ನೀವು ಹಿಂದು ಅಂದಮೇಲೆ ಮನೆಯಲ್ಲೇಕೆ ಶಿಲುಬೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದ್ದವರಿಗೆ ನಟ ಮಾಧವನ್​ ಕೊಟ್ಟ ಖಡಕ್​ ಉತ್ತರ ಇದು…

ಮುಂಬೈ: ನಟ ಮಾಧವನ್​ ಅವರು ಜನಿವಾರ ಧರಿಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಸದ್ದು ಮಾಡುತ್ತಿದೆ. ಇದೇ ವಿಚಾರವಾಗಿ ಅವರನ್ನು ಹಲವರು ಟೀಕಿಸಿದ್ದು ಅದಕ್ಕೀಗ ಮಾಧವನ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ರಕ್ಷಾಬಂಧನದ ದಿನದಂದು ಮಾಧವನ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ತಂದೆ ರಂಗನಾಥ್​ ಹಾಗೂ ಮಗ ವೇದಾಂತ್​ ಜತೆ ಕುಳಿತಿರುವ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದರು. ಅಂದು ಮೂವರೂ ಜನಿವಾರ ಕೂಡ ಬದಲಿಸಿಕೊಂಡಿದ್ದನ್ನು ಈ ಫೋಟೋದಲ್ಲಿ ಕಾಣಬಹುದು. ಎಲ್ಲರಿಗೂ ಸ್ವಾತಂತ್ರ್ಯದಿನ, ರಕ್ಷಾಬಂಧನ ಹಾಗೂ ಅವನಿ ಅಟ್ಟಂ ಹಬ್ಬದ ಶುಭಾಶಯಗಳು. ಜಗತ್ತಿನಲ್ಲಿ ಶಾಂತಿ, ಸಮೃದ್ಧಿ ಸದಾ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಫೋಟೋಕ್ಕೆ ಕ್ಯಾಪ್ಷನ್​ ಬರೆದಿದ್ದರು.

ಆದರೆ, ಈ ಫೋಟೋಕ್ಕೆ ಮೂರು ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. ಹಾಗೇ ಹಲವು ವಿವಾದಾತ್ಮಕ ಕಾಮೆಂಟ್​ಗಳೂ ಬಂದಿವೆ.

ಮಾಧವನ್​ ಅವರು ಜನಿವಾರ ಧರಿಸಿಕೊಂಡಿದ್ದನ್ನು ಕೆಲವರು ಆಕ್ಷೇಪಿಸಿದ್ದರು. ಮತ್ತೊಂದಿಷ್ಟು ಜನ, ಅವರ ಮನೆಯ ಪೂಜಾ ಕೋಣೆಯಲ್ಲಿ ಏಸು ಕ್ರಿಸ್ತನ ಶಿಲುಬೆ ಇರುವುದು ಫೋಟೋದಲ್ಲಿ ಕಾಣುತ್ತಿದ್ದು ಆ ಬಗ್ಗೆ ತಕರಾರು ತೆಗೆದಿದ್ದರು. ಮಾಧವನ್​ ಫೇಕ್​ ಎಂದಿದ್ದರು.

ನೀವು ಹಿಂದು ಅಂತಾದ ಮೇಲೆ ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಕ್ರಿಶ್ಚಿಯನ್​ ಶಿಲುಬೆಯನ್ನೇಕೆ ಇಟ್ಟುಕೊಂಡಿದ್ದೀರಿ? ಯಾವುದೇ ಕ್ರಿಶ್ಚಿಯನ್​ ಚರ್ಚ್​ಗಳಲ್ಲಿ ಹಿಂದು ದೇವರ ಮೂರ್ತಿಯಾಗಲೀ, ಫೋಟೋ ಇರುವುದಾಗಲೀ ಎಂದಾದರೂ ನೋಡಿದ್ದಿರಾ? ನಿಮ್ಮ ಮೇಲಿನ ಗೌರವ ಕಳೆದುಹೋಯಿತು. ನಕಲಿ, ನಾಟಕವನ್ನೇಕೆ ಆಡುತ್ತೀರಿ ಎಂದು ಮಾಧವನ್​ ಫಾಲೋವರ್​ ಒಬ್ಬರು ಪ್ರಶ್ನಿಸಿದ್ದರು.

ಇದೆಲ್ಲ ಟೀಕೆಗಳಿಗೆ ಮಾಧವನ್​ ಖಡಕ್​ ಉತ್ತರವನ್ನು ತಮ್ಮ ಟ್ವಿಟರ್​ನಲ್ಲಿ ನೀಡಿದ್ದಾರೆ. ನನಗೆ ಎಲ್ಲ ಧರ್ಮವೂ ಒಂದೇ. ಪ್ರತಿ ಧರ್ಮವನ್ನೂ ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ನನಗೆ ನಿಮ್ಮಂತವರಿಂದ ಯಾವುದೇ ಗೌರವ ಪಡೆಯಬೇಕು ಎನ್ನಿಸುವುದಿಲ್ಲ. ನಿಮ್ಮ ರೋಗಪೀಡಿತ ಮನಸ್ಥಿತಿ ಶೀಘ್ರವೇ ಸರಿಯಾಗಲಿ ಎಂದು ಹಾರೈಸುತ್ತೇನೆ. ನನ್ನ ಮನೆಯ ಪೂಜಾ ಕೋಣೆಯಲ್ಲಿ ಗೋಲ್ಡನ್​ ಟೆಂಪಲ್​ ಕೂಡ ಇದೆ. ಅದನ್ನು ನೀವು ಗಮನಿಸದೆ ಇರುವುದು ಅಚ್ಚರಿ ತಂದಿದೆ. ಅದನ್ನು ನೋಡಿದರೆ ಸಿಖ್​ ಧರ್ಮಕ್ಕೆ ಮತಾಂತರಗೊಂಡಿರಾ ಎಂದು ಪ್ರಶ್ನೆ ಮಾಡುತ್ತಿದ್ದಿರೇನೋ. ಜಗತ್ತಿನ ಎಲ್ಲ ಧಾರ್ಮಿಕ ಕ್ಷೇತ್ರಗಳ ಆಶಿರ್ವಾದವೂ ನನ್ನ ಮೇಲೆ ಇದೆ ಎಂದು ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಮನೆಯಲ್ಲಿ ಎಲ್ಲ ಧರ್ಮಗಳಲ್ಲಿ ನಂಬಿಕೆ ಇಟ್ಟವರಿಗೂ ಸ್ಥಾನವಿದೆ. ಎಲ್ಲ ದೇವರಿಗೂ ಒಂದೇ ರೀತಿ ಪ್ರಾರ್ಥನೆ ಸಲ್ಲಿಸುತ್ತೇವೆ. ಪ್ರತಿಯೊಬ್ಬರನ್ನೂ ಆದರಿಸಬೇಕು, ಪ್ರತಿಯೊಂದು ಧರ್ಮವನ್ನೂ ಗೌರವಿಸಬೇಕು ಎಂಬುದನ್ನು ನಮಗೆ ಬಾಲ್ಯದಲ್ಲಿಯೇ ಪಾಲಕರು ಕಲಿಸಿದ್ದಾರೆ. ದರ್ಗಾ, ಗುರುದ್ವಾರ, ಚರ್ಚ್​, ದೇವಸ್ಥಾನ ಎಲ್ಲ ಕಡೆಯೂ ಹೋಗಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಟ್ವೀಟ್​ ಮಾಡಿದ್ದಾರೆ.

One Reply to “ನೀವು ಹಿಂದು ಅಂದಮೇಲೆ ಮನೆಯಲ್ಲೇಕೆ ಶಿಲುಬೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದ್ದವರಿಗೆ ನಟ ಮಾಧವನ್​ ಕೊಟ್ಟ ಖಡಕ್​ ಉತ್ತರ ಇದು…”

  1. ಮಾಧವನ್ ಅವರ ವಿಶ್ವಮಾನವತಾ ವಾದವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಅವಿವೇಕಿಗಳ ಕುತ್ಸಿತ ಅಭಿಪ್ರಾಯಗಳಿಗೆ ಅವರು ಮಣೆ ಹಾಕಬೇಕಾಗಿಲ್ಲ.

Leave a Reply

Your email address will not be published. Required fields are marked *