More

    ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಬಿಡದ ಆರೋಪ: ಉ. ಪ್ರದೇಶ ಪೊಲೀಸರ ವಿರುದ್ಧ ಮಾಜಿ ಐಎಎಸ್​ ಅಧಿಕಾರಿ ಗರಂ

    ಪ್ರಯಾಗರಾಜ್​: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯನ್ನು ಖಂಡಿಸಿ ಐಎಎಸ್​ ಹುದ್ದೆಗೆ ರಾಜೀನಾಮೆ ನೀಡಿದ್ದ ಕೇರಳ ಮೂಲದ ಮಾಜಿ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​ರನ್ನು ಉತ್ತರ ಪ್ರದೇಶದ ಪ್ರಯಾಗರಾಜ್​ ವಿಮಾನ ನಿಲ್ದಾಣ ಬಳಿ ನಗರ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ತಿಳಿದುಬಂದಿದೆ.

    ಗೋಪಿನಾಥನ್​ ಅವರು ದೆಹಲಿಯಿಂದ ಪ್ರಯಾಗರಾಜ್​ಗೆ ಶನಿವಾರ ರಾತ್ರಿ ಆಗಮಿಸಿದ್ದರು. ನಾಗರಿಕತ್ವ ರಕ್ಷಣೆ, ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವ ರಕ್ಷಣೆ ವಿಷಯ ಕುರಿತು ಆಲ್ ಇಂಡಿಯಾ ಪೀಪಲ್ಸ್ ಫೋರಂ ಆಯೋಜಿಸಿದ್ದ ಎರಡು ಗಂಟೆಗಳ ವಿಚಾರಣ ಸಂಕಿರಣದಲ್ಲಿ ಭಾಗವಹಿಸಲು ಗೋಪಿನಾಥನ್​ ಪ್ರಯಾಗರಾಜ್​ಗೆ ಬಂದಿಳಿದಿದ್ದರು.

    ಬಳಿಕ ನಡೆದ ಘಟನೆಯ ಬಗ್ಗೆ ಸರಣಿ ಟ್ವೀಟ್​ ಮೂಲಕ ವಿವರಿಸಿರುವ ಗೋಪಿನಾಥನ್​, ವಿಮಾನದಿಂದ ಹೊರಬಂದು ನಿರ್ಗಮನ ದ್ವಾರಕ್ಕೆ ಬರುತ್ತಿದ್ದಾಗಲೇ ಪೊಲೀಸ್​ ಸಿಬ್ಬಂದಿ ನನ್ನನ್ನು ಸುತ್ತುವರಿದು ನನ್ನ ಗುರುತನ್ನು ಕೇಳಿದರು. ನಾನು ನನ್ನ ಹೆಸರನ್ನು ಹೇಳಿದೆ. ನನ್ನನ್ನು ವಿಐಪಿ ಕೊಠಡಿ ಬಳಿ ಕರೆದೊಯ್ದರು. ಬಳಿಕ ಸೆಕ್ಯುರಿಟಿ ಕೊಠಡಿ ಬಳಿ ಕರೆದೊಯ್ದರು. ನನ್ನ ಇನ್ನಿತರ ಯೋಜನೆಗಳ ಬಗ್ಗೆ ಪೊಲೀಸರು ಕೇಳಿದರು. ಅಲಹಾಬಾದ್​ ಬಿಟ್ಟ ನಂತರ ಜಾರ್ಖಂಡ್​ನ ಬೊಕಾರೋಗೆ ಶನಿವಾರ ರಾತ್ರಿ ದೆಹಲಿಯಿಂದ ಹೊರಡಬೇಕೆಂದು ಹೇಳಿದೆ. ಆದರೆ, ನನ್ನನ್ನು ದೆಹಲಿಗೆ ವಾಪಸ್​ ಕಳುಹಿಸಿದರು ಎಂದು ಆರೋಪಿಸಿದ್ದಾರೆ.

    ವಿಚಾರ ಸಂಕಿರಣ ಆಯೋಜಿಸಿದ್ದ ಕಮಲ್​ ಉಸ್ರಿ ಅವರು ಪ್ರಯಾಗರಾಜ್ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಆದರೆ, ಗೋಪಿನಾಥನ್​ ಅವರನ್ನು ನಾವು ವಶಕ್ಕೆ ಪಡೆದಿಲ್ಲ. ನಗರದ ವಾತಾವರಣ ಶಾಂತವಾಗಿದೆ ವಾಪಸ್​ ಹೋಗುವುದು ಒಳಿತು ಎಂದು ಸಲಹೆ ನೀಡಿದೆವು. ಅವರೇ ವಾಪಸ್ಸಾದರು ಎಂದು ಪೊಲೀಸ್​ ಅಧಿಕಾರಿಗಳು ಆರೋಪವನ್ನು ತಳ್ಳಿಹಾಕಿದ್ದಾರೆ.

    ಸಂವಿಧಾನದ 370ನೇ ಆರ್ಟಿಕಲ್​ ಅಡಿಯಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್​ ತಿಂಗಳಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿಸಿದ ಬೆನ್ನಲ್ಲೇ ಗೋಪಿನಾಥನ್​ ತಮ್ಮ ಹುದ್ದೆಯನ್ನು ತೊರೆದಿದ್ದರು. ಕೇಂದ್ರದ ನಿರ್ಧಾರ ಜಮ್ಮು ಮತ್ತು ಕಾಶ್ಮೀರ ಜನತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ವಿರೋಧಿಸಿ ಹುದ್ದೆ ತ್ಯಜಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts