More

    ಭಾರತಕ್ಕೆ ಇಂದು ಶ್ರೀಲಂಕಾ ಸವಾಲು: 19 ವಯೋಮಿತಿ ಏಕದಿನ ವಿಶ್ವಕಪ್, ಶುಭಾರಂಭದ ನಿರೀಕ್ಷೆಯಲ್ಲಿ ಪ್ರಿಯಂ ಪಡೆ

    ಬ್ಲೂಮ್ಾಂಟೆನ್(ದಕ್ಷಿಣಆಫ್ರಿಕಾ): ಹಾಲಿ ಚಾಂಪಿಯನ್ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಶ್ರೀಲಂಕಾ ಎದುರು ಅಭಿಯಾನ ಆರಂಭಿಸಲಿದೆ. ಪ್ರಶಸ್ತಿ ಫೇವರಿಟ್ ಭಾರತ ತಂಡ ಒಂದು ತಿಂಗಳು ಮೊದಲೇ ದಕ್ಷಿಣ ಆಫ್ರಿಕಾಗೆ ಆಗಮಿಸಿದ್ದು, ಭರ್ಜರಿ ಅಭ್ಯಾಸ ನಡೆಸಿದೆ.

    ಪ್ರತಿಷ್ಠಿತ ಟೂರ್ನಿ ಆರಂಭಕ್ಕೂ ಮುನ್ನ ಆತಿಥೇಯ ತಂಡದ ಎದುರು ದ್ವಿಪಕ್ಷೀಯ ಸರಣಿ, ಚತುಷ್ಕೋನ ಸರಣಿ ಗೆದ್ದಿರುವ ಪ್ರಿಯಂ ಗಾರ್ಗ್ ಸಾರಥ್ಯದ ಭಾರತ ತಂಡ ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದೆ. ಮಾಂಗಾವಂಗ್ ಓವಲ್ ಮೈದಾನದಲ್ಲಿ ನಡೆಯಲಿರುವ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಮೇಲ್ನೋಟಕ್ಕೆ ಭಾರತವೇ ಗೆಲುವಿನ ಕುದುರೆಯಾಗಿದೆ. ನಾಯಕ ಪ್ರಿಯಂ ಗಾರ್ಗ್, ಯಶಸ್ವಿ ಜೈಸ್ವಾಲ್, ದಿವ್ಯಾಂಶ್ ಸಕ್ಸೆನಾ, ಕಾರ್ತಿಕ್ ತ್ಯಾಗಿ, ಶುಭಾಂಗ್ ಹೆಗ್ಡೆ, ತಿಲಕ್ ವರ್ಮರಂಥ ಪ್ರತಿಭೆಗಳು ಗಮನಸೆಳೆಯುವ ನಿರೀಕ್ಷೆಯಿದೆ. 4 ಬಾರಿಯ ಚಾಂಪಿಯನ್ ಭಾರತ ತಂಡ ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ಹಾಗೂ ಜಪಾನ್ ತಂಡಗಳನ್ನು ಎದುರಿಸಲಿದೆ.

    ಕನಿಷ್ಠ 2 ಪಂದ್ಯಗಳಲ್ಲಿ ಜಯ ದಾಖಲಿಸಿದರೂ ಎಂಟರ ಘಟ್ಟಕ್ಕೇರಲಿದೆ. ಉಳಿದ ಮೂರು ತಂಡಗಳಿಗೆ ಹೋಲಿಸಿದರೆ ಬಲಿಷ್ಠ ತಂಡವಾಗಿರುವ ಭಾರತ ಲೀಗ್ ಹಂತದಲ್ಲಿ ಅಜೇಯ ಸಾಧನೆಯೊಂದಿಗೆ ಎಂಟರ ಘಟ್ಟಕ್ಕೇರುವ ಗುರಿಯಲ್ಲಿದೆ.

    ಟೂರ್ನಿ ಆರಂಭಕ್ಕೂ ಮುನ್ನ 7 ಏಕದಿನ, 2 ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡ ಜಯ ದಾಖಲಿಸಿದೆ. ಇದು ತಂಡದ ಸಂಯೋಜನೆಗೆ ಸಾಕಷ್ಟು ನೆರವಾಗಲಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಸರಾಸರಿ 35ರಂತೆ ರನ್ ಪೇರಿಸಿದ್ದರೆ, ಅಥರ್ವ ಅಂಕೋಲ್ಕರ್ ಆಡಿದ 5 ಪಂದ್ಯಗಳಿಂದ 12 ವಿಕೆಟ್, ರವಿ ಬಿಷ್ಣೋಯಿ 10 ವಿಕೆಟ್ ಕಬಳಿಸಿದ್ದಾರೆ. ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲ ತಂಡಗಳಿಗೂ ಹೋಲಿಸಿದರೆ 2019ರಲ್ಲಿ ಭಾರತ ಅತಿ ಹೆಚ್ಚು ಪಂದ್ಯಗಳಲ್ಲಿ ಜಯ ದಾಖಲಿಸಿದೆ.

    ಕಳೆದ ವರ್ಷ ಆಡಿದ 22 ಪಂದ್ಯಗಳಲ್ಲಿ 16ರಲ್ಲಿ ಗೆಲುವು ಕಂಡಿರುವ ಭಾರತ ಇದೇ ಲಯದಲ್ಲಿ ಮುಂದುವರಿಯುವ ಇರಾದೆಯಲ್ಲಿದೆ. ಮತ್ತೊಂದೆಡೆ, ಕಳೆದ ವರ್ಷ ಆಡಿದ 20 ಪಂದ್ಯಗಳಲ್ಲಿ ಕೇವಲ 7ರಲ್ಲಿ ಗೆಲುವು ಕಂಡಿರುವ ಶ್ರೀಲಂಕಾ ಪ್ರಬಲ ಪೈಪೋಟಿಗೆ ಸಜ್ಜಾಗಿದೆ. ಭಾರತ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ, ಆತಿಥೇಯ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಯುಎಇ ಹಾಗೂ ಕೆನಡ ಒಳಗೊಂಡ ಡಿ ಗುಂಪಿನಲ್ಲಿ 2ನೇ ಸ್ಥಾನ ಪಡೆದ ತಂಡ ಎಂಟರ ಘಟ್ಟದಲ್ಲಿ ಎದುರಾಗಲಿದೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts