PHOTO: ವೃತ್ತಿಜೀವನದ ಆರಂಭದಲ್ಲಿ ಚಿತ್ರದಿಂದ ಕಿತ್ತೊಗೆದಾಗ ಕತ್ರಿನಾ ಕೈಫ್​ ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ನಕ್ಕಿದ್ದರಂತೆ ಸಲ್ಮಾನ್​!

ಮುಂಬೈ: ಬಾಲಿವುಡ್​ ಚೆಲುವೆ ಕತ್ರಿನಾ ಕೈಫ್​ ಮಂಗಳವಾರ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್​ ಮಂದಿ ಅಲ್ಲದೆ ಕತ್ರಿನಾ ಅವರ ಸ್ನೇಹಿತರ ಬಳಗ, ಅಭಿಮಾನಿಗಳ ಬಳಗ ಅವರಿಗೆ ಶುಭಾಶಯಗಳನ್ನು ಹೇಳುತ್ತಾ, ತಾವು ಕೂಡ ಆ ಸಂಭ್ರಮದ ಭಾಗವಾಗುತ್ತಿದ್ದಾರೆ.

ಇಂತಿರುವಾಗ, ಸಲ್ಮಾನ್​ ಖಾನ್​ ಜತೆಗೂಡಿ ಟೈಗರ್​ ಜಿಂದಾ ಹೈ ಸೇರಿ ಹಲವು ಹಿಟ್​ ಚಿತ್ರಗಳನ್ನು ಕೊಟ್ಟಿರುವ ಹಾಗೂ ಸಲ್ಮಾನ್​ ಜತೆ ವಿಶೇಷ ಅನುಬಂಧ ಹೊಂದಿರುವ ಕತ್ರಿನಾ ಕೈಫ್​, ತಮ್ಮ ವೃತ್ತಿಜೀವನದ ಆರಂಭದಲ್ಲಿ ಒಮ್ಮೆ ಚಿತ್ರದಿಂದ ಕಿತ್ತೊಗೆಯಲ್ಪಟ್ಟಾಗ ಸಲ್ಮಾನ್​ ಖಾನ್​ ತಮ್ಮ ನೆರವಿಗೆ ಧಾವಿಸಿದ್ದು, ಮಾನಸಿಕವಾಗಿ ಧೈರ್ಯ ತುಂಬಿದ ಘಟನೆಯ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅದು 2003ರ ಸಮಯ. ಆಗ ನಾನು ಬಾಲಿವುಡ್​ನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದ್ದ ದಿನಗಳವು. ಆ ಸಂದರ್ಭದಲ್ಲಿ ಸಾಯಾ ಎಂಬ ಚಲನಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಜಾನ್​ ಅಬ್ರಹಾಂ ಈ ಚಿತ್ರದ ನಾಯಕರಾಗಿದ್ದರು. ಆ ಚಿತ್ರದಲ್ಲಿ ನನ್ನದು ದೆವ್ವದ ಪಾತ್ರ. ಎರಡು ದಿನಗಳ ಚಿತ್ರೀಕರಣದ ಬಳಿಕ ಇದ್ದಕ್ಕಿದ್ದಂತೆ ನನ್ನನ್ನು ಚಿತ್ರದಿಂದ ತೆಗೆದು ಹಾಕಿರುವುದಾಗಿ ಚಿತ್ರ ತಂಡ ಹೇಳಿದಾಗ ಕಣ್ಣಲ್ಲಿ ನೀರು ತುಂಬಿಕೊಂಡು ಬಿಕ್ಕಿಬಿಕ್ಕಿ ಅಳಲಾರಂಭಿಸಿದ್ದೆ.

ಹಾಗೆ ಅಳುತ್ತಲೇ ಸಲ್ಮಾನ್​ ಖಾನ್​ ಅವರನ್ನು ಭೇಟಿಯಾಗಲು ತೆರಳಿದ್ದೆ. ನಾನು ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಪುಟ್ಟ ಮಗು ಅಳುವಾಗ ನಗುತ್ತಾ ನೋಡುವಂತೆ ಸಲ್ಮಾನ್​ ನನ್ನನ್ನು ನೋಡಿ ನಗುತ್ತಾ ಕುಳಿತಿದ್ದರು. ಎಂಥ ನೀಚ ಮನುಷ್ಯನಪ್ಪಾ ಈತ… ನಾನು ಅಳುತ್ತಿದ್ದರೆ, ಈತ ನಗುತ್ತಿದ್ದಾನಲ್ಲಾ… ಎಂದು ಮನದಲ್ಲೇ ಅವರನ್ನು ಶಪಿಸಲು ಆರಂಭಿಸಿದ್ದೆ.

ಅಷ್ಟರಲ್ಲೇ ನಗುವುದನ್ನು ನಿಲ್ಲಿಸಿದ ಸಲ್ಮಾನ್​ ಖಾನ್​, ವೃತ್ತಿಜೀವನದಲ್ಲಿ ಇಂಥದ್ದೆಲ್ಲ ಆಗುತ್ತದೆ. ಅದಕ್ಕೆ ಧೈರ್ಯಗೆಡಬಾರದು. ದಿಟ್ಟತನದಿಂದ ಇಂಥ ಪರಿಸ್ಥಿತಿಯನ್ನು ಎದುರಿಸಬೇಕು. ಮುಂದೆ ಅವಕಾಶ ಸಿಕ್ಕೇ ಸಿಗುತ್ತದೆ. ಅದರಲ್ಲಿ ನಿನ್ನ ಪ್ರತಿಭೆ ನೋಡಿದ ಬಳಿಕ ನಿನ್ನನ್ನು ತೆಗೆದುಹಾಕಿದವರಿಗೂ ನೀನು ಏನೆಂಬುದು ಗೊತ್ತಾಗುತ್ತದೆ… ಎಂದು ಹೇಳಿ ಸಮಾಧಾನಪಡಿಸಿದ್ದಲ್ಲದೆ, ಹುರಿದುಂಬಿಸಿದರು. ಆಗ ಅವರ ಹೃದಯ ವೈಶಾಲ್ಯತೆಗೆ ನಾನು ಮಾರುಹೋದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *