ನಾನೆಂದೂ ಸತ್ಯವನ್ನು ಮರೆಮಾಚುವುದಿಲ್ಲ

ಮೈಸೂರು: ನೀವು ನಿರೀಕ್ಷಿಸುವ ಶಿಕ್ಷಣ ವ್ಯವಸ್ಥೆಯಲ್ಲಿ ಇದೆಯೇ? ನಿಮ್ಮ ಕಾದಂಬರಿಯ ಮುಖ್ಯ ಉದ್ದೇಶ ಏನು? ನಿಮ್ಮ ಬಹುತೇಕ ಕಾದಂಬರಿಯಲ್ಲಿ ಒಂದು ಪದದ ಶೀರ್ಷಿಕೆ ಇರುತ್ತದೆ ಯಾಕೆ? ನೀವು ಸತ್ಯ ಮತ್ತು ಸೌಂದರ್ಯದಲ್ಲಿ ಯಾವುದನ್ನು ಹಿಂಬಾಲಿಸುತ್ತೀರಿ? ನಿಮ್ಮ ಕಾದಂಬರಿಯಲ್ಲಿ ಹೆಚ್ಚಾಗಿ ಮಹಿಳೆಯರನ್ನು ಟೀಕಿಸುತ್ತೀರೆಂಬ ಆರೋಪವಿದೆ?

ಇವು ಎಸ್.ಎಲ್. ಭೈರಪ್ಪ ಸಾಹಿತ್ಯೋತ್ಸವದಲ್ಲಿ ಡಾ. ಎಸ್.ಎಲ್.ಭೈರಪ್ಪ ಅವರಿಗೆ ಲೇಖಕಿ ಶೆಫಾಲಿ ವೈದ್ಯ ಕೇಳಿದ ಪ್ರಶ್ನೆಗಳು. ಭೈರಪ್ಪ ಅವರ ವೈಯಕ್ತಿಕ ಜೀವನ, ಸಾಹಿತ್ಯಗಳ ಬಗ್ಗೆ ತಮ್ಮಲ್ಲಿನ ಕುತೂಹಲಗಳನ್ನು ಪ್ರಶ್ನೆ ಮೂಲಕ ಹೊರಹಾಕಿದರು. ಭೈರಪ್ಪ ಕೂಡ ಎಲ್ಲ ಪ್ರಶ್ನೆಗಳಿಗೆ ದೀರ್ಘವಾಗಿಯೇ ಉತ್ತರಿಸಿದರು.

ಅವರು ಹೇಳಿದ್ದಿಷ್ಟು…

ಯಾವುದೇ ಒಂದು ಉದ್ದೇಶದಿಂದ ಸತ್ಯವನ್ನು ನಾನು ಎಂದೂ ಮರೆಮಾಚುವುದಿಲ್ಲ. ಆವರಣ ಕಾದಂಬರಿಯಲ್ಲಿ ಅನೇಕ ಸತ್ಯಗಳನ್ನು ಹೇಳಿದ್ದೇನೆ. ಒಬ್ಬರು ಟಿಪ್ಪು ಸುಲ್ತಾನ್ ದೇಶಭಕ್ತ ಎಂದು ನಮೂದಿಸುತ್ತಾರೆ. ಆದರೆ, ಆತ ನಡೆಸಿದ ಮಾರಣಹೋಮ ಬಗ್ಗೆ ಪ್ರಶ್ನಿಸಿದರೆ, ಆ ವ್ಯಕ್ತಿ ‘ನಾನು ನಾಟಕವನ್ನಷ್ಟೇ ಬರೆದಿದ್ದೇನೆ. ಉಳಿದ ವಿಷಯ ನನಗೆ ಗೊತ್ತಿಲ್ಲ’ ಎಂದು ಉತ್ತರಿಸುತ್ತಾರೆ. ಈ ರೀತಿ ಹೇಳುವವರನ್ನು ಒಪ್ಪುವುದಿಲ್ಲ. ಐತಿಹಾಸಿಕ ವಿಷಯ ಬಂದಾಗ ಅಗತ್ಯ ದಾಖಲೆ ಒದಗಿಸಬೇಕು. ಸಾರ್ಥ, ಆವರಣದಲ್ಲಿ ನಮೂದಿಸಿರುವ ಶಿವಾಜಿ-ಔರಂಗಜೇಬನನ್ನು ರಿ-ಪೇಂಟ್ ಮಾಡಿಲ್ಲ, ಸತ್ಯವನ್ನೇ ದಾಖಲಿಸಿದ್ದೇನೆ. ಎಲ್ಲ ಪಾತ್ರಕ್ಕೂ ಮುಕ್ತ ಸ್ವಾತಂತ್ರ್ಯ ನೀಡುತ್ತೇನೆ.

ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಇಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಅಲ್ಲಿ ರಾಮಮಂದಿರ ನಿರ್ವಿುಸಲು ಹೋರಾಟ ನಡೆಯುತ್ತಿದೆ ಎಂದು ಕೆಲವರು ಬೊಬ್ಬೆ ಹಾಕುತ್ತಾರೆ. ಎಲ್ಲ ಸಮಸ್ಯೆಗೂ ಹಿಂದುತ್ವವೇ ಕಾರಣ ಎಂಬುದು ಸುಳ್ಳು. ರಾಮಮಂದಿರ ನಿರ್ಮಾಣ ವಿಷಯವನ್ನು ಸ್ಥಳೀಯ ಸಮಸ್ಯೆಗಳ ಜತೆ ತಳುಕು ಹಾಕುವುದು ಸರಿಯಲ್ಲ.

ನನ್ನನ್ನು ಕಾದಂಬರಿಕಾರನನ್ನಾಗಿ ಮಾಡಿದ್ದು ‘ವಂಶವೃಕ್ಷ’ ಕಾದಂಬರಿ. ‘ಪರ್ವ’ ಹೊಸ ಅನುಭವ ನೀಡಿತು. ನನ್ನಲ್ಲಿದ್ದ ತಾಂತ್ರಿಕ ಬರಹವನ್ನು ‘ಆವರಣ’ ಕಾದಂಬರಿ ಹೊರ ಹಾಕಿತು.

ಯಾವುದೇ ಕಾದಂಬರಿ ಬರೆಯುವಾಗಲೂ ಎಲ್ಲ ಪಾತ್ರಗಳ ಸಂಪೂರ್ಣ ಜವಾಬ್ದಾರಿ ಲೇಖಕರ ಮೇಲಿರುತ್ತದೆ. ಸಮಾಜದ ಯಾವ ಕಾಲಘಟ್ಟದಲ್ಲಾದರೂ ಇರಲಿ, ಸ್ವರೂಪ ಬದಲಾಯಿಸಲು ಆಗಲ್ಲ. ಪಾತ್ರದ ಮೂಲಕ ಅದನ್ನು ಗುರುತಿಸಬಹುದಷ್ಟೇ. ವಿದೇಶ ಪ್ರವಾಸಗಳು ನನಗೆ ಸಾಕಷ್ಟು ಒಳನೋಟಗಳನ್ನು ನೀಡಿದವು. ಹೋದಲ್ಲೆಲ್ಲ ಪುಸ್ತಕಗಳನ್ನು ಖರೀದಿಸಿ ಓದಿದೆ. ಅದರಿಂದ ಒಬ್ಬ ಕಾದಂಬರಿಕಾರನಾಗಿ ಬೆಳೆಯಲು ಸಾಧ್ಯವಾಯಿತು.

ನನಗೆ ನಮ್ಮ ದೇಶದಲ್ಲಿ ಹಾಗೂ ಬೇರೆ ದೇಶಗಳಲ್ಲಿ ಮಾನವ ಸಂಬಂಧ ಹೇಗಿದೆ ಎಂದು ತಿಳಿಯುವ ಕುತೂಹಲ ಇದೆ. ಯಾವುದರಲ್ಲೂ ಗೊಂದಲ ಉಂಟು ಮಾಡಲು ನಾನು ತಯಾರಿಲ್ಲ.

ಭಾರತ ವೈವಿಧ್ಯವಾದ ಸಂಪ್ರದಾಯಗಳನ್ನು ಹೊಂದಿರುವ ಸಾಂಸ್ಕೃತಿಕ ದೇಶ. ಬೇರೆ ಬೇರೆ ಧರ್ಮ- ಆಚರಣೆಗಳು ನಮ್ಮಲ್ಲಿವೆ. ನಾನು ಯಾವುದೇ ದೇಶಕ್ಕೆ ಹೋದರೂ ಅಲ್ಲಿಂದ ಕೆಲ ಪುಸ್ತಕಗಳನ್ನು ತಂದು ಓದುತ್ತೇನೆ. ಇದರಿಂದ ನನ್ನಲ್ಲಿರುವ ಬರಹಗಾರನ ಜ್ಞಾನ ವಿಸ್ತಾರವಾಗಿದೆ ಎಂದ ಅವರು, ಟರ್ಕಿ ದೇಶದ ರಾಜನೊಬ್ಬನ ಇತಿಹಾಸ ಹೇಳಿ ಇಡೀ ದೇಶ ಮತ್ತು ವಿಶ್ವದ ಹಲವು ಕಡೆ ಸುತ್ತಾಡಿದರೂ ಪ್ರವಾಸ ಕಥನ ಏಕೆ ಬರೆದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದರು.

ನನ್ನ ಕಾದಂಬರಿಗಳ ಮಹಿಳೆಯರ ಪಾತ್ರಗಳಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಅವರವರ ಮನಸ್ಥಿತಿಗೆ ಬರುವ ಆಲೋಚನೆ ಬಿಂಬಿಸಿದ್ದೇನೆ. ಎಲ್ಲವೂ ರಾಮಾಯಣ-ಮಹಾಭಾರತದ ಪಾತ್ರಗಳೇ ಆದರೂ, ಆಯಾ ಕಾಲಘಟ್ಟಕ್ಕೆ ತಕ್ಕಂತೆ ಆಲೋಚನೆ ಬದಲಾಗುತ್ತದೆ. ನಾನು ಮಹಿಳಾ ವಿರೋಧಿ ಅಲ್ಲ. ನನ್ನ ಕಾದಂಬರಿಗಳ ಎಲ್ಲ ಮಹಿಳಾ ಪಾತ್ರಗಳಿಗೂ ನ್ಯಾಯ ಒದಗಿಸಿದ್ದೇನೆ.

ನನ್ನನ್ನು ಟೀಕಿಸುವವರಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಟೀಕೆಗಳನ್ನು ನಿರ್ಲಕ್ಷಿಸುತ್ತೇನೆ. ಕಾಲೆಳೆಯುವವರಿಗೆಲ್ಲ ಉತ್ತರಿಸುತ್ತಿದ್ದರೆ ನಮ್ಮ ಸೃಜನಶೀಲತೆಗೆ ಅಡ್ಡಿ ಉಂಟಾಗುತ್ತದೆ.

ನೀವು ನಿರೀಕ್ಷಿಸುವ ಶಿಕ್ಷಣ ವ್ಯವಸ್ಥೆಯಲ್ಲಿದೆಯೇ ಎಂಬುದಕ್ಕೆ ಉತ್ತರಿಸಿದ ಅವರು, ಬ್ರಿಟಿಷರ ಆಳ್ವಿಕೆಯಲ್ಲಿ ಮೆಕಾಲೆ ಜಾರಿಗೆ ತಂದಿದ್ದ ಮಾದರಿಯಲ್ಲೇ ಇದೆ. ಅದು ಬದಲಾಗಬೇಕು ಎಂದು ರೈಲ್ವೆ ನಿಲ್ದಾಣಕ್ಕೆ ಬರುವ ವಿದ್ಯಾರ್ಥಿ ರೈಲು ಟಿಕೆಟ್​ಗಿಂತಲೂ ಕೂಲಿಯವರಿಗೆ ಹೆಚ್ಚು ಹಣ ಕೊಡುವ ಉದಾಹರಣೆ ನೀಡಿದರು. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ‘ಗುರುಕುಲ ಪ್ರಭೋಧಿನಿ’ ಶಾಲೆಯಲ್ಲಿ ತಾವು ಕಂಡ ವ್ಯವಸ್ಥೆ ನೆನಪು ಮಾಡಿಕೊಂಡರು.

ಎರಡು ದಿನಗಳ ಭೈರಪ್ಪ ಸಾಹಿತ್ಯೋತ್ಸವಕ್ಕೆ ಚಾಲನೆ

ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದಿಂದ ನಗರದ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ‘ಎಸ್.ಎಲ್. ಭೈರಪ್ಪ ಸಾಹಿತ್ಯೋತ್ಸವ-2019’ಕ್ಕೆ ಶನಿವಾರ ವಿಧ್ಯುಕ್ತ ಚಾಲನೆ ದೊರೆಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿದರು. ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಭೈರಪ್ಪ ಅಭಿಮಾನಿಗಳು ಆಗಮಿಸಿ ಸಾಹಿತ್ಯೋತ್ಸವ ಕಳೆಗಟ್ಟುವಂತೆ ಮಾಡಿದರು.

ಮೊದಲ ದಿನ ಶತಾವಧಾನಿ ಡಾ.ಆರ್.ಗಣೇಶ್, ಪ್ರೊ.ಎಂ.ಕೃಷ್ಣೇಗೌಡ, ಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಭಾಷಾತಜ್ಞ ಡಾ.ಪ್ರಧಾನ ಗುರುದತ್ತ, ಲೇಖಕಿ ಶೆಫಾಲಿ ವೈದ್ಯ ಅವರು ಭೈರಪ್ಪ ಅವರ ಕಾದಂಬರಿಗಳ ಕುರಿತು ಮಾತನಾಡಿದರು.

ಡಾ.ಎಸ್.ಎಲ್.ಭೈರಪ್ಪ ಜತೆಗಿನ ಸಂದರ್ಶನಗಳ ಸಂಕಲನ ‘ಚಿಂತನ-ಮಂಥನ’ ಕೃತಿಯನ್ನು ಡಾ.ಪ್ರಧಾನ ಗುರುದತ್ತ ಬಿಡುಗಡೆ ಮಾಡಿದರು. ಪಿ.ಶೇಷಾದ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಎಸ್.ಎಲ್.ಭೈರಪ್ಪ ಸಂದರ್ಶನದ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು. ಲೇಖಕಿ ಶೆಫಾಲಿ ವೈದ್ಯ ಎಸ್.ಎಲ್.ಭೈರಪ್ಪನವರ ಸಂದರ್ಶನ ನಡೆಸಿದರು.

ಡಾ.ಕೆ.ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಆಧಾರಿತ ಸಿನಿಮಾದ ಪ್ರೊಮೋ ಎಸ್.ಎಲ್.ಭೈರಪ್ಪ ಬಿಡುಗಡೆಗೊಳಿಸಿದರು.

ಸಂಜೆ ಪಂಡಿತ್ ನಾಗರಾಜ್​ರಾವ್ ಹವಾಲ್ದಾರ್ ಅವರ ಸುಶ್ರಾವ್ಯ ಕಂಠದಿಂದ ಹಿಂದೂಸ್ತಾನಿ ಗಾಯನವನ್ನು ಸಾಹಿತ್ಯಾಭಿಮಾನಿಗಳು ಆಸ್ವಾದಿಸಿದರು. ಬಳಿಕ ಡಾ.ಬಿ.ವಿ.ರಾಜಾರಾಂ ನಿರ್ದೇಶನದಲ್ಲಿ ‘ಮಂದ್ರ’ ನಾಟಕ ಪ್ರದರ್ಶನ ನಡೆಯಿತು.

ರಾಜ್ಯ ಮತ್ತು ನೆರೆಯ ರಾಜ್ಯಗಳಿಂದಲೂ ಭೈರಪ್ಪ ಅವರ ಅಭಿಮಾನಿಗಳು ಬಂದಿದ್ದರಿಂದ ಕಲಾಮಂದಿರದ ಸಭಾಂಗಣ ಭರ್ತಿಯಾಗಿತ್ತು. ಭೈರಪ್ಪರಿಂದ ಹಸ್ತಾಕ್ಷರ ಪಡೆಯಲು ಮತ್ತು ಸೆಲ್ಪಿ ತೆಗೆದುಕೊಳ್ಳಲು ನಾಗರಿಕರು ಮುಗಿಬಿದ್ದರು.

ಜನಪ್ರಿಯತೆಯಲ್ಲಿ ವ್ಯಾಸ-ವಾಲ್ಮೀಕಿಗೆ ಭೈರಪ್ಪ ಸಮಾನ

ಜನಪ್ರಿಯತೆಯಲ್ಲಿ ಡಾ.ಎಸ್.ಎಲ್.ಭೈರಪ್ಪ ಅವರು ವ್ಯಾಸ ಮತ್ತು ವಾಲ್ಮೀಕಿ ಅವರ ಸರಿಸಮಾನವಾಗಿ ನಿಲ್ಲುತ್ತಾರೆ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಬಣ್ಣಿಸಿದರು.

ಭೈರಪ್ಪ ಸಾಹಿತ್ಯೋತ್ಸವ- 2019 ಉದ್ಘಾಟಿಸಿದ ಅವರು, ಕುಮಾರವ್ಯಾಸರಲ್ಲೂ ಬಾರದಷ್ಟು ಕಥನಾ ವ್ಯಾಪ್ತಿ ಭೈರಪ್ಪ ಅವರಲ್ಲಿದೆ. ನೊಬೆಲ್ ಪುರಸ್ಕಾರ ಪಡೆದ ರವೀಂದ್ರನಾಥ್ ಟ್ಯಾಗೋರ್ ತುಂಬ ಜನಪ್ರಿಯ. ಆದರೆ, ಭೈರಪ್ಪ ಅವರು ಇದೇನೂ ಇಲ್ಲದೆ ಇಡೀ ದೇಶದಲ್ಲೇ ಜನಪ್ರಿಯತೆ ಗಳಿಸಿದ್ದಾರೆ ಎಂದರು. ಇಂಗ್ಲಿಷ್ ಶಿಕ್ಷಣ ಮಾಧ್ಯಮ ಸಂಬಂಧ ತಕ್ಷಣ ಪ್ರತಿಕ್ರಿಯೆ ನೀಡಿದ್ದು ಭೈರಪ್ಪ ಮಾತ್ರ. ಆದರೆ, ರಾಜಕಾರಣಿಗಳು ಶಿಕ್ಷಣ ತಜ್ಞ ನಾನೇ, ಪರಿಸರ ತಜ್ಞನೂ ನಾನೇ ಎಂಬ ಸ್ಥಿತಿಯಲ್ಲಿದ್ದಾರೆ. ಹೀಗಾಗಿ, ರಾಜಕಾರಣಿಗಳ ಮುಂದೆ ಭೈರಪ್ಪ ಮತ್ತು ನಾವು ಮರೆಯಾಗುವುದು ಸಹಜ. ಒಂದಲ್ಲ ಒಂದು ದಿನ ನಮ್ಮ ತಜ್ಞತೆ ತೋರಿಸುವ ಅವಕಾಶ ಬರುತ್ತದೆ ಎಂದರು.

ಭೈರಪ್ಪನವರ ಸಾಹಿತ್ಯ ಓದಿನಿಂದ ಖá-ಷಿ: ವೇದಾಂತ, ಮೀಮಾಂಸೆ, ಸಮಾಜಶಾಸ್ತ್ರ, ಇತಿಹಾಸ ಓದುವ ಬದಲಿಗೆ ಭೈರಪ್ಪನವರ ಸಾಹಿತ್ಯ ಓದಿದರೂ ಸಾಕು ಖುಷಿ ಸಿಗುತ್ತದೆ. ಅವರು ಭಾವುಕರಲ್ಲ, ಭಾವಶೀಲರು ಎಂದು ಶತಾವಧಾನಿ ಡಾ.ಆರ್. ಗಣೇಶ್ ಅಭಿಪ್ರಾಯಪಟ್ಟರು.

ಎಸ್.ಎಲ್. ಭೈರಪ್ಪ ಒಬ್ಬರನ್ನೇ ಎದುರಿಗೆ ನಿಲ್ಲಿಸಿಕೊಂಡು ಸಾಹಿತ್ಯದ ದೊಡ್ಡಪಡೆ ಯಾವಾಗಲೂ ಬಾಣ ಬಿಡುತ್ತಿದೆ. ಆದರೆ, ಭೈರಪ್ಪನವರು ಮಾತ್ರ ಯಾವ ಬಾಣಕ್ಕೂ ಜಗ್ಗುತ್ತಿಲ್ಲ. ಯಾವ ಕಾರಣಕ್ಕಾಗಿ ಭೈರಪ್ಪನವರನ್ನು ಬಹಳ ಜನ ನಿಂದಿಸುತ್ತಿದ್ದಾರೋ ಅದೇ ಕಾರಣಕ್ಕಾಗಿ ಭೈರಪ್ಪನವರನ್ನು ಅಪಾರ ಜನ ಇಷ್ಟಪಡುತ್ತಿದ್ದಾರೆ, ಅದರಲ್ಲಿ ನಾನೂ ಒಬ್ಬ.

| ಪ್ರೊ.ಎಂ. ಕೃಷ್ಣೇಗೌಡ ಸಾಹಿತಿ