ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ ಕುಲದೀಪ್

ದುಬೈ: ಭಾರತದ ಚೈನಾಮನ್ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಐಸಿಸಿ ಟಿ20 ರ್ಯಾಂಕಿಂಗ್​ನಲ್ಲಿ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ಕಣಕ್ಕಿಳಿಯದಿದ್ದ ಕುಲದೀಪ್ 3ನೇ ಪಂದ್ಯದಲ್ಲಿ 26 ರನ್​ಗೆ 2 ವಿಕೆಟ್ ಕಬಳಿಸಿದ ನೆರವಿನಿಂದ 1 ಸ್ಥಾನ ಬಡ್ತಿ ಪಡೆದರು. ಟೀಮ್ ರ್ಯಾಂಕಿಂಗ್​ನಲ್ಲಿ ಭಾರತ 2ನೇ ಸ್ಥಾನ ಕಾಯ್ದುಕೊಂಡರೂ, 2 ರ‍್ಯಾಂಕಿಂಗ್ ಪಾಯಿಂಟ್ ಕಳೆದುಕೊಂಡಿದೆ.

ಕುಲದೀಪ್ ಬೌಲಿಂಗ್ ರ್ಯಾಂಕಿಂಗ್​ನಲ್ಲಿ ಅಗ್ರ 10ರೊಳಗಿರುವ ಏಕೈಕ ಭಾರತೀಯರಾಗಿದ್ದಾರೆ. ಕುಲದೀಪ್ 728 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದರೆ, ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್(793) ಅಗ್ರಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಯಜುವೇಂದ್ರ ಚಾಹಲ್ 17ನೇ ಸ್ಥಾನಕ್ಕಿಳಿದರೆ, ವೇಗಿ ಭುವನೇಶ್ವರ್ ಕುಮಾರ್ 18ನೇ ಸ್ಥಾನ ಕಾಯ್ದುಕೊಂಡರು. ಹಲವು ಪಂದ್ಯಗಳಿಂದ ಹೊರಗುಳಿದಿರುವ ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ 26ನೇ ಸ್ಥಾನಕ್ಕಿಳಿದರೆ, ಕೃನಾಲ್ ಪಾಂಡ್ಯ 39 ಸ್ಥಾನಗಳ ಬಡ್ತಿಯೊಂದಿಗೆ 58ನೇ ಸ್ಥಾನಕ್ಕೇರಿದ್ದಾರೆ. ಖಲೀಲ್ ಅಹ್ಮದ್ 93ನೇ ಸ್ಥಾನಕ್ಕೇರಿದರು.

ಭಾರತ(124 ಅಂಕ) ತಂಡ ಕಿವೀಸ್ ಎದುರು ಸರಣಿ ಸೋತ ಹಿನ್ನಡೆಯಿಂದಾಗಿ 2 ರ‍್ಯಾಂಕಿಂಗ್ ಪಾಯಿಂಟ್ ಕಳೆದುಕೊಂಡಿದೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪಾಕಿಸ್ತಾನ(135) ಕೂಡ ಸರಣಿ ಸೋತಿದ್ದರಿಂದ 3 ಪಾಯಿಂಟ್ ಕಳೆದುಕೊಂಡರೂ, ನಂ.1 ಸ್ಥಾನ ಕಾಯ್ದುಕೊಂಡಿದೆ. ದಕ್ಷಿಣ ಆಫ್ರಿಕಾ (118) 3ನೇ ಸ್ಥಾನದಲ್ಲಿದೆ.

7ಕ್ಕೇರಿದ ರೋಹಿತ್, 19ಕ್ಕಿಳಿದ ವಿರಾಟ್

ರೋಹಿತ್ ಶರ್ಮ 3 ಸ್ಥಾನಗಳ ಬಡ್ತಿಯೊಂದಿಗೆ 7ನೇ ಸ್ಥಾನಕ್ಕೇರಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಿವೀಸ್ ಎದುರಿನ ಸರಣಿ ಆಡದ ಹಿನ್ನಡೆಯಿಂದ 4 ಸ್ಥಾನ ಕೆಳಗಿಳಿಯುವ ಮೂಲಕ ಜಿಂಬಾಬ್ವೆಯ ಹ್ಯಾಮಿಲ್ಟನ್ ಮಸಕಜ ಜತೆ 19ನೇ ಸ್ಥಾನ ಹಂಚಿಕೊಂಡಿದ್ದಾರೆ. ಶಿಖರ್ ಧವನ್ 11ನೇ ಸ್ಥಾನಕ್ಕೇರಿದರೆ, ಸರಣಿಯಲ್ಲಿ ಆಡದ ಕೆಎಲ್ ರಾಹುಲ್ 3 ಸ್ಥಾನ ಕುಸಿದು 10ನೇ ಸ್ಥಾನಕ್ಕಿಳಿದಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಅಗ್ರಸ್ಥಾನದಲ್ಲಿದ್ದಾರೆ.