ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಾಲ ಕಾಲಕ್ಕೆ ಬದಲಾಗುವ ನಿಯಮಾವಳಿಗಳು ಎಲ್ಲರಿಗೂ ಅನುಕೂಲವಾಗುವ ನ್ಯಾಯ ಸಮ್ಮತ ಆಡಳಿತ ನಡೆಸುವ ಉದ್ದೇಶ ಹೊಂದಿರುತ್ತದೆ. ಸರ್ಕಾರದ ಆದೇಶದಿಂದ ಯಾವುದೇ ವರ್ಗಕ್ಕೆ ಅನಾನುಕೂಲ ಆಗಿದ್ದರೆ ಅಂಥ ನಿಯಮಾವಳಿಗಳನ್ನು ಮರು ಪರಿಶೀಲಿಸಿ ಆಗಿರುವ ಸಮಸ್ಯೆ ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ, ಕರ್ನಾಟಕ ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಅವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಕ್ಕೊತ್ತಾಯಗಳನ್ನು ಸ್ವೀಕರಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಪೂರಕವಾಗಿ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಿ, ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ವಿಶೇಷ ರಾಜ್ಯ ಪತ್ರವನ್ನು 20-05-2017ರಂದು ಹೊರಡಿಸಿದ ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು 1ರಿಂದ 5ಕ್ಕೆ ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರು 6ರಿಂದ 8ಕ್ಕೆ ಎಂದು ವೃಂದವಾರು ಹುದ್ದೆಗಳನ್ನು ಮಂಜೂರಿಸಿ ಆದೇಶಿಸಿದೆ. ತತ್ಪರಿಣಾಮವಾಗಿ 2016ಕ್ಕಿಂತ ಮೊದಲು 1ರಿಂದ 7, 1ರಿಂದ 8 ವೃಂದಕ್ಕೆ ನೇಮಕಾತಿಯಾದ ಎಲ್ಲ ಸಹ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಪರಿಗಣಿಸಿದ್ದು, ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಸರಿಪಡಿಸುವಂತೆ ಸಂಘದ ಪದಾಧಿಕಾರಿಗಳು ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ನಿಯಮಗಳನ್ನು ಸರಿಪಡಿಸುವುದರ ಜತೆಗೆ ನಿರಂತರ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿಯ ತಾರತಮ್ಯ ಹಾಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಎಂ.ಎಚ್. ಜಂಗಳಿ, ಪ್ರಧಾನ ಕಾರ್ಯದರ್ಶಿ ಎಂ.ಯು. ಶಿರಹಟ್ಟಿ, ಎನ್.ಸಿ. ನಾಗರಳ್ಳಿ, ಎಚ್.ಎಂಮ. ಕುಂದರಗಿ, ಎ.ಎನ್.ರೈಚೂರಕರ, ಜಿ.ಎನ್.ಕುಬಿಹಾಳ, ಟಿ.ಎಸ್. ರೇವಡಿಗಾರ, ಬಿ.ಬಿ.ಕೇರಿ, ಪಿ.ವೈ. ಯಲಿಗಾರ, ಎಸ್.ಎಚ್. ಮೋಹಸಿನ್, ಎಸ್.ಬಿ.ಪಾಟೀಲ, ಇತರರು ಇದ್ದರು.