ಐಸಿಸಿ ಕ್ರಿಕೆಟ್​ ಹಾಲ್​ ಆಫ್​ ಫೇಮ್​ಗೆ ಭಾರತದ ರಾಹುಲ್​ ದ್ರಾವಿಡ್​ ನೇಮಕ

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​​, ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್​ ರಿಕ್ಕಿ ಪಾಂಟಿಂಗ್​ ಹಾಗೂ ಇಂಗ್ಲೆಂಡ್​ ಮಹಿಳಾ ಕ್ರಿಕೆಟ್​ ತಂಡದ ನಿವೃತ್ತ ವಿಕೆಟ್​ ಕೀಪರ್​ ಕ್ಲೇರ್​ ಟೇಲರ್​ ಅವರು ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ ಗೆ ಸದಸ್ಯರಾಗಿ ನೇಮಕವಾಗಿದ್ದಾರೆ.

ಭಾನುವಾರ ಡಬ್ಲಿನ್ ನಲ್ಲಿ ನಡೆದ ಸಮಾರಂಭದಲ್ಲಿ ಈ ನೇಮಕ ಮಾಡಲಾಗಿದ್ದು, ರಾಹುಲ್​ ದ್ರಾವಿಡ್​ ಭಾರತದಿಂದ ಆಯ್ಕೆಯಾಗುತ್ತಿರುವ ಐದನೇ ಆಟಗಾರರಾಗಿದ್ದಾರೆ. ರಿಕ್ಕಿ ಪಾಂಟಿಂಗ್​ ಆಸ್ಟ್ರೇಲಿಯಾದ 25ನೇ ಹಾಗೂ ಟೇಲರ್​ ಅವರು ಇಂಗ್ಲೆಂಡ್​ನಿಂದ ನೇಮಕವಾದ ಮೂರನೇ ಆಟಗಾರರಾಗಿದ್ದು, ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಆಯ್ಕೆಯಾದ ಏಳನೇ ಮಹಿಳಾ ಆಟಗಾರರಾಗಿದ್ದಾರೆ.

ಐಸಿಸಿ ಕ್ರಿಕೆಟ್​ ಹಾಲ್​ ಆಫ್​ ಫೇಮ್​ನ ಮಾಜಿ ಸದಸ್ಯರು ಈ ಮೂವರನ್ನು ಆಯ್ಕೆ ಮಾಡಿದ್ದಾರೆ. ಕ್ರಿಕೆಟ್​ನಲ್ಲಿ ಶ್ರೇಷ್ಠರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಹಾಲ್​ ಆಫ್​ ಫೇಮ್​ ಮೂಲಕ ಮಾಡಲಾಗುವುದು. ಇಡೀ ಜಗತ್ತು ಮೆಚ್ಚಿದ ಆಟಗಾರರನ್ನು ಇಲ್ಲಿ ಆಯ್ಕೆ ಮಾಡಲಾಗುತ್ತದೆ. ರಾಹುಲ್​, ರಿಕ್ಕಿ, ಹಾಗೂ ಕ್ಲೇರ್​ ಅವರು ಕ್ರಿಕೆಟ್​ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದು, ಅವರನ್ನು ಹಾಲ್​ ಆಫ್​ ಫೇಮ್​ಗೆ ಸ್ವಾಗತಿಸುತ್ತೇನೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೆವಿಡ್​ ರಿಚರ್ಡ್​ಸನ್​ ಹೇಳಿದ್ದಾರೆ.

ತಮ್ಮನ್ನು ಹಾಲ್​ ಆಫ್​ ಹಾನರ್​ಗೆ ನೇಮಕ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರಾಹುಲ್​ ದ್ರಾವಿಡ್​, ಐಸಿಸಿ ಹಾಲ್​ ಆಫ್​ ಫೇಮ್​ನ ಲಿಸ್ಟ್‌ನಲ್ಲಿ ಹೆಸರು ಇರುವುದೇ ಹೆಮ್ಮೆಯ ವಿಷಯ. ಹಾಲ್​ ಆಫ್​ ಫೇಮ್​ನಿಂದ ಗುರುತಿಸಿಕೊಳ್ಳುವುದು ಪ್ರತಿ ಆಟಗಾರನ ವೃತ್ತಿಜೀವನದ ಕನಸಾಗಿರುತ್ತದೆ. ನನಗೆ ಅದು ಸಿಕ್ಕಿದ್ದು ತುಂಬ ಸಂತೋಷದ ಸಂಗತಿ ಎಂದಿದ್ದಾರೆ.