ಶಬರಿಮಲೆ ಪ್ರವೇಶಕ್ಕೆ ತೃಪ್ತಿ ಸಜ್ಜು, ಪ್ರಾಣ ಕೊಟ್ಟರೂ ಪ್ರವೇಶಕ್ಕೆ ಬಿಡುವುದಿಲ್ಲ ಎಂದ ಹೋರಾಟಗಾರ

ನವದೆಹಲಿ: ಪುಣೆ ಮೂಲದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ವಾರ್ಷಿಕ ಎರಡು ತಿಂಗಳು ಯಾತ್ರಿಗಳಿಗಾಗಿ ಅಯ್ಯಪ್ಪ ತೇಗುಲ ತೆರೆಯುವ ವೇಳೆ ನ. 17 ರಂದು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಯೋಜನೆ ರೂಪಿಸಲಾಗಿದೆ ಎಂದು ಬುಧವಾರ ತಿಳಿಸಿದ್ದಾರೆ.

ಮಹಿಳಾ ಹಕ್ಕುಗಳಿಗಾಗಿ ಹೋರಾಡುವ ಭೂಮಾತ ಬ್ರಿಗೇಡ್‌ ಸಂಸ್ಥಾಪಕಿಯಾಗಿರುವ ತೃಪ್ತಿ ಅವರು, ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ರಾಜ್ಯ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದು ಅಯ್ಯಪ್ಪ ದೇಗುಲಕ್ಕೆ ತಮ್ಮ ಭೇಟಿ ವೇಳೆ ಅಗತ್ಯ ಪೊಲೀಸ್‌ ರಕ್ಷಣೆ ನೀಡುವಂತೆ ಕೋರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತೃಪ್ತಿ, ನ. 17ರಂದು ಅಯ್ಯಪ್ಪ ದೇಗುಲ ಭೇಟಿ ನೀಡಲಿದ್ದು, ನಮಗೆ ಅಗತ್ಯ ಭದ್ರತೆ ಒದಗಿಸುವಂತೆ ಕೇರಳ ಮುಖ್ಯಮಂತ್ರಿ ಮತ್ತು ಡಿಜಿಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

2016ರಲ್ಲಿ ತೃಪ್ತಿ ದೇಸಾಯಿ ಅವರು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿನ ಶನಿ ಶಿಂಗ್ಣಾಪುರ ದೇಗುಲಕ್ಕೆ ಭೇಟಿ ನೀಡುವ ಮೂಲಕ 60 ವರ್ಷಗಳಿಂದ ಮಹಿಳೆಯರಿಗೆ ಹೇರಿದ್ದ ಸಂಪ್ರದಾಯವನ್ನು ಮುರಿದಿದ್ದರು. ಅಂದಿನಿಂದ ಇನ್ನಿತರೆ ದೇಗುಲಗಳಿಗೂ ಮಹಿಳೆಯರು ಪ್ರವೇಶ ಬಯಸಿ ಹೋರಾಟಕ್ಕೆ ಇಳಿದಿದ್ದರು.

ಆರು ಮಹಿಳೆಯರೊಂದಿಗೆ ಶುಕ್ರವಾರ ಕೇರಳಕ್ಕೆ ಬರುತ್ತಿದ್ದು, ದೇಗುಲಕ್ಕೆ ಭೇಟಿ ನೀಡಲಿದ್ದೇವೆ. ಹಾಗಾಗಿ ಕೇರಳಕ್ಕೆ ಬಂದಿಳಿದ ಸಮಯದಿಂದ ಅಲ್ಲಿಂದ ಹೊರಡುವವರೆಗೂ ನಮಗೆ ರಕ್ಷಣೆ ನೀಡಬೇಕು. ಯಾವುದೇ ಪ್ರತಿರೋಧ ಎದುರಾದರೂ ಕೂಡ ನಾವು ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಈ ಸುದ್ದಿ ಹೊರಬೀಳುತ್ತಲೇ ಹೋರಾಟಗಾರ ರಾಹುಲ್‌ ಈಶ್ವರ್‌ ಪ್ರತಿಕ್ರಿಯಿಸಿ, ಯಾವುದೇ ಮಹಿಳೆಯರಿಗೆ ದೇಗುಲದ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಪ್ರಾಣ ಕೊಟ್ಟರೂ ಸರಿ ಮಹಿಳೆಯರು ದೇಗುಲದ ಸಂಪ್ರದಾಯವನ್ನು ಮುರಿಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)