ಉಳಿದ ಜೀವನದಲ್ಲಿ ‘ನರೇಂದ್ರ ಮೋದಿ’ಯವರ ಸೈನಿಕನಾಗಿರುತ್ತೇನೆಂದು ಕಾಂಗ್ರೆಸ್​ ತೊರೆದ ಮಾಜಿ ಕೇಂದ್ರ ಸಚಿವ

ನವದೆಹಲಿ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ಹಿರಿಯ ಮುಖಂಡ ಎಸ್​.ಕೃಷ್ಣ ಕುಮಾರ್ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿಯವರ ನಾಯಕತ್ವವವನ್ನು ವಿರೋಧಿಸಿ ಪಕ್ಷ ತೊರೆದಿದ್ದಾಗಿ ಹೇಳಿರುವ ಅವರು, ಸೋನಿಯಾ ಗಾಂಧಿಯವರಿಗೆ ಈ ದೇಶದ ಸಂಸ್ಕೃತಿ, ಪರಂಪರೆಯ ಬಗ್ಗೆ ಏನೂ ಗೊತ್ತಿಲ್ಲ. ಸಣ್ಣ ಜ್ಞಾನವೂ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಮಾಜಿ ಪ್ರಧಾನಿ ನರಸಿಂಹ​ ರಾವ್​ ಅವರ ಬಗ್ಗೆ ಗೌರವದ ಭಾವನೆ ಹೊಂದಿಲ್ಲ. ಅವರ ಚಿತಾಭಸ್ಮವನ್ನು ಕಾಂಗ್ರೆಸ್​ ಕಚೇರಿಯಲ್ಲಿ ಇಡಲು ಕೂಡ ಸೋನಿಯಾ ಗಾಂಧಿ ಒಪ್ಪಲಿಲ್ಲ. ಹಾಗಾಗಿ ನಾನು ನನ್ನ ಉಳಿದ ಜೀವನವನ್ನು ನರೇಂದ್ರ ಮೋದಿಯವರ ಸೈನಿಕನಾಗಿ ವಿನಿಯೋಗಿಸಲು ಬಯಸುತ್ತೇನೆ. ಇನ್ನೂ 10 ವರ್ಷಗಳ ಕಾಲ ಮೋದಿಯವರನ್ನೇ ಜನರು ಪ್ರಧಾನಿಯನ್ನಾಗಿ ಆರಿಸುವುದರಲ್ಲಿ ಅನುಮಾನವಿಲ್ಲ ಎಂದು ಕೃಷ್ಣ ಕುಮಾರ್​ ತಿಳಿಸಿದ್ದಾರೆ.

ಎಸ್​. ಕೃಷ್ಣಕುಮಾರ್​ ಅವರು ಮಾಜಿ ಪ್ರಧಾನಿಗಳಾದ ರಾಜೀವ್​ ಗಾಂಧಿ ಹಾಗೂ ನರಸಿಂಹ ರಾವ್​ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಕಾಂಗ್ರೆಸ್​ ವಕ್ತಾರೆಯಾಗಿದ್ದ ಪ್ರಿಯಾಂಕಾ ಚತುರ್ವೇದಿ ಪಕ್ಷ ತೊರೆದು ಶಿವಸೇನೆ ಸೇರಿದ ಬೆನ್ನಲ್ಲೇ ಮಾಜಿ ಸಚಿವ ಕೃಷ್ಣಕುಮಾರ್ ಕೂಡ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ.