ನಗರದ ಗತವೈಭವ ಮತ್ತೆ ತರುತ್ತೇನೆ: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ಉದ್ಯಾನನಗರಿ ಮಟ್ಟಿಗೆ ಗತಕಾಲದ ವೈಭವ ಮರಳಿ ತರುವುದೇ ನನ್ನ ಪ್ರಮುಖ ಗುರಿ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಪದ್ಮನಾಭನಗರ, ಬೊಮ್ಮನಹಳ್ಳಿ ಹಾಗೂ ಗೋವಿಂದರಾಜನಗರ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.

ಬೆಂಗಳೂರು ನಗರದ ದಕ್ಷಿಣ ಭಾಗ ದೇಶ- ವಿದೇಶಗಳಲ್ಲೂ ಹೆಸರುವಾಸಿಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ. ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಇನ್ನೂ ಹಲವು ಮಹತ್ವದ ಯೋಜನೆ ಹಮ್ಮಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅನುದಾನ ತರುವುದು ನನ್ನ ಜವಾಬ್ದಾರಿ ಎಂದರು.

ಪದ್ಮನಾಭನಗರದ ಚಿಕ್ಕಲ್ಲಸಂದ್ರ ದೇವಸ್ಥಾನದಿಂದ ಆರಂಭವಾದ ರೋಡ್ ಶೋ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮಧ್ಯಾಹ್ನ ಬೊಮ್ಮನಹಳ್ಳಿ ವೃತ್ತದ ಬಳಿ ಇರುವ ಎಚ್.ಪಿ. ಪವರ್ ಕನ್ವೆನ್ಷನ್ ಸೆಂಟರ್​ನಲ್ಲಿ ಹರಿಪ್ರಸಾದ್ ಕರ್ನಾಟಕ ಬಹುಜನ ಸಂಘರ್ಷ ಸಮಿತಿಯ ಮುಖಂಡರೊಂದಿಗೆ ಸಭೆಯಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರದ ಮಾಹಿತಿ ಪಡೆದರು.ಸಂಜೆ ರಾಜಾಜಿನಗರದ 6 ನೇ ಬ್ಲಾಕ್, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತೆಯರೊಂದಿಗೆ ಬೈಕ್ ರ‍್ಯಾಲಿ ನಡೆಸಿದರು.