ಮೋದಿಯವರ ಹಾಗೆ ಮಾಧ್ಯಮಗಳ ಮುಂದೆ ಮಾತನಾಡಲು ನಾನು ಹೆದರಿರಲಿಲ್ಲ: ಮನ ಮೋಹನ್‌ ಸಿಂಗ್‌

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದು, ಮೋದಿ ಅವರು ವಿವಾದಾತ್ಮಕ ವಿಚಾರಗಳ ಬಗ್ಗೆ ಮಾತನಾಡುವುದೇ ಇಲ್ಲ. ಅವರು ಮೌನದ ರಾಯಭಾರಿಯಾಗಿದ್ದು, ಮಾಧ್ಯಮಗಳ ಮುಂದೆ ಮಾತನಾಡಲು ಅವರು ಹೆದರುತ್ತಾರೆ ಎಂದು ಹೇಳಿದ್ದಾರೆ.

ಚೇಂಜಿಂಗ್‌ ಇಂಡಿಯಾ ಎಂಬ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಪ್ರಧಾನಿಯಾಗಿದ್ದಾಗ ಮೌನದ ಪ್ರಧಾನಿಯಾಗಿದ್ದೆ ಎಂದು ಕೆಲವು ಜನ ಹೇಳುತ್ತಾರೆ. ಆದರೆ ನಾನು ಮಾಧ್ಯಮಗಳ ಮುಂದೆ ಮಾತನಾಡಲು ಹೆದರುವ ಪ್ರಧಾನಿಯಾಗಿರಲಿಲ್ಲ. ನಾನು ಯಾವಾಗಲು ಮಾಧ್ಯದವರನ್ನು ಎದುರಾಗುತ್ತಿದ್ದೆ. ಹಲವಾರು ಪತ್ರಿಕಾಗೋಷ್ಠಿಗಳನ್ನು ಮಾಡುತ್ತಿದ್ದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದೇ ಒಂದು ಪತ್ರಿಕಾ ಗೋಷ್ಠಿಗಳಲ್ಲಿ ಮಾತನಾಡಿಲ್ಲ. ಇದು ಕೇವಲ ರಾಜಕೀಯ ವಿರೋಧಿಗಳ ಟೀಕೆಗೆ ಬಳಸಿಕೊಂಡರು. ಮುಖ್ಯವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಟೀಕಿಸುತ್ತಿದ್ದರು ಎಂದು ತಿಳಿಸಿದರು.

ಇದೇ ವೇಳೆ ಪುಸ್ತಕದ ಕುರಿತು ಮಾತನಾಡಿ, ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಅಭಿವೃದ್ಧಿ ಕಾರ್ಯಗಳು ಮತ್ತು ಆರ್ಥಿಕ ಕ್ಷೇತ್ರದ ಪ್ರಗತಿಯನ್ನು ತಿಳಿಸಲಾಗಿದೆ ಎಂದರು.

ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ರೈತರ ಸಾಲಮನ್ನಾವನ್ನು ಘೋಷಿಸಿದ್ದೇವೆ. ನಾವು ನೀಡಿದ್ದ ಭರವಸೆಗಳಿಗೆ ಬದ್ಧರಾಗಿದ್ದೇವೆ ಎಂದರು.

ಕೇಂದ್ರ ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್‌ ನಡುವಿನ ಮುಸುಕಿನ ಗುದ್ದಾಟ ಕುರಿತು ಪ್ರತಿಕ್ರಿಯಿಸಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರವು ಭವಿಷ್ಯದಲ್ಲಿ ಒಂದಕ್ಕೊಂದು ಸಾಮರಸ್ಯದಿಂದ ಕೆಲಸ ಮಾಡಲು ಮಾರ್ಗಗಳನ್ನು ಮತ್ತು ವಿಧಾನಗಳನ್ನು ಹುಡುಕಿಕೊಳ್ಳುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *