VIDEO| ಐಸಿಸಿ ಟ್ರೋಲ್​ಗೆ ಕ್ರಿಕೆಟ್​ ದಂತಕತೆ ಸಚಿನ್​ ಕೊಟ್ಟ ಧಮಾಕಾ ಉತ್ತರ ಹೀಗಿತ್ತು…

ನವದೆಹಲಿ: ಬ್ಯಾಟಿಂಗ್​ ಸಾಮರ್ಥ್ಯದಿಂದ ಕ್ರಿಕೆಟ್​ ಲೋಕದ ದಂತಕತೆ ಎನಿಸಿಕೊಂಡ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ನಮ್ಮ ದೇಶದ ಹೆಮ್ಮೆ. ಇಂತಹ ಕ್ರೀಡಾತಾರೆಯನ್ನು ಐಸಿಸಿ ಟ್ರೋಲ್​ ಮಾಡಿದ್ದು, ಇದಕ್ಕೆ ಸಚಿನ್​ ನಯವಾಗಿಯೇ ಉತ್ತರ ನೀಡಿದ್ದಾರೆ. ವಿಶೇಷ ಅಂದರೆ ಇಂದೊಂದು ಐಸಿಸಿ ಹಾಗೂ ಸಚಿನ್​ ನಡುವಿನ ಹಾಸ್ಯಾತ್ಮಕ ಪ್ರಸಂಗವಷ್ಟೆ.

ಮುಂಬೈನಲ್ಲಿರುವ ‘ತೆಂಡೂಲ್ಕರ್​ ಮಿಡಲ್​ಸೆಕ್ಸ್​ ಗ್ಲೋಬಲ್​ ಅಕಾಡೆಮಿ'(ಟಿಎಂಜಿಎ) ಕ್ಯಾಂಪ್​ನಲ್ಲಿ ಭಾಗವಹಿಸಿದ ಸಚಿನ್​ ಹಾಗೂ ಆಪ್ತ ವಿನೋದ್​ ಕಾಂಬ್ಳೆ ನೆಟ್​ ಪ್ರಾಕ್ಟೀಸ್​ ನಡೆಸಿದರು. ಈ ವೇಳೆ ಕಾಂಬ್ಳೆ ಬ್ಯಾಟ್​ ಮಾಡುವಾಗ ಅವರಿಗೆ ಸಚಿನ್​ ಬೌಲ್​ ಮಾಡಿರುವುದು ಮತ್ತು ಸಚಿನ್​ ಕೂಡ ಬ್ಯಾಟಿಂಗ್​ ಅಭ್ಯಾಸ ನಡೆಸಿರುವ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ವಿಡಿಯೋ ಕುರಿತು ಟಿಎಂಜಿಎ ಕ್ಯಾಂಪ್​ನ ಊಟದ ವಿರಾಮದ ನಡುವೆ ವಿನೋದ್​ ಕಾಂಬ್ಳಿ ಜತೆ ಮತ್ತೆ ನೆಟ್​ ಪ್ರ್ಯಾಕ್ಟೀಸ್​ಗೆ ಮರಳಿದ್ದಕ್ಕೆ ಖುಷಿಯಾಗುತ್ತಿದೆ. ಬಾಲ್ಯ ಜೀವನದಲ್ಲಿ ನಾವಿಬ್ಬರು ಶಿವಾಜಿ ಪಾರ್ಕ್​ ಕ್ರೀಡಾಂಗಣದಲ್ಲಿ ಕಳೆದ ದಿನಗಳಿಗೆ ನಮ್ಮನ್ನು ಈ ಕ್ಷಣ ಖಂಡಿತವಾಗಿಯು ವಾಪಸು ಕರೆದುಕೊಂಡು ಹೋಗುತ್ತದೆ. ನಾನು ಮತ್ತು ವಿನೋದ್​ ಒಂದೇ ತಂಡದಲ್ಲಿ ಆಡಿದ್ದೇವೆ. ನಾವು ಎಂದಿಗೂ ಎದುರಾಳಿಯಾಗಿ ಆಡಿಲ್ಲ ಎಂಬುದು ಕೆಲವರಿಗೆ ಗೊತ್ತು ಎಂದು ಸಚಿನ್​ ಬರೆದುಕೊಂಡಿದ್ದಾರೆ.

ಸಚಿನ್​ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿನ ದೋಷವೊಂದನ್ನು ಹುಡುಕಿ ಐಸಿಸಿ ಟ್ರೋಲ್​ ಮಾಡಿದೆ. ಸಚಿನ್​ ಬೌಲಿಂಗ್​ ಮಾಡುವಾಗ ಕ್ರೀಸ್​ನಿಂದ ಆಚೆಗೆ ತಮ್ಮ ಕಾಲನ್ನಿಟ್ಟಿರುವ ಫೋಟೋವನ್ನು ಅಪ್​ಲೋಡ್​ ಮಾಡಿ ನಿಮ್ಮ ಮುಂಭಾಗದ ಕಾಲನ್ನು ನೋಡಿ ಎಂದು ಟ್ವೀಟ್​ ಮಾಡಿದೆ. ಜತೆಗೆ ಅಂಪೈರ್​ ಸ್ಟೀವ್ ಬಕ್ನರ್​ ಅವರು ನೋಬಾಲ್​ ಸಿಗ್ನಲ್​ ನೀಡುತ್ತಿರುವುದು ಫೋಟೋದಲ್ಲಿದೆ.​

ಇದಕ್ಕೆ ಉತ್ತರ ನೀಡಿರುವ ಸಚಿನ್​ ಅಬ್ಬಾ ಈ ಬಾರಿ ಬ್ಯಾಟಿಂಗ್​ ಮಾಡದೇ ಕೇವಲ ಬೌಲಿಂಗ್​ ಮಾತ್ರ ಮಾಡುತ್ತಿದ್ದೇನೆ. ಅಂಪೈರ್​ ತೀರ್ಮಾನ ಯಾವಾಗಲೂ ಅಂತಿಮ ತೀರ್ಮಾನ ಎಂದು ಟ್ವೀಟ್​ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷವೆಂದರೆ ಸ್ಟೀವ್​ ಬಕ್ನರ್​ ನೀಡಿದ ಹಲವು ವಿವಾದಾತ್ಮಕ ತೀರ್ಪುಗಳಲ್ಲಿ ಬಲಿಪಶುಗಳಾದವರಲ್ಲಿ ಸಚಿನ್​ ಕೂಡ ಒಬ್ಬರು. (ಏಜೆನ್ಸೀಸ್​)

Leave a Reply

Your email address will not be published. Required fields are marked *