ಆದಾಯ ತೆರಿಗೆ ವಂಚನೆ: ಸೋನಿಯಾ, ರಾಗಾಗೆ 100 ಕೋಟಿ ರೂ. ಐಟಿ ನೋಟಿಸ್​

ನವದೆಹಲಿ: ಅಸೋಸಿಯೇಟೆಡ್​ ಜರ್ನಲ್ಸ್​ ಲಿಮಿಟೆಡ್​(ಎಜೆಎಲ್​) ಆದಾಯದ ತೆರಿಗೆ ವಂಚಿಸಿದ್ದಕ್ಕೆ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ಆದಾಯ ತೆರಿಗೆ ಇಲಾಖೆ ಬುಧವಾರ ನೂರು ಕೋಟಿ. ರೂ. ತೆರಿಗೆ ನೋಟಿಸ್​ ಕಳುಹಿಸಿದೆ.

2011-12ರ ಆರ್ಥಿಕ ವರ್ಷದಲ್ಲಿ ಸೋನಿಯಾ ಮತ್ತು ರಾಹುಲ್​ ಎಜೆಎಲ್​ಗೆ ಸಂಬಂಧಿಸಿದ ಆದಾಯಕ್ಕೆ ತೆರಿಗೆ ವಂಚಿಸಿದ್ದರು. 2011-12ರಲ್ಲಿ ರಾಹುಲ್​ ಗಾಂಧಿ 68.12 ಲಕ್ಷ ರೂ. ರಿಟರ್ನ್ಸ್​ ಫೈಲ್​ ಮಾಡಿದ್ದರು. ಆದರೆ, ತೆರಿಗೆ ಇಲಾಖೆ ರಾಹುಲ್​ ಗಾಂಧಿ 154.96 ಕೋಟಿ ರೂ. ಎಜೆಎಲ್​ ಆದಾಯವನ್ನು ಮುಚ್ಚಿಟ್ಟು ವಂಚಿಸಿದ್ದಾರೆ ಎಂದಿದೆ. ಹಾಗೆಯೇ ಸೋನಿಯಾ ಗಾಂಧಿ ಎಜೆಎಲ್​ನಿಂದ ಆಚೆಗೆ 155.41 ಕೋಟಿ ರೂ. ತೆರಿಗೆ ಜವಾಬ್ದಾರಿ ಹೊಂದಿದ್ದು, ಆದಾಯಕ್ಕೆ ತಕ್ಕ ತೆರಿಗೆ ಪಾವತಿಸಿಲ್ಲ ಎಂದು ತಿಳಿಸಿದೆ.

ಯಂಗ್​ ಇಂಡಿಯಾ ಆದಾಯಕ್ಕೂ ನೋಟಿಸ್​
ಅಲ್ಲದೆ, 2011-12ರಲ್ಲಿ ಯಂಗ್​ ಇಂಡಿಯಾ ಪ್ರೈ. ಲಿಮಿಟೆಡ್​ ಆದಾಯದ ವರದಿ ಸಲ್ಲಿಸಿಲ್ಲ ಎಂದು ಕಳೆದ ವರ್ಷ ಮಾರ್ಚ್​ನಲ್ಲಿ ಆದಾಯ ತೆರಿಗೆ ಇಲಾಖೆ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಮತ್ತು ಆಸ್ಕರ್​ ಫರ್ನಾಂಡಿಸ್​ಗೆ ನೋಟಿಸ್​ ಕಳುಹಿಸಿತ್ತು. (ಏಜೆನ್ಸೀಸ್)