ಕಳ್ಳ ರಫೇಲ್​ ಡೀಲ್​ನ ಕಡತಗಳನ್ನು ಹಿಂದಿರುಗಿಸಿರಬಹುದು: ಚಿದಂಬರಂ

ನವದೆಹಲಿ: ರಫೇಲ್​ ಯುದ್ಧ ವಿಮಾನ ಖರೀದಿ ವ್ಯವಹಾರದ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಳ್ಳ ಹಿಂದಿರುಗಿಸಿರಬಹುದು ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಅವರಿಗೆ ಟಾಂಗ್​ ನೀಡಿದ್ದಾರೆ.

ಇದಕ್ಕೆ ಟ್ವೀಟ್​ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಚಿದಂಬರಂ ‘ಬುಧವಾರ ದಾಖಲೆಗಳು ಕಳುವಾಗಿವೆ ಎನ್ನುತ್ತೀರಿ, ಶುಕ್ರವಾರ ದಾಖಲೆಗಳು ಫೋಟೋ ಕಾಪಿ ಆಗಿವೆ ಎಂದಿದ್ದೀರಿ. ಹಾಗಾಗಿ ಕಳ್ಳ ದಾಖಲೆಗಳನ್ನು ಗುರುವಾರ ಹಿಂದಿರುಗಿಸಿರಬೇಕು ಎಂದೆನಿಸುತ್ತದೆ’ ಎಂದು ಅಟಾರ್ನಿ ಜನರಲ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ರಫೇಲ್​ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆದ ಸಂದರ್ಭದಲ್ಲಿ ‘ಸುಪ್ರೀಂಕೋರ್ಟ್ ವಿಚಾರಣೆ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ವಿಚಾರಣೆ ದಿನವೇ ಲೇಖನ ಬರೆಸಲಾಗುತ್ತಿದೆ. ಈ ಲೇಖನಕ್ಕೆ ರಕ್ಷಣಾ ಇಲಾಖೆಯಿಂದ ಕದ್ದಿರುವ ದಾಖಲೆ ಬಳಸಲಾಗುತ್ತಿದೆ’ ಎಂದು ವೇಣುಗೋಪಾಲ್ ದೂರಿದ್ದರು.

ಆದರೆ ಶುಕ್ರವಾರ ತಮ್ಮ ಹೇಳಿಕೆಯನ್ನು ಬದಲಿಸಿದ್ದ ವೇಣುಗೋಪಾಲ್​ ಅವರು ರಕ್ಷಣಾ ಸಚಿವಾಲಯದಿಂದ ದಾಖಲೆಗಳು ಕಳ್ಳತನವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಜತೆಗೆ ಈ ವಿಚಾರವಾಗಿ ಸುಪ್ರೀಂಕೋರ್ಟ್​ನಲ್ಲಿ ದಾವೆ ಹೂಡಿರುವ ಕೇಂದ್ರದ ಮಾಜಿ ಸಚಿವರಾದ ಯಶವಂತ ಸಿನ್ಹಾ, ಅರುಣ್​ ಶೌರಿ ಹಾಗೂ ವಕೀಲ ಪ್ರಶಾಂತ್​ ಭೂಷಣ್​ ಅವರು ತಮ್ಮ ಅರ್ಜಿಯೊಂದಿಗೆ ರಫೇಲ್​ ಯುದ್ಧವಿಮಾನ ಖರೀದಿ ಒಪ್ಪಂದದ ಮೂಲ ದಾಖಲಾತಿಗಳ ನಕಲನ್ನು ಲಗತ್ತಿಸಿದ್ದಾರೆ. ಸರ್ಕಾರದ ಪ್ರಕಾರ ಈ ದಾಖಲೆಗಳು ಅತ್ಯಂತ ಗೌಪ್ಯವಾದವು ಎಂದು ವರ್ಗೀಕರಿಸಲ್ಪಟ್ಟಿವೆ. ಹಾಗಾಗಿ ತಾವು ಸುಪ್ರೀಂಕೋರ್ಟ್​ನಲ್ಲಿ ದಾಖಲೆಗಳು ಕಳುವಾಗಿವೆ ಎಂಬ ಪದ ಪ್ರಯೋಗ ಮಾಡಿದ್ದಾಗಿ ಹೇಳಿದ್ದರು. (ಏಜೆನ್ಸೀಸ್​)