ಬೌಂಡರಿ ಕೌಂಟ್​ಗೆ ಕ್ರಿಕೆಟ್ ವಲಯ ಕಿಡಿ: ಐಸಿಸಿಯ ವಿವಾದಿತ ನಿಯಮಕ್ಕೆ ಟೀಕಾ ಪ್ರಹಾರ, ಜಂಟಿ ಚಾಂಪಿಯನ್ ಘೋಷಿಸದ ಬೇಸರ

ಬೆಂಗಳೂರು: ಅಲ್ಲೊಂದು ಗೆಲುವಿತ್ತು, ಆದರೆ, ಸೋತವರೇ ಇರಲಿಲ್ಲ. ಜಗತ್ತನ್ನೇ ಹಿಮ್ಮೆಟ್ಟಿಸಿ ವಿಶ್ವ ಚಾಂಪಿಯನ್ ಆದ ತಂಡವಿತ್ತು, ಆದರೆ, ಸೋತ ತಂಡವನ್ನು ಗುರುತಿಸುವುದೇ ಕಷ್ಟವಾಗಿತ್ತು. ಹಾಗಿದ್ದರೂ, 12ನೇ ಆವೃತ್ತಿಯ ಕ್ರಿಕೆಟ್ ವಿಶ್ವಕಪ್​ನ ಫೈನಲ್ ಪಂದ್ಯ ಅಭಿಮಾನಿಗಳಿಗೆ ಇನ್ನಿಲ್ಲದ ರೋಚಕತೆ, ಗೊಂದಲ, ಕೋಪ, ಸಂಭ್ರಮ/ನಿರಾಸೆ ನೀಡಿದೆ. ಬರೋಬ್ಬರಿ 612 ಎಸೆತಗಳ ಕಾದಾಟದಲ್ಲೂ ಅಲ್ಲಿ ಗೆದ್ದ ತಂಡದ ಕುರುಹು ಇರಲಿಲ್ಲ. ಆದರೆ, ಒಂದು ತಂಡ ಕಪ್ ಗೆದ್ದು ಸಂಭ್ರಮಿಸಿದರೆ, ಇನ್ನೊಂದು ತಂಡ ಇಡೀ ಕ್ರಿಕೆಟ್ ವಲಯದ ಗೌರವ ಹಾಗೂ ಅನುಕಂಪಕ್ಕೆ ಪಾತ್ರವಾಗಿತ್ತು. ಐಸಿಸಿಯ ವಿವಾದಿತ ‘ಬೌಂಡರಿ ಕೌಂಟ್’ ನಿಯಮದ ಅನುಸಾರ ಫಲಿತಾಂಶ ನಿರ್ಧಾರಗೊಂಡ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದ ಸಾರಾಂಶವಿದು.

ಕ್ರಿಕೆಟ್ ಎನ್ನುವ ಕ್ರೀಡೆ ನಾಳೆಯೇ ಜಗತ್ತಿನ ಕ್ರೀಡಾಲೋಕದಿಂದ ಕಣ್ಮರೆಯಾದರೂ, ಜೀವನ ಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಪಂದ್ಯವನ್ನು ಕ್ರಿಕೆಟ್ ನೀಡಿದೆ. ಕ್ರಿಕೆಟ್​ನಲ್ಲಿ ಈವರೆಗೂ 4,045 ಏಕದಿನ ಪಂದ್ಯಗಳಾಗಿವೆ, 37 ಟೈ ಪಂದ್ಯಗಳು ನಡೆದಿದೆ. 445 ವಿಶ್ವಕಪ್ ಪಂದ್ಯಗಳಲ್ಲಿ 4 ಟೈ ಪಂದ್ಯಗಳಿವೆ. ಹಾಗಿದ್ದರೂ, ರೋಚಕತೆಯಲ್ಲಿ 2019ರ ವಿಶ್ವಕಪ್ ಫೈನಲ್​ನ ಸಮಕ್ಕೂ ಯಾವ ಪಂದ್ಯಗಳೂ ನಿಲ್ಲಲಾರವು.

ಕ್ರಿಕೆಟ್​ನಲ್ಲಿ ಯಾವುದನ್ನೂ ಅಂದಾಜಿಸಲಾಗದು, ಯಾವ ನಿರೀಕ್ಷೆ, ಇತಿಹಾಸ ಯಾವುದೂ ಆಯಾ ದಿನದಲ್ಲಿ ಆಡುವ ವೇಳೆ ಗಣನೆಗೆ ಬರುವುದಿಲ್ಲ. ಆದರೆ, ಒಂದೊಂದು ದಿನ ಬರುತ್ತದೆ. ಅಂದು ಯಾವ ತಂಡ ಕೂಡ ಸೋಲಿಗೆ ಅರ್ಹವಾಗಿರುವುದಿಲ್ಲ. ಅಂಥದ್ದೊಂದು ವಿಶೇಷ ದಿನ ಕಳೆದ ಭಾನುವಾರವಾಗಿತ್ತು. ಇಂಗ್ಲೆಂಡ್ ಈ ಪಂದ್ಯಕ್ಕೂ ಮುನ್ನ 8 ಬಾರಿ ಟೈ ಫಲಿತಾಂಶದಲ್ಲಿ ಭಾಗಿಯಾಗಿದ್ದರೆ, ನ್ಯೂಜಿಲೆಂಡ್ 7 ಬಾರಿ ಸಮಬಲದ ಪಂದ್ಯವಾಡಿತ್ತು. ಇವೆರಡು ತಂಡಗಳೂ ಮುಖಾಮುಖಿಯಾಗಿದ್ದಾಗ 3 ಪಂದ್ಯ ಟೈ ಆಗಿತ್ತು. ಆದರೆ, ಸೂಪರ್ ಓವರ್​ನಲ್ಲೂ ಟೈ ಆಗಿ, ಬೌಂಡರಿ ಮೂಲಕ ಫಲಿತಾಂಶ ದಾಖಲಾದ, ಅದರಲ್ಲೂ ವಿಶ್ವ ಚಾಂಪಿಯನ್ ಪಟ್ಟ ನಿರ್ಣಯವಾದ ಗಳಿಗೆ ಕ್ರಿಕೆಟ್ ಚರಿತ್ರೆಯಲ್ಲಿ ಮಹಾ ನೆನಪಾಗಿ ಶಾಶ್ವತವಾಗಿ ಉಳಿದುಕೊಳ್ಳಲಿದೆ.

ಜುಲೈ 14ರ ದಿನ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಎರಡೂ ತಂಡಗಳು ಚಾಂಪಿಯನ್ ಪಟ್ಟಕ್ಕೆ ಅರ್ಹವಾಗಿದ್ದವು. ಆದರೆ, ಕೇವಲ ಬೌಂಡರಿಗಳ ಲೆಕ್ಕಾಚಾರದಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ನಿರ್ಣಯ ಮಾಡಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಪಂದ್ಯ ಹಾಗೂ ಸೂಪರ್ ಓವರ್ ಟೈ ಆದಾಗ ಎರಡೂ ತಂಡಗಳನ್ನು ‘ಜಂಟಿ ಚಾಂಪಿಯನ್’ ಎಂದು ಘೋಷಿಸಬೇಕಿತ್ತು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಅದರೊಂದಿಗೆ ಐಸಿಸಿ ತನ್ನ ವಿವಾದಿತ ‘ಬೌಂಡರಿ ಕೌಂಟ್’ ನಿಯಮವನ್ನು ಕ್ರಿಕೆಟ್ ನಿಯಮಗಳಿಂದ ಕಿತ್ತುಹಾಕಬೇಕು ಎನ್ನುವ ಆಗ್ರಹವೂ ಜೋರಾಗಿದೆ.

2019ರ ವಿಶ್ವಕಪ್​ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿರುವ ಟೀಮ್ ಇಂಡಿಯಾ ಬ್ಯಾಟ್ಸ್​ಮನ್ ರೋಹಿತ್ ಶರ್ಮ, ‘ಕ್ರಿಕೆಟ್​ನ ಕೆಲವೊಂದು ನಿಯಮಗಳ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಿದೆ’ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದರೆ, 2011ರಲ್ಲಿ ಭಾರತ ತಂಡ ವಿಶ್ವಕಪ್ ಫೈನಲ್ ಗೆಲ್ಲುವ ವೇಳೆ ಸಾಹಸಿಕ ಇನಿಂಗ್ಸ್ ಆಡಿದ್ದ ಗೌತಮ್ ಗಂಭೀರ್ ಕೂಡ ಇದೇ ಮಾತನ್ನು ಹೇಳಿದ್ದಾರೆ.

‘ಇಂಥದ್ದೊಂದು ಪಂದ್ಯ ವಿಶ್ವಕಪ್ ಫೈನಲ್ ಪಂದ್ಯವನ್ನು ಗರಿಷ್ಠ ಬೌಂಡರಿ ಬಾರಿಸಿದ ಆಧಾರದ ಮೇಲೆ ನಿರ್ಣಯ ಮಾಡುವುದೇ ನನಗೆ ಅರ್ಥವಾಗುವುದಿಲ್ಲ. ಇದೊಂದು ಐಸಿಸಿಯ ಹಾಸ್ಯಾಸ್ಪದ ನಿಯಮ. ಇದನ್ನು ಟೈ ಎಂದು ಪರಿಗಣಿಸಬೇಕಿತ್ತು. ಎರಡೂ ತಂಡಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ‘ತುಂಬಾ ಉತ್ತಮ ಕೆಲಸ ಐಸಿಸಿ, ನೀವು ಹಾಸ್ಯದ ವಸ್ತು ಆಗಿದ್ದೀರಿ’ ಎಂದು ಕಿವೀಸ್​ನ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರೀಸ್ ಬೇಸರದಿಂದ ಟ್ವೀಟ್ ಮಾಡಿದ್ದಾರೆ. ಈವರೆಗೂ ಕ್ರಿಕೆಟ್​ನ ಅತ್ಯಂತ ವಿವಾದಿತ ನಿಯಮ ಎನ್ನಲಾಗುವ ಡಕ್​ವರ್ತ್-ಲೂಯಿಸ್-ಸ್ಟರ್ನ್ ನಿಯಮ, ಎಷ್ಟು ರನ್ ಬಾರಿಸಿದ್ದಾರೆ ಹಾಗೂ ಎಷ್ಟು ವಿಕೆಟ್ ಉರುಳಿದೆ ಎನ್ನುವುದರ ಮೇಲೆ ನಿರ್ಧಾರ ಆಗುತ್ತದೆ. ಆದರೆ, ಫೈನಲ್ ಪಂದ್ಯವೊಂದು ಗರಿಷ್ಠ ಬೌಂಡರಿ ಬಾರಿಸಿದ ಆಧಾರದಲ್ಲಿ ನಿರ್ಧಾರವಾಗಿರುವುದು ಅಚ್ಚರಿ ತಂದಿದೆ. ನನ್ನ ಪ್ರಕಾರ ಇದು ನ್ಯಾಯೋಚಿತವಲ್ಲ ಎಂದು ಆಸೀಸ್ ಮಾಜಿ ಆಟಗಾರ ಡೀನ್ ಜೋನ್ಸ್ ಹೇಳಿದ್ದಾರೆ.

ಮಕ್ಕಳೇ ಕ್ರೀಡೆಗೆ ಬರಬೇಡಿ!

ಸೋಲಿನ ನಿರಾಸೆಯಲ್ಲಿದ್ದ ನ್ಯೂಜಿಲೆಂಡ್ ಆಲ್ರೌಂಡರ್ ಜಿಮ್ಮಿ ನೀಶಾಮ್ ‘ಮಕ್ಕಳೇ, ನೀವೆಂದೂ ಕ್ರೀಡೆಯನ್ನು ಆಯ್ದುಕೊಳ್ಳಬೇಡಿ’ ಎಂದು ಟ್ವೀಟ್ ಮಾಡುವ ಮೂಲಕ ನಿರಾಸೆ ಹೊರಹಾಕಿದ್ದಾರೆ. ‘ಬೇಕರಿ ಅಥವಾ ಇನ್ನಾವುದಾದರನ್ನೂ ಆಯ್ಕೆ ಮಾಡಿಕೊಳ್ಳಿ. 60 ವರ್ಷಕ್ಕೆ ನೆಮ್ಮದಿಯ ಸಾವು ಬರಲಿ’ ಎಂದು ಟ್ವೀಟ್ ಮಾಡಿದ್ದಾರೆ. ಫಲಿತಾಂಶದಿಂದ ನೋವಾಗಿದೆ. ಮುಂದಿನ ಒಂದು ದಶಕದಲ್ಲಿ ಬಹುಶಃ ಒಂದು ಅಥವಾ ಎರಡು ದಿನಗಳಲ್ಲಿ ಮಾತ್ರವೇ ನಾನು ಪಂದ್ಯದ ಕೊನೇ ಅರ್ಧಗಂಟೆಯನ್ನು ನೆನಪು ಮಾಡಿಕೊಳ್ಳುವುದಿಲ್ಲ. ಅಭಿನಂದನೆಗಳು ಇಂಗ್ಲೆಂಡ್, ನೀವು ಅರ್ಹರಾಗಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

ಕೇನ್ ಸೂಪರ್​ಕೂಲ್

ಸೋಲು ಕಾಣದೆ ವಿಶ್ವಕಪ್ ಟ್ರೋಫಿ ತಪ್ಪಿಸಿಕೊಂಡ ನಿರಾಸೆಯಲ್ಲಿದ್ದರೂ, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತಮ್ಮ ಮುಖದಲ್ಲಿ ಬೇಸರದ ಯಾವ ಅಂಶವನ್ನು ತೋರಿಸಿಕೊಳ್ಳಲಿಲ್ಲ. ಪಂದ್ಯದ ಬಳಿಕ ಎಂದಿನ ನಗುಮುಖದಲ್ಲಿಯೇ ರನ್ನರ್​ಅಪ್ ಪದಕವನ್ನು ಸ್ವೀಕರಿಸಿದ ವಿಲಿಯಮ್ಸನ್, ಸುದ್ದಿಗೋಷ್ಠಿಯಲ್ಲೂ ಎಲ್ಲ ಪ್ರಶ್ನೆಗಳಿಗೂ ಯಾವುದೇ ಬೇಸರವಿಲ್ಲದೆ ಉತ್ತರ ನೀಡಿದರು. ಪಂದ್ಯದ ಬಳಿಕ ವಿಲಿಯಮ್ಸನ್ ತೋರಿದ ಬದ್ಧತೆಗೆ ಕ್ರಿಕೆಟ್ ವಲಯದಿಂದಲೂ ದೊಡ್ಡ ಮೆಚ್ಚುಗೆ ವ್ಯಕ್ತವಾಗಿದ್ದು ಮಾತ್ರವಲ್ಲ, ಲಾರ್ಡ್ಸ್​ನಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಜಗತ್ತಿನ ಎಲ್ಲ ಪತ್ರಕರ್ತರು ಎದ್ದು ನಿಂತು ಚಪ್ಪಾಳೆ ತಟ್ಟಿ ವಿಲಿಯಮ್ಸನ್​ರನ್ನು ಗೌರವಿಸಿದರು. ‘ಜಂಟಲ್​ವೆುನ್ ಗೇಮ್ ನಿಜವಾದ ಜಂಟಲ್​ವೆುನ್’, ‘ಸೂಪರ್​ಕೂಲ್ ಕ್ಯಾಪ್ಟನ್’ ಎಂದು ಪತ್ರಕರ್ತರು ಇವರನ್ನು ಬಣ್ಣಿಸಿದ್ದಾರೆ.

ಬೌಂಡರಿ ಕೌಂಟ್ ನಿಯಮದ ಬಗ್ಗೆ ಪ್ರಶ್ನೆ ಎದುರಾದಾಗ, ‘ಬಹುಶಃ ನೀವು ಈ ಪ್ರಶ್ನೆಯನ್ನು ನನಗೆ ಕೇಳುತ್ತೀರಿ ಎಂದು ಅಂದುಕೊಂಡಿರಲಿಲ್ಲ. ನಾನು ಇದಕ್ಕೆ ಉತ್ತರ ನೀಡಬೇಕಾದ ಸಂದರ್ಭವೂ ಇರಲಿದೆ ಎಂದು ನಿರೀಕ್ಷಿಸಿರಲಿಲ್ಲ’ ಎಂದು ನಗುತ್ತಲೇ ಉತ್ತರ ನೀಡಿದರು. ಎರಡೂ ತಂಡಗಳು ಕಪ್​ಗಾಗಿ ದೊಡ್ಡ ಹೋರಾಟ ನಡೆಸಿದ್ದವು. ಆದರೆ, ಈ ಸೋಲು ಅರಗಿಸಿಕೊಳ್ಳುವುದು ಬಹಳ ಕಷ್ಟ. ಭವಿಷ್ಯದ ದಿನಗಳಲ್ಲಿ ಹೇಗೆ ಎಂದು ತಿಳಿದಿಲ್ಲ ಎಂದರು. ಆದರೆ, ಯಾವ ಹಂತದಲ್ಲೂ ನಿಯಮದ ಬಗ್ಗೆ ಪ್ರಶ್ನೆ ಮಾಡುವ ಸಾಹಸಕ್ಕೆ ವಿಲಿಯಮ್ಸನ್ ಇಳಿಯಲಿಲ್ಲ. ‘ಆರಂಭದಿಂದಲೂ ಈ ನಿಯಮವಿದ್ದವು. ಆದರೆ, ತಮ್ಮ ಸಾಹಸಕ್ಕೆ ಈ ರೀತಿಯ ಫಲಿತಾಂಶ ಸಿಗಲಿದೆ ಎಂದು ಯಾರೂ ಯೋಚಿಸಿರಲಿಲ್ಲ. ಕ್ರಿಕೆಟ್​ನ ಶ್ರೇಷ್ಠ ಆಟವಿದು. ನೀವೆಲ್ಲರೂ ಆನಂದಿಸಿದ್ದೀರಿ ಎಂದುಕೊಳ್ಳುತ್ತೇನೆ’ ಎಂದು ತಿಳಿಸಿದರು. ಕ್ರಿಕೆಟ್​ನಲ್ಲಿ ಎಲ್ಲ ಆಟಗಾರರು ನಿಮ್ಮಂತೆ ಜಂಟಲ್​ವೆುನ್​ಗಳಾಗಿ ಇರಲು ಯಾಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ವಿಲಿಯಮ್ಸನ್, ‘ಎಲ್ಲರಿಗೂ ಅವರಂತೆಯೇ ಇರಲು ಅವಕಾಶವಿದೆ. ಈ ಜಗತ್ತಿನ ವಿಶೇಷತೆಯೇ ಅದು. ಹಾಗೆ ಎಲ್ಲರೂ ಕೂಡ ಎಲ್ಲರಿಗಿಂತ ಭಿನ್ನವಾಗಿಯೂ ಇರುತ್ತಾರೆ. ಈ ಪ್ರಶ್ನೆಗೆ ಸದ್ಯದ ಮಟ್ಟಿಗೆ ಉತ್ತರ ನೀಡುವುದು ಕಷ್ಟ. ಇದೇ ನನ್ನ ಅತ್ಯುತ್ತಮ ಉತ್ತರ ಎಂದುಕೊಳ್ಳುತ್ತೇನೆ. ನಿಮ್ಮಂತೆಯೇ ನೀವು ಇರಿ. ನೀವು ಮಾಡುವ ಕೆಲಸವನ್ನು ಮುಕ್ತ ಮನಸ್ಸಿನಿಂದ ಆನಂದಿಸಿರಿ’ ಎಂದು ಹೇಳುತ್ತಿದ್ದಂತೆ ಚಪ್ಪಾಳೆಗಳು ಈ ಮಾತನ್ನು ಸ್ವಾಗತಿಸಿದವು.

ಇವುಗಳು ಈ ಹಿಂದೆಯೇ ಇದ್ದ ನಿಯಮಗಳು. ಇವುಗಳ ಮೇಲೆ ನಮ್ಮ ನಿಯಂತ್ರಣವಿಲ್ಲ. ಆದರೆ, ಸದ್ಯದ ಮಟ್ಟಿಗೆ ಬೇರೆ ಯಾವ ಬದಲಿ ನಿಯಮಗಳೂ ನಮ್ಮ ನಡುವೆ ಇಲ್ಲ.

| ಇವೊಯಿನ್ ಮಾರ್ಗನ್ ಇಂಗ್ಲೆಂಡ್ ನಾಯಕ

ಇಂಥ ಫಲಿತಾಂಶಕ್ಕೆ ನಗುವುದೋ, ಅಳುವುದೋ ಅದು ನಮ್ಮ ಆಯ್ಕೆಗೆ ಬಿಟ್ಟಿದ್ದು. ಆದರೆ, ನನಗೆ ಕೋಪವಂತೂ ಇಲ್ಲ. ಬಹಳ ಬೇಸರವಂತೂ ಆಗಿದೆ. ನಮ್ಮ ಆಟಗಾರರಿಗೂ ಹೀಗೆ ಆಗಿರಬಹುದು. ಬಹುಶಃ ಈ ಫೈನಲ್​ಅನ್ನು ನಮಗಿಂತ ಹೆಚ್ಚಾಗಿ ಇಂಗ್ಲೆಂಡ್​ನವರು ಆನಂದಿಸರಬಹುದು.

| ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ನಾಯಕ

ಪರೇಡ್ ಇಲ್ಲ, ಆಶಸ್ ಸರಣಿಗೆ ಸಿದ್ಧತೆ

ಆಗಸ್ಟ್ 1ರಂದು ಪ್ರತಿಷ್ಠಿತ ಆಶಸ್ ಸರಣಿ ಆರಂಭವಾಗಲಿರುವ ಕಾರಣ ವಿಶ್ವಕಪ್ ವಿಜೇತ ತಂಡದ ಪರೇಡ್ ನಡೆಯುವುದಿಲ್ಲ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಎಜ್​ಬಾಸ್ಟನ್​ನಲ್ಲಿ ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ಎರಡೂವರೆ ವಾರಗಳ ವಿಶ್ರಾಂತಿ ಮಾತ್ರವೇ ಇರಲಿದೆ. ಜುಲೈ 22ರ ಒಳಗಾಗಿ ಆಶಸ್ ತರಬೇತಿ ಶಿಬಿರಕ್ಕೆ ಆಟಗಾರರು ಹಾಜರಿರಬೇಕಿದೆ. ಈ ನಡುವೆ ಐರ್ಲೆಂಡ್ ವಿರುದ್ಧ ಟೆಸ್ಟ್ ಕೂಡ ನಡೆಯಲಿರುವ ಕಾರಣ ಪರೇಡ್ ನಡೆಯುವುದಿಲ್ಲ ಎಂದು ತಿಳಿಸಿದೆ.

ವಿಂಬಲ್ಡನ್​ಗೆ ಹೆಚ್ಚಿನ ವೀಕ್ಷಕರು!

ಭಾನುವಾರ ಒಂದೇ ಅವಧಿಯಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಹಾಗೂ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ವಿಂಬಲ್ಡನ್ ಹೆಚ್ಚಿನ ವೀಕ್ಷಕರನ್ನು ಸಂಪಾದಿಸಿದೆ. ಚಾನೆಲ್ 4 ಹಾಗೂ ಸ್ಕೈ ಸ್ಪೋರ್ಟ್ಸ್​ನಲ್ಲಿ ಪ್ರಸಾರವಾದ ಕ್ರಿಕೆಟ್ ವಿಶ್ವಕಪ್ ಫೈನಲ್​ಅನ್ನು ಇಂಗ್ಲೆಂಡ್​ನಲ್ಲಿ 40 ಲಕ್ಷ ಮಂದಿ ವೀಕ್ಷಿಸಿದ್ದರೆ, ವಿಂಬಲ್ಡನ್ ಫೈನಲ್ ಪಂದ್ಯವನ್ನು 80 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಓವರ್ ಥ್ರೋಗೆ 5 ರನ್​ಗಳಷ್ಟೇ ನೀಡಬೇಕಿತ್ತು!

ಲಂಡನ್: ಮಾಜಿ ಅಂಪೈರ್ ಹಾಗೂ ಕ್ರಿಕೆಟ್ ನಿಯಮಗಳ ಸಮಿತಿಯ ಸದಸ್ಯರಾಗಿದ್ದ ಸೈಮನ್ ಟೌಫೆಲ್, ವಿಶ್ವಕಪ್ ಫೈನಲ್​ನ ಕೊನೇ ಓವರ್​ನಲ್ಲಿ ಓವರ್ ಥ್ರೋ ಮೂಲಕ ನೀಡಲಾದ 6 ರನ್​ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಓವರ್ ಥ್ರೋನಲ್ಲಿ 5 ರನ್ ನೀಡಬೇಕಿತ್ತು ಇದು ಅಂಪೈರಿಂಗ್​ನಲ್ಲಿ ಆದ ಪ್ರಮಾದ ಎಂದು ಐಸಿಸಿಯನ್ನು ಎಚ್ಚರಿಸಿದ್ದಾರೆ.

ಕೊನೇ 3 ಎಸೆತಗಳಲ್ಲಿ ಇಂಗ್ಲೆಂಡ್ ಗೆಲುವಿಗೆ 3 ಎಸೆತಗಳಲ್ಲಿ 9 ರನ್ ಬೇಕಿದ್ದವು. ಈ ವೇಳೆ ಬೆನ್ ಸ್ಟೋಕ್ಸ್ ಬಾರಿಸಿದ ಎಸೆತವನ್ನು ಮಾರ್ಟಿನ್ ಗುಪ್ಟಿಲ್, ವಿಕೆಟ್ ಕೀಪರ್ ಬಳಿ ಥ್ರೋ ಮಾಡಿದ್ದರು. ಈ ವೇಳೆ 2ನೇ ರನ್​ಗಾಗಿ ಬೆನ್ ಸ್ಟೋಕ್ಸ್ ಓಡುತ್ತಿದ್ದ ವೇಳೆ ಅವರ ಬ್ಯಾಟ್​ಗೆ ತಾಕಿದ ಚೆಂಡು ಬೌಂಡರಿ ಸೇರಿತು. ಅಂಪೈರ್ ಕುಮಾರ ಧರ್ಮಸೇನ ಇಂಗ್ಲೆಂಡ್​ಗೆ 6 ರನ್ ನೀಡಿದರು. ಎಂಸಿಸಿ ನಿಯಮವನ್ನು ಅಳವಡಿಸುವ ವೇಳೆ ಅಂಪೈರ್​ಗಳು ತಪು್ಪ ಮಾಡಿದ್ದಾರೆ. ‘ಚೆಂಡು ಥ್ರೋ ಮಾಡುವ ವೇಳೆ, ಇಬ್ಬರೂ ಬ್ಯಾಟ್ಸ್​ಮನ್​ಗಳು ಪಿಚ್​ನ ಅರ್ಧದಾರಿಯನ್ನು ಕ್ರಮಿಸಿರಬೇಕು’ ಎಂದು ನಿಯಮವಿದೆ. ಮಾರ್ಟಿನ್ ಗುಪ್ಟಿಲ್ ಥ್ರೋ ಮಾಡುವ ವೇಳೆ, ಆದಿಲ್ ರಶೀದ್-ಬೆನ್ ಸ್ಟೋಕ್ಸ್ 2ನೇ ರನ್​ಗಾಗಿ ಪಿಚ್​ನ ಅರ್ಧ ದಾರಿಯನ್ನು ಕ್ರಮಿಸಿರಲಿಲ್ಲ. ಅದಲ್ಲದೆ, ಸ್ಟೋಕ್ಸ್ ಕ್ರೀಸ್ ತಲುಪುವ ಮುನ್ನವೇ ಅವರ ಬ್ಯಾಟ್​ಗೆ ತಾಕಿದ ಚೆಂಡು ಬೌಂಡರಿ ಸೇರಿತ್ತು. ಹಾಗಾಗಿ ಅವರು ಓಡಿದ್ದು 1 ರನ್, ಬೌಂಡರಿ ಮೂಲಕ ಸಿಕ್ಕಿದ 4 ರನ್​ನೊಂದಿಗೆ 5 ರನ್​ಅನ್ನು ನೀಡಬೇಕಿತ್ತು. ಆದರೆ, ಆದಿಲ್ ರಶೀದ್-ಸ್ಟೋಕ್ಸ್​ರ 2 ರನ್​ನೊಂದಿಗೆ ಬೌಂಡರಿಯನ್ನು ಸೇರಿಸಿ ಅಂಪೈರ್ 6 ರನ್ ನೀಡಿದ್ದರು. ಕೊನೆಗೆ ಇದೇ ಕಿವೀಸ್ ಸೋಲಿಗೆ ಕಾರಣವಾಯಿತು. ಆದರೆ, ಅಂಪೈರ್​ಗಳನ್ನು ಸಮರ್ಥನೆ ಮಾಡಿಕೊಂಡಿರುವ ಟೌಫೆಲ್, ಕೊನೇ ಕ್ಷಣದ ಒತ್ತಡದಲ್ಲಿ ಆದ ಘಟನೆ ಇದು ಎಂದಿದ್ದಾರೆ. ಇನ್ನು ಬೆನ್ ಸ್ಟೋಕ್ಸ್ ಕೂಡ, ಆ ಓವರ್ ಥ್ರೋ ರನ್​ಗಳು ಮುಂದಿನ ಯುಗದಲ್ಲೂ ನನ್ನನ್ನು ಕಾಡುತ್ತವೆ. ಕೇನ್ ವಿಲಿಯಮ್ಸನ್​ಗೆ ಇದಕ್ಕಾಗಿ ನಾನು ಕ್ಷಮೆಯನ್ನೂ ಕೇಳಿದೆ ಎಂದು ಹೇಳಿದ್ದಾರೆ.

ಕಿವೀಸ್​ಗೆ ಕೈಕೊಟ್ಟ ಅದೃಷ್ಟ

ಪಂದ್ಯದ ಕೊನೇ ಹಂತದಲ್ಲಿ ಕಿವೀಸ್ ತಂಡ ಒಂದಕ್ಕಿಂತ ಹೆಚ್ಚು ಬಾರಿ ಅದೃಷ್ಟ ಹೀನವೆನಿಸಿತು. ಅದರ ಪಟ್ಟಿ ಇಲ್ಲಿದೆ. -ಠಿ;ಬೆನ್ ಸ್ಟೋಕ್ಸ್ ಹೊಡೆದ ಶಾಟ್​ಅನ್ನು ಕ್ಯಾಚ್ ಆಗಿ ಪಡೆಯುವಲ್ಲಿ ಎಡವಿದ ಟ್ರೆಂಟ್ ಬೌಲ್ಟ್, ಚೆಂಡನ್ನು ಹಿಡಿದು ಬೌಂಡರಿ ಲೈನ್ ತುಳಿದ ಕಾರಣ ಸಿಕ್ಸರ್ ಆಗಿ ಪರಿವರ್ತನೆಯಾಯಿತು. ಬೌಲ್ಟ್ ಜಾಣ್ಮೆ ವಹಿಸಿದ್ದರೆ, ಚೆಂಡನ್ನು ತಳ್ಳಿ ತಾವು ಬೌಂಡರಿ ಲೈನ್ ದಾಟಿದ್ದರೆ, ಫಲಿತಾಂಶ ಬದಲಾಗುತ್ತಿತ್ತು.

  • ಬೆನ್ ಸ್ಟೋಕ್ಸ್​ರ ಬ್ಯಾಟ್​ಗೆ ತಾಕಿ ಚೆಂಡು ಬೌಂಡರಿ ಲೈನ್ ಸೇರಿದ್ದು, ಇಲ್ಲಿ ಅಂಪೈರ್ ಪ್ರಮಾದ ಒಂದೆಡೆಯಾದರೆ, ಬೆನ್ ಸ್ಟೋಕ್ಸ್ ಸಣ್ಣ ಮಟ್ಟಿಗೆ ಹಿಂದೆ ನೋಡಿದ್ದರೂ, ಅದು ಉದ್ದೇಶಪೂರ್ವಕ ಎನ್ನುವ ಕಾರಣ ನೀಡಿ ರನ್ ತಡೆಯಬಹುದಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ.
  • ಸೂಪರ್ ಓವರ್​ನಲ್ಲಿ ಸಾಹಸಿಕ ಆಟವಾಡಿದರೂ, ಕೊನೆಗೆ ಗರಿಷ್ಠ ಬೌಂಡರಿಗಳ ನಿಯಮ ಎದುರಾಗಿದ್ದು.

ಮೋಸವಾಗಿದೆ ಎಂದ ಕಿವೀಸ್ ಮಾಧ್ಯಮಗಳು

ಆಕ್ಲೆಂಡ್: ನ್ಯೂಜಿಲೆಂಡ್​ನ ಮಾಜಿ ಆಟಗಾರರು ಕೂಡ ಐಸಿಸಿ ನಿಯಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಒಟ್ಟಾರೆ ಲಾರ್ಡ್ಸ್​ನಲ್ಲಿ ನಮ್ಮ ತಂಡಕ್ಕೆ ಮೋಸವಾಗಿದೆ ಎಂದು ಅನಿಸಿದೆ ಎಂದು ಹೇಳಿದ್ದಾರೆ. ‘ನಿಜಕ್ಕೂ ನನಗೆ ಎಲ್ಲವೂ ಖಾಲಿ ಎಂದನಿಸುತ್ತಿದೆ. ಸ್ವಲ್ಪ ಮಟ್ಟಿಗಿನ ಮೋಸ ನಮಗೆ ಆಗಿದೆ. ಇದೊಂದು ಹಾಸ್ಯಾಸ್ಪದ ಹಾಗೂ ಅಸಂಬದ್ಧ ನಿಯಮ. ಟಾಸ್ ಮಾಡಿ ಗೆಲುವನ್ನು ನಿರ್ಧರಿಸಿದ ರೀತಿ ಆಗಿದೆ’ ಎಂದು ಮಾಜಿ ಆಲ್ರೌಂಡರ್ ಡಿಯಾನ್ ನ್ಯಾಶ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಹಾಗಿದ್ದರೂ ಟೂರ್ನಿಯ ಮುನ್ನವೇ ಈ ನಿಯಮವಿದ್ದ ಕಾರಣ ಈಗ ಅದರ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ ಎಂದೂ ಹೇಳಿದ್ದಾರೆ. ಗರಿಷ್ಠ ವಿಕೆಟ್ ಉರುಳಿಸಿದ ತಂಡವನ್ನು ವಿಜಯಿ ಎಂದು ಘೋಷಣೆ ಮಾಡುವುದು ಹಿಂದಿದ್ದ ನಿಯಮ. ಅದನ್ನು ಬದಲಿಸಿದ್ದರ ಹಿಂದಿನ ಕಾರಣ ತಿಳಿಸಲಿ ಎಂದು ಹೇಳಿದ್ದಾರೆ. ಕೈಲ್ ಮಿಲ್ಸ್ ಕೂಡ ವಿಕೆಟ್ ಉರುಳಿದ ಆಧಾರದಲ್ಲಿ ವಿಜೇತರ ನಿರ್ಣಯ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಟೋಕ್ಸ್ ಅಂದು ವಿಲನ್, ಇಂದು ಹೀರೋ!

ಲಂಡನ್: 2016ರ ಟಿ20 ವಿಶ್ವಕಪ್ ಫೈನಲ್. ಈಡನ್ ಗಾರ್ಡನ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಎದುರಾಗಿದ್ದವು. ಕೊನೇ ಓವರ್​ನಲ್ಲಿ ವಿಂಡೀಸ್ ಗೆಲುವಿಗೆ ಅಸಾಧ್ಯ 19 ರನ್​ಗಳು ಬೇಕಿದ್ದವು. ಈ ಓವರ್ ಎಸೆಯಲು ಬಂದ ಬೆನ್ ಸ್ಟೋಕ್ಸ್​ರ ಮೊದಲ ನಾಲ್ಕು ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಕಾಲೋಸ್ ಬ್ರಾಥ್​ವೇಟ್ ವಿಂಡೀಸ್​ಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರೆ, ಸ್ಟೋಕ್ಸ್ ಇಂಗ್ಲೆಂಡ್​ಗೆ ವಿಲನ್ ಆಗಿ ಕಂಡಿದ್ದರು. ಅದಾದ ಬಳಿಕ 2017ರ ಸೆಪ್ಟೆಂಬರ್ 25 ರಂದು ನೈಟ್​ಕ್ಲಬ್​ನಲ್ಲಿ ಗಲಾಟೆ ಮಾಡಿಕೊಂಡ ಕಾರಣಕ್ಕೆ ಬಂಧನಕ್ಕೂ ಒಳಗಾಗಿದ್ದ ಸ್ಟೋಕ್ಸ್ ರನ್ನು ಆಶಸ್ ಪ್ರವಾಸದಿಂದ ಕೈಬಿಡಲಾಗಿದ್ದರೆ, ಉಪನಾಯಕ ಸ್ಥಾನವನ್ನು ಕಿತ್ತುಕೊಳ್ಳಲಾಗಿತ್ತು. ಈ ಎಲ್ಲ ಹಿನ್ನಡೆಗಳ ಬಳಿಕ ಈಗ ಇಂಗ್ಲೆಂಡ್​ನ ಹೀರೋ ಆಗಿ ಬೆನ್ ಸ್ಟೋಕ್ಸ್ ಮಿಂಚಿದ್ದಾರೆ. ಫೈನಲ್​ನಲ್ಲಿ ಅಜೇಯ 84 ರನ್ ಹಾಗೂ ಸೂಪರ್ ಓವರ್​ನಲ್ಲಿ 8 ರನ್ ಸಿಡಿಸುವ ಮೂಲಕ ಪಂದ್ಯಶ್ರೇಷ್ಠರಾಗಿ ಮಿಂಚಿದರು.

ಇಂಗ್ಲೆಂಡ್ ತಂಡಕ್ಕೆ ಗಣ್ಯರ ಅಭಿನಂದನೆ

ಲಂಡನ್: ಬ್ರಿಟನ್​ನ ರಾಜ ಕುಟುಂಬ, ಕ್ರಿಕೆಟ್ ದಿಗ್ಗಜರು ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಇಂಗ್ಲೆಂಡ್​ನ ವಿಶ್ವಕಪ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ವಿವಿಯನ್ ರಿಚರ್ಡ್ಸ್, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್, ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಸೇರಿದಂತೆ ಹಲವರು ಇಂಗ್ಲೆಂಡ್​ಗೆ ಅಭಿನಂದನೆ ಸಲ್ಲಿಸುವುದರೊಂದಿಗೆ ನ್ಯೂಜಿಲೆಂಡ್ ಆಟಗಾರರಿಗೆ ಸಾಂತ್ವನ ಹೇಳಿದ್ದಾರೆ.