More

    ಕ್ರಿಕೆಟ್​ನಲ್ಲಿ ಇನ್ನು ಸಮಯ ಪಾಲನೆ ಕಟ್ಟುನಿಟ್ಟು; ಐಸಿಸಿಯಿಂದ ಹೊಸ ನಿಯಮ ಜಾರಿ; 3ನೇ ಬಾರಿ ಎಡವಟ್ಟಾದರೆ 5 ರನ್​ ಪೆನಾಲ್ಟಿ!

    ಅಹಮದಾಬಾದ್​: ಅಂತಾರಾಷ್ಟ್ರೀಯ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಸಮಯ ಪಾಲನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ (ಐಸಿಸಿ) ಕಟ್ಟುನಿಟ್ಟಿನ “ಸ್ಟಾಪ್​ ಕ್ಲಾಕ್​’ ನಿಯಮವನ್ನು ಜಾರಿಗೆ ತಂದಿದೆ. ಇದರನ್ವಯ ಬೌಲಿಂಗ್​ ಮಾಡುವ ತಂಡ ಇನಿಂಗ್ಸ್​ ಒಂದರಲ್ಲಿ ಮುಂದಿನ ಓವರ್​ ಆರಂಭಿಸಲು 60 ಸೆಕೆಂಡ್​ ಸಮಯದ ಮಿತಿಯನ್ನು 3 ಬಾರಿ ಮೀರಿದರೆ 5 ರನ್​ಗಳ ದಂಡ ಶಿಕ್ಷೆಗೆ ಗುರಿಯಾಗಲಿದೆ. ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಮುಂದಿನ ಡಿಸೆಂಬರ್​ನಿಂದ 2024ರ ಏಪ್ರಿಲ್​ ತನಕ ಪ್ರಾಯೋಗಿಕವಾಗಿ ಈ ನಿಯಮ ಜಾರಿಗೆ ಬರಲಿದೆ.

    ವಿಶ್ವಕಪ್​ ಮುಕ್ತಾಯದ ಬಳಿಕ ಅಹಮದಾಬಾದ್​ನಲ್ಲೇ ಮಂಗಳವಾರ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯದ ವೇಗವನ್ನು ಸುಧಾರಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

    ಡಿಸೆಂಬರ್​ನಿಂದ ಏಕದಿನ ಮತ್ತು ಟಿ20 ಪಂದ್ಯಗಳ ವೇಳೆ ಓವರ್​ ನಡುವೆ ಸ್ಟಾಪ್​ ಕ್ಲಾಕ್​ ಬಳಕೆಯಾಗಲಿದೆ. ಒಂದು ಓವರ್​ ಮುಗಿದ ಬಳಿಕ ಒಂದು ನಿಮಿಷದೊಳಗೆ ಮುಂದಿನ ಓವರ್​ ಶುರುವಾಗಬೇಕು. ಇನಿಂಗ್ಸ್​ವೊಂದರಲ್ಲಿ 60 ಸೆಕೆಂಡ್​ನೊಳಗೆ ಮುಂದಿನ ಓವರ್​ ಆರಂಭಿಸಲು 3 ಬಾರಿ ವಿಫಲವಾದರೆ, ಬೌಲಿಂಗ್​ ತಂಡ 5 ರನ್​ಗಳ ಪೆನಾಲ್ಟಿ ತೆರಬೇಕಾಗುತ್ತದೆ. 6 ತಿಂಗಳ ಟ್ರಯಲ್​ ಬಳಿಕ ಈ ನಿಯಮದ ಬಗ್ಗೆ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.

    ಓವರ್​ರೇಟ್​ ಸುಧಾರಣೆಗೆ ಐಸಿಸಿ 2022ರಲ್ಲೇ ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಕೆಲ ನಿಯಮಗಳನ್ನು ತಂದಿತ್ತು. ಅದರನ್ವಯ ಫೀಲ್ಡಿಂಗ್​ ತಂಡ ಆ ಇನಿಂಗ್ಸ್​ಗೆ ನೀಡಲಾದ ನಿಗದಿತ ಸಮಯದೊಳಗೆ ಅಂತಿಮ ಓವರ್​ ಆರಂಭಿಸದಿದ್ದರೆ, ಉಳಿದ ಎಸೆತ-ಓವರ್​ ಪೂರ್ತಿ 30 ಯಾರ್ಡ್​ ಸರ್ಕಲ್​ ಹೊರಗಿನ ಓರ್ವ ಫೀಲ್ಡರ್​ ಕಡಿತಗೊಳಿಸಲಾಗುತ್ತದೆ. ಇದೀಗ “ಸ್ಟಾಪ್​ ಕ್ಲಾಕ್​’ ಮೂಲಕ ಸಮಯ ಪಾಲನೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ.

    ಬ್ಯಾಟರ್​ಗಳ ಸಮಯ ಪಾಲನೆಗಾಗಿ ಈಗಾಗಲೆ ಟೈಮ್ಡ್​ ಔಟ್​ ನಿಯಮವಿದೆ. ಇದರನ್ವಯ ಬ್ಯಾಟರ್​ ಓರ್ವ ಔಟಾದ ಬಳಿಕ ಹೊಸ ಬ್ಯಾಟರ್​ ಬ್ಯಾಟಿಂಗ್​ಗೆ ಸಿದ್ಧಗೊಳ್ಳಲು 2 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಇತ್ತೀಚೆಗೆ ವಿಶ್ವಕಪ್​ನಲ್ಲಿ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್​ ಇದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡ ಕಾರಣ “ಟೈಮ್ಡ್​ ಔಟ್​’ ಆಗಿದ್ದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬ್ಯಾಟರ್​ ಓರ್ವ ಈ ರೀತಿಯಾಗಿ ಔಟಾದ ಮೊದಲ ದೃಷ್ಟಾಂತವೂ ಆಗಿತ್ತು.

    ಟೆನಿಸ್​ ಶಾಟ್​ ಕ್ಲಾಕ್​ ಸ್ಫೂರ್ತಿ!
    ಕ್ರಿಕೆಟ್​ನಲ್ಲಿ ಓವರ್​ ನಡುವೆ ಜಾರಿಗೆ ತರಲಾಗಿರುವ “ಸ್ಟಾಪ್​ ಕ್ಲಾಕ್​’ ನಿಯಮಕ್ಕೆ ಟೆನಿಸ್​ನಲ್ಲಿರುವ “ಶಾಟ್​ ಕ್ಲಾಕ್​’ ನಿಯಮ ಸ್ಫೂರ್ತಿಯಾಗಿದೆ. ಟೆನಿಸ್​ನಲ್ಲಿ ಆಟಗಾರರು ಅಂಕಗಳ ನಡುವೆ ಮುಂದಿನ ಸರ್ವ್​ಗೆ ಸಿದ್ಧರಾಗಲು 25 ಸೆಕೆಂಡ್​ಗಳ “ಶಾಟ್​ ಕ್ಲಾಕ್​’ ಇರುತ್ತದೆ. ಕ್ರಿಕೆಟ್​ನಲ್ಲೂ ಓವರ್​ರೇಟ್​ ಸುಧಾರಣೆಗೆ ಇಂಥ ನಿಯಮದ ಅಗತ್ಯವಿದೆ ಎಂದು ಎಂಸಿಸಿಯ ವಿಶ್ವ ಕ್ರಿಕೆಟ್​ ಸಮಿತಿ ಶಿಫಾರಸು ಮಾಡಿತ್ತು.

    ವಿಶ್ವಕಪ್​ ಫೈನಲ್​ನಲ್ಲಿ ಭಾರತ ಎಡವಿದ್ದೆಲ್ಲಿ? ಇದು ಕೆಟ್ಟ ದಿನವೇ, ಕೆಟ್ಟ ತಂಡವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts