ದಕ್ಷಿಣ ಆಫ್ರಿಕಾ ಆಟಗಾರನನ್ನು ನಿಂದಿಸಿದ್ದ ಪಾಕ್​ ನಾಯಕನಿಗೆ ಐಸಿಸಿಯಿಂದ ಅಮಾನತು ಶಿಕ್ಷೆ

ಜೋಹಾನ್ಸ್​ಬರ್ಗ್​: ಜನಾಂಗಿಯ ನಿಂದನೆ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಅಹ್ಮದ್​ ಅವರನ್ನು ಮುಂದಿನ ನಾಲ್ಕು ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ICC) ಅಮಾನತುಗೊಳಿಸಿದೆ. ಈ ವಿಷಯವನ್ನು ಪಾಕ್​ ಕ್ರಿಕೆಟ್​ ಬೋರ್ಡ್​ ಭಾನುವಾರ ಖಚಿತ ಪಡಿಸಿದೆ.

ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಆಟಗಾರ ಆಂಡಿಲೆ ಫೆಹ್ಲುಕ್ವೇವೊ ವಿರುದ್ಧ ಸರ್ಫರಾಜ್​ ಅಹ್ಮದ್​ ಜನಾಂಗಿಯ ನಿಂದನೆ ಮಾಡಿದ್ದರು. ವರ್ಣಭೇದ ವಿರೋಧ ನೀತಿಯ ಉಲ್ಲಂಘನೆ ಎಂದು ಪರಿಗಣಿಸಿರುವ ಐಸಿಸಿ ಅಮಾನತುಗೊಳಿಸಿದೆ.

ವರ್ಣಭೇದ ವಿರೋಧ ನೀತಿಯ ನಿಯಮ
ಆಟಗಾರ, ಆಟಗಾರನಿಗೆ ಬೆಂಬಲ ನೀಡುವ ಸಿಬ್ಬಂದಿ, ಅಂಪೈರ್​, ಅಂಪೈರ್​ಗೆ ಬೆಂಬಲ ನೀಡುವ ಸಿಬ್ಬಂದಿ, ಮ್ಯಾಚ್​ ರೆಫ್ರಿ ಹಾಗೂ ಇತರೆ ಯಾವುದೇ ವ್ಯಕ್ತಿಯು (ಪ್ರೇಕ್ಷಕರನ್ನು ಒಳಗೊಂಡಂತೆ) ಜನಾಂಗ, ಧರ್ಮ, ಸಂಸ್ಕೃತಿ, ಬಣ್ಣ, ರಾಷ್ಟ್ರೀಯ ಅಥವಾ ಜನಾಂಗೀಯ ಮೂಲದ ಆಧಾರದ ಮೇಲೆ ಮತ್ತೊಬ್ಬ ವ್ಯಕ್ತಿಯನ್ನು ಅವಮಾನ ಮಾಡುವುದು, ಭಯಪಡಿಸುವುದು, ಬೆದರಿಸುವುದು, ಅಸಮಾಧಾನಗೊಳಿಸುವುದು ಅಥವಾ ದುರ್ಬಲಗೊಳಿಸುವ ಯಾವುದೇ ನಡವಳಿಕೆಯು (ಭಾಷೆ, ಸನ್ನೆ ಅಥವಾ ಇನ್ನಿತರ ಬಳಕೆಯ ಮೂಲಕ) ಅಪರಾಧವೆಂಬುದು ವರ್ಣಭೇದ ವಿರೋಧ ನೀತಿಯಲ್ಲಿದೆ.

ಅಮಾನತು ಶಿಕ್ಷೆಗೆ ಗುರಿಯಾಗಿರುವ ಸರ್ಫರಾಜ್​ ಖಾನ್​ ಅವರು ಶಿಕ್ಷೆಯ ಜತೆಗೆ ತಾವು ಮಾಡಿದ ಅಪರಾಧದ ಕುರಿತು ಜಾಗೃತಿ ಮೂಡಿಸಲು ಶಿಕ್ಷಣ ಕಾರ್ಯಕ್ರಮವನ್ನು ಮಾಡಬೇಕಾಗಿದೆ.

ಘಟನೆ ಹಿನ್ನೆಲೆ ಏನು?
ಕಳೆದ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಸರ್ಫರಾಜ್​ ಅಹ್ಮದ್​, ಆಂಡಿಲೆ ವಿರುದ್ಧ ಜನಾಂಗಿಯ ನಿಂದನೆ ಮಾಡಿದ್ದರು. ಪಾಕ್​ ನೀಡಿದ್ದ ಗುರಿಯನ್ನು ಬೆನ್ನಟ್ಟುವ ವೇಳೆ 37ನೇ ಓವರ್​ನಲ್ಲಿ ಮಾಡಿದ್ದ ನಿಂದನೆ ಸ್ಟಂಪ್​​ನಲ್ಲಿರುವ ಮೈಕ್​ನಲ್ಲಿ ರೆಕಾರ್ಡ್​ ಆಗಿತ್ತು. ಉರ್ದು ಭಾಷೆಯಲ್ಲಿ ಮಾಡಿದ ನಿಂದನೆಯನ್ನು ಅನುವಾದಿಸಿದಾಗ ಹೇ ಕಪ್ಪು ಹುಡುಗನೇ, ಇಂದು ನಿಮ್ಮ ತಾಯಿ ಯಾವ ಜಾಗದಲ್ಲಿ ಕುಳಿತಿದ್ದಾರೆ? ನಿನಗಾಗಿ ಏನನ್ನು ಪಾರ್ಥಿಸಲು ಅವರಿಗೆ ಹೇಳಿದ್ದೀಯ? ಎಂಬುದಾಗಿತ್ತು.

ಇದನ್ನು ಗಮನಿಸಿದ ಮ್ಯಾಚ್​ ರೆಫ್ರಿ ಪಾಕ್​ ನಾಯಕನನ್ನು ಕರೆದು ಈ ವಿಚಾರವಾಗಿ ಪ್ರಶ್ನಿಸಿದ್ದರು. ಈ ವಿಚಾರ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮೊನ್ನೆ(ಶುಕ್ರವಾರ) ಸರ್ಫರಾಜ್​, ಆಂಡಿಲೆ ಬಳಿ ಕ್ಷಮೆಯಾಚಿಸಿದ್ದರು. ಸದ್ಯ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದ ಪಾಕ್​​​ ನಾಯಕತ್ವವನ್ನು ಶೋಯೇಬ್​ ಮಲ್ಲಿಕ್​ಗೆ ವಹಿಸಲಾಗಿದೆ.(ಏಜೆನ್ಸೀಸ್​)