ಪಾಕ್ ಮಂಡಳಿ ಎದುರು ಗೆದ್ದ ಬಿಸಿಸಿಐ

ದುಬೈ/ಕರಾಚಿ: ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಲು ಭಾರತ ಒಪ್ಪದಿರುವ ಕಾರಣ ಬಿಸಿಸಿಐನಿಂದ 447 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀವ್ರ ಮುಖಭಂಗ ಎದುರಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಐಸಿಸಿಯ ವಿವಾದ ಇತ್ಯರ್ಥ ಸಮಿತಿ, ಬಿಸಿಸಿಐ ವಾದವನ್ನು ಒಪ್ಪಿಕೊಂಡು, ಪಿಸಿಬಿ ಮನವಿಯನ್ನು ತಿರಸ್ಕರಿಸಿದೆ.

ಕಳೆದ ಅ. 1ರಿಂದ 3ರವರೆಗೆ ದುಬೈನ ಮುಖ್ಯ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದ ಐಸಿಸಿಯ ತ್ರಿಸದಸ್ಯ ಸಮಿತಿ, ಮಂಗಳವಾರ 26 ಪುಟಗಳ ತೀರ್ಪು ಪ್ರಕಟಿಸಿದೆ. ಪಿಸಿಬಿಗೆ ಬಿಸಿಸಿಐ ಯಾವುದೇ ಪರಿಹಾರ ನೀಡಬೇಕಾಗಿಲ್ಲ ಮತ್ತು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಸರ್ಕಾರದ ಅನುಮತಿ ಸಿಕ್ಕರೆ ಮಾತ್ರ ಪಾಕಿಸ್ತಾನ ವಿರುದ್ಧ ಸರಣಿ ಆಡುವ ಬಗ್ಗೆಯೂ ಒಪ್ಪಂದವಾಗಿತ್ತು ಎಂಬ ಬಿಸಿಸಿಐ ವಾದಕ್ಕೆ ಗೆಲುವು ಸಿಕ್ಕಿದೆ. ಎಂಒಯು ದ್ವಿಪಕ್ಷೀಯ ಸರಣಿ ಆಡುವ ಪ್ರಸ್ತಾಪ ಮಾತ್ರ ಆಗಿತ್ತು. ಬದ್ಧವಾಗಿರಬೇಕಾದ ಒಪ್ಪಂದವಾಗಿರಲಿಲ್ಲ ಎಂಬ ಬಿಸಿಸಿಐ ವಾದವನ್ನೂ ಐಸಿಸಿ ಒಪ್ಪಿಕೊಂಡಿದೆ. ಪ್ರಕರಣದಲ್ಲಿ ಭಾರತದ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಕೂಡ ಪಾಟಿಸವಾಲು ಎದುರಿಸಿದ್ದರು. ಈ ವೇಳೆ ಅವರು, ಭದ್ರತಾ ಕಳವಳದಿಂದಾಗಿ ಪಾಕ್ ಜತೆ ಸರಣಿ ಆಡದಿರುವ ಭಾರತದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಮಂಡಳಿಯ ಕಾನೂನು ತಂಡಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ. ಅತ್ತ, ತೀರ್ಪಿಗೆ ನಿರಾಸೆ ವ್ಯಕ್ತಪಡಿಸಿರುವ ಪಿಸಿಬಿ, ಮುಂದಿನ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.

ಏನಿದು ಪ್ರಕರಣ?

ಭಾರತ-ಪಾಕ್ ಕ್ರಿಕೆಟ್ ಮಂಡಳಿಗಳು 2014ರಲ್ಲಿ ಸಹಿ ಹಾಕಿರುವ ಎಂಒಯು ಪ್ರಕಾರ, 2015ರಿಂದ 2023ರವರೆಗೆ ಉಭಯ ದೇಶಗಳು 6 ದ್ವಿಪಕ್ಷೀಯ ಸರಣಿಗಳನ್ನು ಆಡಬೇಕಿತ್ತು. ಆದರೆ ಉಭಯ ದೇಶಗಳ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಕೇಂದ್ರ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಬಿಸಿಸಿಐ ಯಾವುದೇ ಸರಣಿಗೆ ಸಮ್ಮತಿಸಿರಲಿಲ್ಲ.

ವೆಚ್ಚ ಕೇಳಲಿದೆ ಬಿಸಿಸಿಐ!

ಪ್ರಕರಣದಲ್ಲಿ ಗೆದ್ದ ಮಾತ್ರಕ್ಕೆ ಸುಮ್ಮನಾಗದ ಬಿಸಿಸಿಐ, ಕಾನೂನು ಹೋರಾಟಕ್ಕೆ ತಾನು ಮಾಡಿರುವ ಖರ್ಚನ್ನು ಪಿಸಿಬಿಯೇ ಭರಿಸಬೇಕೆಂದು ಪ್ರತಿಹೋರಾಟ ನಡೆಸಲಿದೆ. ಐಸಿಸಿಯ ವಿವಾದ ಇತ್ಯರ್ಥ ಪ್ರಕರಣಗಳ ನಿಯಮದ ಅನ್ವಯ, ಗೆದ್ದವರು ಸೋತವರಿಂದಲೇ ಕಾನೂನು ಹೋರಾಟದ ವೆಚ್ಚ ಕೇಳಲು ಅವಕಾಶವಿದೆ. -ಪಿಟಿಐ