾಂಗ್ಲಾ ಗರಿಷ್ಠ ವಿಕೆಟ್ ಸಾಧನೆ

ಬಾಂಗ್ಲಾದೇಶ ತಂಡ ಗರಿಷ್ಠ 829 ವಿಕೆಟ್ ಕಬಳಿಸಿದ ಬೌಲರ್​ಗಳ ಅನುಭವಿ ಬಲ ಹೊಂದಿದೆ. ಲಸಿತ್ ಮಾಲಿಂಗ (322) ಉಪಸ್ಥಿತಿಯಿಂದ ಶ್ರೀಲಂಕಾ ತಂಡ 2ನೇ ಗರಿಷ್ಠ 815 ವಿಕೆಟ್ ಕಬಳಿಸಿದ ದಾಖಲೆ ಹೊಂದಿದೆ. ಆಸ್ಟ್ರೇಲಿಯಾ ತಂಡದ ಬೌಲಿಂಗ್ ವಿಭಾಗ ಅತ್ಯಂತ ಅನನುಭವಿ ಎನಿಸಿದ್ದು, ಕನಿಷ್ಠ 495 ವಿಕೆಟ್ ಕಬಳಿಸಿದ ಬೌಲರ್​ಗಳನ್ನು ಹೊಂದಿದೆ. ಭಾರತೀಯ ಬೌಲರ್​ಗಳು ಒಟ್ಟಾರೆ 735 ವಿಕೆಟ್ ಕಬಳಿಸಿದ್ದು, 174 ವಿಕೆಟ್ ಗಳಿಸಿರುವ ರವೀಂದ್ರ ಜಡೇಜಾ ತಂಡದ ಅನುಭವಿ ಬೌಲರ್.

ಹಿರಿ-ಕಿರಿಯ ಆಟಗಾರರು

ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ಬಾರಿ ವಿಶ್ವಕಪ್​ನಲ್ಲಿ ಆಡಲಿರುವ ಅತ್ಯಂತ ಹಿರಿಯ ಆಟಗಾರ. 40 ವರ್ಷದ ಅವರು ಆಫ್ರಿಕಾ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ. ಅಫ್ಘಾನಿಸ್ತಾನದ 18 ವರ್ಷದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ವಿಶ್ವಕಪ್​ನಲ್ಲಿ ಆಡಲಿರುವ ಅತ್ಯಂತ ಕಿರಿಯ ಆಟಗಾರ. ಮುಜೀಬ್​ಗೆ ಇದು ಮೊದಲ ವಿಶ್ವಕಪ್ ಟೂರ್ನಿ ಎನಿಸಿದೆ.

ಶ್ರೀಲಂಕಾಗೆ ಹಿರಿಯರೇ ಆಧಾರ

ವಿಶ್ವಕಪ್​ನಲ್ಲಿ ಆಡಲಿರುವ ಆಟಗಾರರ ವಯಸ್ಸಿನ ಸರಾಸರಿ ಆಧಾರದಲ್ಲಿ ಶ್ರೀಲಂಕಾ ಅತ್ಯಂತ ಹಿರಿಯ ತಂಡ! ತಂಡದ ಆಟಗಾರರ ಸರಾಸರಿ ವಯಸ್ಸು 29.9. 35 ವರ್ಷದ ಮಾಲಿಂಗ ತಂಡದ ಹಿರಿಯ ಆಟಗಾರ. ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಇಂಗ್ಲೆಂಡ್ ತಲಾ 29.5 ಸರಾಸರಿ ವಯಸ್ಸಿನ ತಂಡದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮತ್ತು ಭಾರತ ತಲಾ 29.4 ಸರಾಸರಿ ವಯಸ್ಸಿನೊಂದಿಗೆ ನಂತರದಲ್ಲಿವೆ. 37 ವರ್ಷದ ಧೋನಿ ಭಾರತ ತಂಡದ ಅತ್ಯಂತ ಹಿರಿಯ ಆಟಗಾರ.