ಎರಡೇ ಎಸೆತದ ಪಂದ್ಯ: ಇದು ವಿಶ್ವಕಪ್​ ಸ್ವಾರಸ್ಯಕರ ನ್ಯೂಸ್​

ಆಸ್ಟ್ರೇಲಿಯಾದ ಆತಿಥ್ಯದಲ್ಲಿ 1992ರ ವಿಶ್ವಕಪ್ ಭಾರತದ ಮಟ್ಟಿಗೆ ಅದರಲ್ಲೂ ಅಜಯ್ ಜಡೇಜಾ ಪಾಲಿಗೆ ಬಹಳ ವಿಶೇಷ. ಫೆ. 28 ರಂದು ಮೆಕ್​ಕೇಯಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ವಿಶ್ವಕಪ್ ಮುಖಾಮುಖಿ, ಟೂರ್ನಿಯ ಇತಿಹಾಸದ ಅತೀ ಚಿಕ್ಕ ಪಂದ್ಯ ಎನ್ನುವ ದಾಖಲೆ ಬರೆದಿದೆ.

ಮಳೆಯ ಕಾರಣದಿಂದಾಗಿ ಕೇವಲ ಎರಡೇ ಎಸೆತಗಳಲ್ಲಿ ರದ್ದು ಕಂಡ ಪಂದ್ಯ ಇದು. ಆಸ್ಟ್ರೇಲಿಯಾದ ಮೆಕ್​ಕೇಯ ರೇ ಮಿಚೆಲ್ ಓವಲ್ ಮೈದಾನದ ಮೊದಲ ಅಂತಾರಾಷ್ಟ್ರೀಯ ಪಂದ್ಯ ಅದಾಗಿತ್ತು. ಮೆಕ್​ಕೇ ಗ್ರಾಮೀಣ ಭಾಗದಲ್ಲಿ ಇದ್ದ ಕಾರಣ ಪಂದ್ಯದ ನೇರಪ್ರಸಾರವೂ ಸಾಧ್ಯವಾಗಿರಲಿಲ್ಲ. ಹೆಚ್ಚಿನ ಮಳೆ ಬೀಳುವ ಪ್ರದೇಶವಾಗಿ ಗುರುತಿಸಿಕೊಂಡಿದ್ದರೂ, ಪಂದ್ಯಕ್ಕೆ ಅನುವು ಮಾಡಿಕೊಡುವ ನಿರೀಕ್ಷೆ ಇದ್ದವು. ಆದರೆ, ಪಂದ್ಯದ ದಿನ ಲೆಕ್ಕವೇ ಇಲ್ಲದಂತೆ ಮಳೆ ಬಿದ್ದಿತು. ಭೋಜನ ವಿರಾಮದವರೆಗೂ ಪಂದ್ಯ ಸಾಧ್ಯವಾಗಲಿಲ್ಲ. ಆದರೆ, ಮೈದಾನದ ಮೊದಲ ಅಂತಾರಾಷ್ಟ್ರೀಯ ಪಂದ್ಯ ರದ್ದಾಗಬಾರದು ಎನ್ನುವ ಪ್ರಯತ್ನದಲ್ಲಿದ್ದ ಸಂಘಟಕರು, ಹೆಲಿಕಾಪ್ಟರ್​ಗಳನ್ನೆಲ್ಲ ಬಳಸಿ ಪಿಚ್​ಅನ್ನು ಒಣಗಿಸಿದರು. ತಲಾ 20 ಓವರ್​ಗಳಿಗೆ ಇಳಿದಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿತು.

1983ರ ವಿಶ್ವಕಪ್ ದಿಗ್ಗಜ ಕಪಿಲ್ ದೇವ್ ಮೊಟ್ಟಮೊದಲ ಬಾರಿಗೆ ಭಾರತ ತಂಡದಲ್ಲಿ ಆರಂಭಿಕರಾಗಿ ಆಡಿದರು..! ನಡೆದಿದ್ದು ಎರಡೇ ಎಸೆತ. ಮತ್ತೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು. ವಿಶ್ವಕಪ್ ಇತಿಹಾಸದಲ್ಲಿ ಹಾಗೂ ಏಕದಿನ ಕ್ರಿಕೆಟ್​ನ ಇತಿಹಾಸದಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಏನನ್ನೂ ಮಾಡದೇ ಅಜಯ್ ಜಡೇಜಾ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.