ಟೆಸ್ಟ್​ ರ‍್ಯಾಂಕಿಂಗ್​: ಫಾರೂಕ್​ ಇಂಜಿನಿಯರ್​ ದಾಖಲೆ ಸರಿಗಟ್ಟಿದ ರಿಷಭ್​ ಪಂತ್​

ದುಬೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ನಿರ್ವಹಣೆ ತೋರಿದ ಟೀಂ ಇಂಡಿಯಾದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಇಂದು ಬಿಡುಗಡೆಯಾದ ಟೆಸ್ಟ್​ ರ‍್ಯಾಂಕಿಂಗ್​​ನಲ್ಲಿ ಟಾಪ್​ 20ರೊಳಗೆ ಸ್ಥಾನ ಪಡೆಯುವ ಮೂಲಕ ಮಾಜಿ ಕ್ರಿಕೆಟಿಗ ಫಾರೂಕ್​ ಇಂಜಿನಿಯರ್​ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ರಿಷಭ್​ ಪಂತ್​ 21 ಸ್ಥಾನ ಬಡ್ತಿ ಪಡೆದು 17ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತದ ತಜ್ಞ ವಿಕೆಟ್​ಕೀಪರ್​ ಓರ್ವ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ಪಡೆದ ಅತ್ಯಂತ ಹೆಚ್ಚಿನ ರ‍್ಯಾಂಕ್​ ಆಗಿದೆ. ಇದಕ್ಕೂ ಮುನ್ನ 1973ರ ಜನವರಿಯಲ್ಲಿ ಫಾರೂಕ್​ ಇಂಜಿನಿಯರ್​ 17ನೇ ಸ್ಥಾನ ಪಡೆದಿದ್ದರು. ಆ ನಂತರ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ 19 ನೇ ಸ್ಥಾನ ಪಡೆದದ್ದರು. ಈಗ ಭರವಸೆಯ ಯುವ ಆಟಗಾರ ಪಂತ್​ ಧೋನಿ ದಾಖಲೆಯನ್ನು ಮೀರಿದ್ದು, ರ‍್ಯಾಂಕಿಂಗ್​ನಲ್ಲಿ ಮತ್ತಷ್ಟು ಸ್ಥಾನ ಮೇಲೇರುವ ಸಾಧ್ಯತೆ ಇದೆ.

ಪಂತ್​ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ 59ನೇ ಸ್ಥಾನ ಪಡೆದಿದ್ದರು. ಪ್ರವಾಸದಲ್ಲಿ ಪಂತ್​ 350 ರನ್​ ಗಳಿಸಿದ್ದರು ಮತ್ತು 20 ಕ್ಯಾಚ್​ ಪಡೆದಿದ್ದರು. ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ ರ‍್ಯಾಂಕಿಂಗ್ ಪಾಯಿಂಟ್​ ಹೆಚ್ಚಿದ್ದು, ಈಗ 17ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಪೂಜಾರ ಒಂದು ಸ್ಥಾನ ಮೇಲೇರಿ 3ನೇ ಸ್ಥಾನ ಪಡೆದಿದ್ದರೆ, ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಆಲ್​ ರೌಂಡರ್ ರವೀಂದ್ರ ಜಡೇಜಾ 6 ಸ್ಥಾನ ಬಡ್ತಿ ಪಡೆದು 57ನೇ ಸ್ಥಾನ ಪಡೆದಿದ್ದರೆ, ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮಯಾಂಕ್​ ಅಗರ್ವಾಲ್​ 5 ಸ್ಥಾನ ಬಡ್ತಿ ಪಡೆದು 62ನೇ ಸ್ಥಾನ ಪಡೆದಿದ್ದಾರೆ. (ಏಜೆನ್ಸೀಸ್​)