More

    ಚತುರ್ದಿನ ಟೆಸ್ಟ್ ಕಡ್ಡಾಯ, ಐಸಿಸಿ ಚಿಂತನೆ; ಪ್ರತಿ ಸರಣಿಯಲ್ಲಿ ಪಂದ್ಯಗಳ ಸಂಖ್ಯೆ ಏರಿಕೆ ನಿರೀಕ್ಷೆ

    ಮೆಲ್ಬೋರ್ನ್: ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ 2023ರಿಂದ ಚತುರ್ದಿನ ಟೆಸ್ಟ್ ಪಂದ್ಯ ಕಡ್ಡಾಯವಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಜಾಗತಿಕ ಕ್ರಿಕೆಟ್​ನ ವೇಳಾಪಟ್ಟಿ ಸಾಕಷ್ಟು ದ್ವಿಪಕ್ಷೀಯ ಸರಣಿಗಳಿಂದ ತುಂಬಿಹೋಗಿದ್ದು, ಬಿಡುವಿಲ್ಲದ ವೇಳಾಪಟ್ಟಿಯನ್ನು ಸರಳೀಕರಿಸುವ ಉದ್ದೇಶದೊಂದಿಗೆ ಟೆಸ್ಟ್ ಪಂದ್ಯವನ್ನು ಐದು ದಿನಗಳ ಬದಲಾಗಿ ನಾಲ್ಕು ದಿನಗಳಿಗೆ ಇಳಿಸುವ ಚಿಂತನೆ ನಡೆಸಿದೆ.

    ಐಸಿಸಿ ಕ್ರಿಕೆಟ್ ಸಮಿತಿ ಈಗಾಗಲೇ 2023ರಿಂದ 2031ರ ಅವಧಿಯವರೆಗಿನ ಟೆಸ್ಟ್ ಪಂದ್ಯಗಳನ್ನು ಐದು ದಿನಗಳ ಬದಲಾಗಿ ನಾಲ್ಕು ದಿನಕ್ಕೆ ಇಳಿಸುವ ಶಿಫಾರಸು ಮಾಡಿದೆ. ಐಸಿಸಿ ಮತ್ತಷ್ಟು ಜಾಗತಿಕ ಟೂರ್ನಿಯನ್ನು ಆಡಲು ಬಯಸಿದ್ದರೆ, ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಇನ್ನಷ್ಟು ಹೆಚ್ಚಿನ ದ್ವಿಪಕ್ಷೀಯ ಸರಣಿ ಆಡಲು ಬಯಸಿದೆ. ಅದರೊಂದಿಗೆ ವಿಶ್ವದ ಎಲ್ಲೆಡೆ ಆಯಾ ದೇಶಗಳ ಟಿ20 ಲೀಗ್​ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಕಾರಣ ಈ ಲೀಗ್​ಗಳಿಗೆ ಸಮಯ ಮೀಸಲಿಡುವುದು ಅಸಾಧ್ಯವಾಗಿ ಕಾಣುತ್ತಿದೆ. ಅದರೊಂದಿಗೆ 5 ದಿನಗಳ ಟೆಸ್ಟ್ ಪಂದ್ಯದ ಆಯೋಜನೆಯ ವೆಚ್ಚ ದುಬಾರಿಯಾಗಿದ್ದು, ಅದನ್ನು ತಗ್ಗಿಸುವ ನಿಟ್ಟಿನಲ್ಲಿ ಪಂದ್ಯವನ್ನು ನಾಲ್ಕು ದಿನಕ್ಕೆ ಇಳಿಸುವ ಶಿಫಾರಸು ಮಾಡಲಾಗಿದೆ ಎಂದು ಕ್ರಿಕೆಟ್ ವೆಬ್​ಸೈಟ್ ಕ್ರಿಕ್ ಇನ್ಪೋ ವರದಿ ಮಾಡಿದೆ. ಹಾಗೇನಾದರೂ 2015ರಿಂದ 2023ರ ಅವಧಿಯಲ್ಲಿ ಟೆಸ್ಟ್ ಪಂದ್ಯಗಳನ್ನು ನಾಲ್ಕು ದಿನಕ್ಕೆ ಮೀಸಲು ಮಾಡಿದ್ದರೆ, 335 ದಿನಗಳ ಕ್ರಿಕೆಟ್ ವೇಳಾಪಟ್ಟಿ ಬಿಡುವಿನಿಂದ ಕೂಡಿರುತ್ತಿತ್ತು. ಆದರೆ, ಕ್ರಿಕೆಟ್ ಸಮಿತಿಯ ಈ ಯೋಚನೆಗೆ ಇತರ ಕ್ರಿಕೆಟ್ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ‘ಈ ವಾರದ ಆರಂಭದಲ್ಲಿ ಈ ವಿಚಾರದ ಬಗ್ಗೆ ನಾವು ಗಂಭೀರವಾಗಿ  ಚರ್ಚಿಸಿದೆವು. ಕಳೆದ ಐದು-ಹತ್ತು ವರ್ಷಗಳ ಟೆಸ್ಟ್ ಪಂದ್ಯದ ಅವಧಿಯ ಸರಾಸರಿ, ಎಸೆದ ಓವರ್​ಗಳನ್ನು ಹಾಗೂ ಸಮಯವನ್ನು ಆಧರಿಸಿ ಇದನ್ನು ನಿರ್ಧಾರ ಮಾಡಿದ್ದೇವೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಕೆವಿನ್ ರಾಬರ್ಟ್ಸ್ ತಿಳಿಸಿದ್ದು, ಚತುರ್ದಿನ ಟೆಸ್ಟ್​ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಮುಂದಿನ ಒಂದು ಅಥವಾ ಒಂದೂವರೆ ವರ್ಷದಲ್ಲಿ ಇದರ ಸಂಪೂರ್ಣ ಚಿತ್ರಣ ಸಿಗಲಿದೆ. 2023-2031ರ ಅವಧಿಯಲ್ಲಿ ಅಂದಾಜು ಒಂದು ವರ್ಷಗಳ ಕಾಲ ಕ್ರಿಕೆಟ್

    ದಿನವನ್ನು ಕಡಿಮೆ ಮಾಡಲು ಇದರಿಂದ ಸಾಧ್ಯವಾಗ ಲಿದೆ. ಐಸಿಸಿ ಸದಸ್ಯರುಗಳು ಇದನ್ನು ಮಾಡುವುದು ಸುಲಭವಿಲ್ಲ ಎಂದು ಹೇಳಿದ್ದಾರೆ. ಆದರೆ, ಈ ಪ್ರಯತ್ನ ಮಾಡಲು ನಾವು ತಯಾರಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ, ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್, ಟೆಸ್ಟ್ ಪಂದ್ಯದ ದಿನವನ್ನು ಇಳಿಸುವ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ‘ಆಶಸ್​ನಲ್ಲಿ ಈಗ ಪಡೆದುಕೊಳ್ಳುವಂಥ ಫಲಿತಾಂಶಗಳು ಆಗ ಬರಲಿಕ್ಕಿಲ್ಲ. ಕಳೆದ ಆಶಸ್​ನಲ್ಲಿ ಎಲ್ಲ ಪಂದ್ಯಗಳು ಐದನೇ ದಿನಕ್ಕೆ ಹೋಗಿದ್ದವು. ಇದು ಟೆಸ್ಟ್ ಕ್ರಿಕೆಟ್​ನಲ್ಲಿರುವ ಭಿನ್ನತೆ. ಐದು ದಿನ ಆಡಲು ಆಟಗಾರ ಮಾನಸಿಕವಾಗಿ ಸಿದ್ಧವಾಗಿರಬೇಕು. ದೈಹಿಕವಾಗಿಯೂ ಇದು ಕಠಿಣ ಸಮಯವಾಗಿರುತ್ತದೆ. ನಾಲ್ಕು ದಿನಗಳ ಪ್ರಥಮ ದರ್ಜೆ ಪಂದ್ಯಗಳಲ್ಲಿ ಇಂಥ ಸವಾಲು ಎದುರಾಗುವುದಿಲ್ಲ. ಈಗಿರುವ ಮಾದರಿಯಲ್ಲಿಯೇ ಟೆಸ್ಟ್ ಕ್ರಿಕೆಟ್ ಉಳಿಯಲಿದೆ ಎಂದುಕೊಂಡಿದ್ದೇನೆ’ ಎಂದು ನ್ಯೂಜಿಲೆಂಡ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಮುಕ್ತಾಯದ ಬಳಿಕ ಹೇಳಿದ್ದಾರೆ. ಏಜೆನ್ಸೀಸ್

    ಹೊಸ ಯೋಚನೆಯಲ್ಲ

    ನಾಲ್ಕು ದಿನಗಳ ಟೆಸ್ಟ್ ಪಂದ್ಯ ಹೊಸ ಯೋಚನೆಯೇನಲ್ಲ. ಭಾರತದ ದೇಶೀಯ ಕ್ರಿಕೆಟ್​ನ ಲೀಗ್ ಪಂದ್ಯಗಳು ನಾಲ್ಕು ದಿನ ನಡೆಯುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವೆ ಈ ವರ್ಷದ ಆರಂಭದಲ್ಲಿ ಚತುರ್ದಿನ ಟೆಸ್ಟ್ ಪಂದ್ಯ ನಡೆದಿತ್ತು. ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು 2017ರಲ್ಲಿ ಚತುರ್ದಿನ ಟೆಸ್ಟ್ ಪಂದ್ಯ ಆಡಿದ್ದವು.

    ಹೆಚ್ಚಿನ ಸರಣಿ ಆಡಲು ಅನುಕೂಲ

    ಚತುರ್ದಿನ ಟೆಸ್ಟ್​ಗಳಿಂದ ಅಂದಾಜು ಒಂದು ವರ್ಷದ ಕ್ರಿಕೆಟ್ ದಿನ ಉಳಿಯಲಿರುವ ಕಾರಣ, ಮೂರು ಅಥವಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಹೆಚ್ಚಾಗಿ ಆಡುವ ಅವಕಾಶ ಸಿಗುತ್ತದೆ. ಅದಲ್ಲದೆ, ಆತಿಥೇಯ ಕ್ರಿಕೆಟ್ ಮಂಡಳಿಯ ನೇರಪ್ರಸಾರ ವಾಹಿನಿ ಐದನೇ ದಿನದ ಬಜೆಟ್​ಅನ್ನು ಕಡಿತ ಮಾಡುವುದರಿಂದ ಹೆಚ್ಚಿನ ಆದಾಯವೂ ಸಿಗುತ್ತದೆ. ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಇತ್ತೀಚೆಗೆ ಆಡಿದ ಟೆಸ್ಟ್ ಸರಣಿಯಲ್ಲಿ 20 ದಿನಗಳ ಕಾಲ ಕ್ರಿಕೆಟ್ ಆಡಿದ್ದವು. ಇದೇ ಸರಣಿ ನಾಲ್ಕು ದಿನಗಳಲ್ಲಿ ನಡೆದಿದ್ದರೆ, ಐದು ಪಂದ್ಯಗಳ ಸರಣಿ ಆಡುವ ಅವಕಾಶವಿತ್ತು. ಅದಲ್ಲದೆ, ಚತುರ್ದಿನ ಟೆಸ್ಟ್​ಗಳಲ್ಲಿ ಆಯಾ ದಿನ ಎಸೆಯುವ ಕನಿಷ್ಠ ಓವರ್​ಗಳ ಸಂಖ್ಯೆ 90ರಿಂದ 98ಕ್ಕೆ ಏರಿರುತ್ತದೆ. ಇದರಿಂದಾಗಿ, ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಎಂದಿನ ಟೆಸ್ಟ್ ಪಂದ್ಯಕ್ಕಿಂತ 58 ಓವರ್ ಮಾತ್ರ ಕಡಿಮೆ ಎಸೆಯಲಾಗುತ್ತದೆ. 2018ರ ಆರಂಭದಿಂದ ಆಡಿದ ಶೇ. 60ಕ್ಕೂ ಅಧಿಕ ಪಂದ್ಯಗಳು, ನಾಲ್ಕು ಅಥವಾ ಅದಕ್ಕಿಂತ ಕಡಿಮೆ ದಿನಗಳಲ್ಲಿ ಮುಕ್ತಾಯ ಕಂಡಿವೆ.

    ಟೆಸ್ಟ್ ಕ್ರಿಕೆಟ್​ನ ಮಹತ್ವದ ದಿನಗಳು!

    ಟೈಮ್​ಲೆಸ್​ನಿಂದ 6,5, 4 ಮತ್ತು 3 ದಿನಗಳ ಟೆಸ್ಟ್ ಪಂದ್ಯಗಳು ನಡೆದಿವೆ. ಇಂಗ್ಲೆಂಡ್​ನಲ್ಲಿ ಆರಂಭಿಕ ದಿನದ ಟೆಸ್ಟ್​ಗಳು 3 ಹಾಗೂ ಆಸ್ಟ್ರೇಲಿಯಾದಲ್ಲಿ ಆರಂಭಿಕ ದಿನಗಳ ಟೆಸ್ಟ್ ಗಳು 4 ದಿನಗಳದ್ದಾಗಿದ್ದವು. 1950ರ ಬಳಿಕ ಟೆಸ್ಟ್​ನಲ್ಲಿ 4, 5 ಹಾಗೂ 6 ದಿನಗಳ ಪಂದ್ಯಗಳು ನಡೆದಿವೆ. ದುರ್ಬಲ ತಂಡಗಳು 4 ದಿನಗಳ ಪಂದ್ಯ ಆಡಿದರೆ, ಬಲಿಷ್ಠ ತಂಡಗಳು 6 ದಿನಗಳ ಮುಖಾಮುಖಿಯಲ್ಲಿ ಕಾದಾಡುತ್ತಿದ್ದವು. 2017ರ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕೊನೆಯ ಬಾರಿಗೆ ನಾಲ್ಕು ದಿನಗಳ ಟೆಸ್ಟ್ ಪಂದ್ಯ ನಡೆದಿದ್ದು 1973ರಲ್ಲಿ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಈಡನ್ ಪಾರ್ಕ್​ನಲ್ಲಿ 4 ದಿನಗಳ ಮುಖಾಮುಖಿ ಆಡಿದ್ದವು. 1979ರ ಬಳಿಕ ಎಲ್ಲ ಟೆಸ್ಟ್ ಪಂದ್ಯಗಳು 5 ದಿನದ್ದಾಗಿವೆ. ಅದಕ್ಕೂ ಮುನ್ನ 6 ದಿನಗಳ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ, ಅದರಲ್ಲಿ 5 ದಿನ ಆಟ ಹಾಗೂ ನಡುವೆ ಒಂದು ವಿಶ್ರಾಂತಿ ದಿನ ಇರುತ್ತಿತ್ತು. ಹಾಗಿದ್ದರೂ, 2005ರಲ್ಲಿ ಕೊನೆಯ ಬಾರಿಗೆ ಅಧಿಕೃತ 6 ದಿನಗಳ ಟೆಸ್ಟ್ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾ ಹಾಗೂ ಐಸಿಸಿ ನಡುವೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯ 6 ದಿನಗಳ ಮುಖಾಮುಖಿ ಆಗಿದ್ದರೂ, ಪಂದ್ಯ ಮೂರೂವರೆ ದಿನಗಳಲ್ಲಿ ಮುಕ್ತಾಯ ಕಂಡಿತ್ತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts