ಕಾಶ್ಮೀರದಲ್ಲಿ ಜನರ ಮೇಲಿನ ನಿರ್ಬಂಧಕ್ಕೆ ಬೇಸತ್ತು ರಾಜೀನಾಮೆ ನೀಡಿದ ಕೇರಳದ ಐಎಎಸ್ ಅಧಿಕಾರಿ

ನವದೆಹಲಿ: 370ನೇ ಮತ್ತು 35ಎ ವಿಧಿಯನ್ನು ರದ್ದುಗೊಳಿಸುವ ಮೂಲಕ ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿನ ಲಕ್ಷಾಂತರ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎಂದು ಬೇಸತ್ತು ಕೇರಳ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

2012ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ 33 ವರ್ಷದ ಕಣ್ಣನ್ ಗೋಪಿನಾಥನ್ ಅವರನ್ನು ದಾದ್ರಾ ಮತ್ತು ನಗರ ಹವೇಲಿಯ ಕೇಂದ್ರ ಪ್ರಾಂತ್ಯದಲ್ಲಿ ವಿದ್ಯುತ್ ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ವೇಳೆ ನಷ್ಟದಲ್ಲಿದ್ದ ಸರ್ಕಾರಿ ವಿದ್ಯುತ್ ವಿತರಣಾ ಸಂಸ್ಥೆಯನ್ನು ಲಾಭದಾಯಕ ಸಂಸ್ಥೆಯನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಏಳು ವರ್ಷ ಐಎಎಸ್ ಅಧಿಕಾರಿಯಾಗಿದ್ದ ಗೋಪಿನಾಥನ್ ಆ. 21ರಂದೇ ಕೇಂದ್ರ ಸರ್ಕಾರದ ನಡೆಗೆ ಬೇಸತ್ತು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ನನ್ನ ರಾಜೀನಾಮೆಯು ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಇನ್ನೊಬ್ಬರಿಗೆ ಉತ್ತರಿಸಲು ನಮ್ಮ ಆತ್ಮಸಾಕ್ಷಿಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಲಕ್ಷಾಂತರ ಜನರ ಮೂಲಭೂತ ಹಕ್ಕುಗಳನ್ನು 20 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಅಲ್ಲದೆ ಭಾರತದಲ್ಲಿ ಇದು ಅನೇಕರಿಗೆ ಸರಿಯೆಂದು ತೋರುತ್ತದೆ. 2019ರಲ್ಲಿ ಇದು ಭಾರತದಲ್ಲಿ ನಡೆಯುತ್ತಿದೆ. 370ನೇ ವಿಧಿ ಅಥವಾ ಅದನ್ನು ರದ್ದುಪಡಿಸಿರುವುದು ಸಮಸ್ಯೆಯಲ್ಲ. ಆದರೆ ಈ ಕ್ರಮಕ್ಕೆ ನಾಗರಿಕರು ಪ್ರತಿಕ್ರಿಯಿಸುವ ಹಕ್ಕನ್ನು ನಿರಾಕರಿಸಿರುವುದು ಪ್ರಮುಖ ಸಮಸ್ಯೆಯಾಗಿದೆ. ಅವರು ಈ ಕ್ರಮವನ್ನು ಸ್ವಾಗತಿಸಬಹುದು ಅಥವಾ ಪ್ರತಿಭಟಿಸಬಹುದು, ಅದು ಅವರ ಹಕ್ಕು. ಈ ವಿಷಯವೇ ನನಗೆ ರಾಜೀನಾಮೆ ನೀಡುವಷ್ಟು ಆಘಾತಗೊಳಿಸಿದೆ ಎಂದು ತಿಳಿಸಿದ್ದಾರೆ.

“ಮಾಜಿ ಐಎಎಸ್ ಅಧಿಕಾರಿಯನ್ನು ವಿಮಾನ ನಿಲ್ದಾಣದಿಂದ ಬಂಧಿಸಿದಾಗಲೂ ಕೂಡ ನಾಗರಿಕ ಸಮಾಜದಿಂದ ಸಂಪೂರ್ಣ ಪ್ರತಿಕ್ರಿಯೆಯ ಕೊರತೆಯಿತ್ತು. ಈ ದೇಶದಲ್ಲಿ ಹೆಚ್ಚಿನವರಿಗೆ ಇದು ಸರಿಯೆಂದು ತೋರುತ್ತದೆ ಎಂದು ಹೇಳುವ ಮೂಲಕ ಐಎಎಸ್‌ ಅಧಿಕಾರಿಯೊಬ್ಬರು ಹೋರಾಟಗಾರನಾಗಿ ಬದಲಾದ ಶಾ ಫೈಸಲ್‌ ಅವರು ವಿದೇಶಕ್ಕೆ ತೆರಳಲು ಮುಂದಾದಾಗ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರಕ್ಕೆ ಹೇಗೆ ಕಳುಹಿಸಲಾಯಿತು ಎಂಬುದನ್ನು ಉಲ್ಲೇಖಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಗೋಪಿನಾಥನ್‌ ಅವರು, ಐಎಎಸ್‌ ಅಧಿಕಾರಿಯಾಗಿ ಆಯ್ಕೆಗೊಳ್ಳುವ ಮುನ್ನ ಎನ್‌ಜಿಒ ಒಂದರಲ್ಲಿ ಸ್ಲಂ ಮಕ್ಕಳಿಗೆ ತರಗತಿಗಳನ್ನು ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದರು. ಮುಂದೆ ಏನು ಮಾಡಬೇಕೆನ್ನುವ ಕುರಿತು ಸದ್ಯ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದರು. (ಏಜೆನ್ಸೀಸ್)

One Reply to “ಕಾಶ್ಮೀರದಲ್ಲಿ ಜನರ ಮೇಲಿನ ನಿರ್ಬಂಧಕ್ಕೆ ಬೇಸತ್ತು ರಾಜೀನಾಮೆ ನೀಡಿದ ಕೇರಳದ ಐಎಎಸ್ ಅಧಿಕಾರಿ”

Leave a Reply

Your email address will not be published. Required fields are marked *