ನಾನು ದೇವರ ಬಳಿ ನನಗಾಗಿ ಏನನ್ನೂ ಬೇಡಿಕೊಂಡಿಲ್ಲ, ನನ್ನ ದೇಶ, ಜನರ ಒಳಿತಿಗೆ ಪ್ರಾರ್ಥಿಸಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆಯಿಂದ ಉತ್ತರಖಾಂಡ ಪ್ರವಾಸದಲ್ಲಿ ಇದ್ದಾರೆ. ನಿನ್ನೆ ಕೇದಾರನಾಥ್​ ದೇಗುಲಕ್ಕೆ ಭೇಟಿ ನೀಡಿ ಸುಮಾರು ಒಂದೂವರೆ ತಾಸು ಪ್ರಾರ್ಥನೆ ಸಲ್ಲಿಸಿದ್ದರು.

ಉತ್ತರಖಾಂಡದ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಪೂಜೆಯಲ್ಲಿ ಪಾಲ್ಗೊಂಡ ಮೋದಿಯವರು ಅದಾದ ಬಳಿಕ ಎರಡು ಕಿಲೋಮೀಟರ್​ಗಳಷ್ಟು ಗುಡ್ಡ ಹತ್ತಿ ಕೇದಾರ್​ನಾಥ್​ ಮಠದ ಗುಹೆಯೊಳಗೆ ಧ್ಯಾನಕ್ಕೆ ಕುಳಿತರು. ಇಂದು ಬೆಳಗಿನ ಜಾವದವರೆಗೆ ಸುಮಾರು 18 ಗಂಟೆ ಧ್ಯಾನಸ್ಥರಾಗಿದ್ದ ಪ್ರಧಾನಿ ಮೋದಿ ಅಲ್ಲಿಂದ ಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಅದೆಷ್ಟೋ ವರ್ಷಗಳ ಬಳಿಕ ನಾನು ಈ ಪವಿತ್ರಕ್ಷೇತ್ರ ಕೇದಾರ್​ನಾಥ್​ಗೆ ಆಗಮಿಸಿದ್ದೇನೆ. ಏಕಾಂತದಲ್ಲಿ ಕೆಲ ಸಮಯ ಕಳೆದಿದ್ದೇನೆ. ಇದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಈ ಪ್ರದೇಶದ ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವುದು ನನ್ನ ಉದ್ದೇಶ ಎಂದು ತಿಳಿಸಿದರು.

ಕೇದಾರನಾಥ ದೇವರಲ್ಲಿ ಏನು ಬೇಡಿಕೊಂಡಿರಿ? ಲೋಕಸಭಾ ಚುನಾವಣೆಯ ಗೆಲುವಿಗಾಗಿ ಪ್ರಾರ್ಥಿಸಿದಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನಾನು ಯಾವತ್ತೂ ದೇವರ ಬಳಿ ನನಗಾಗಿ ಏನನ್ನೂ ಬೇಡಿಕೊಳ್ಳುವುದಿಲ್ಲ. ನಾವು ನಮಗಾಗಿ ದೇವರ ಬಳಿ ಪ್ರಾರ್ಥಿಸಿಕೊಳ್ಳುವ ಪ್ರವೃತ್ತಿ ನನ್ನದಲ್ಲ. ಅವನು ನಮಗೆ ಏನು ಕೊಡಬೇಕೋ ಕೊಡುತ್ತಾನೆ. ನಾವು ಆಗ್ರಹಿಸುವ ಅಗತ್ಯವಿಲ್ಲ. ನಾನು ಈ ದೇಶಕ್ಕಾಗಿ, ದೇಶದ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದೇನೆ. ಚುನಾವಣೆ ಗೆಲುವಿನ ಬಗ್ಗೆಯೂ ಕೇಳಿಲ್ಲ ಎಂದರು.

ಉತ್ತರಖಾಂಡದ ಕೇದಾರನಾಥಕ್ಕೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಭೇಟಿ ಕೊಡಿ ಎಂದು ದೇಶದ ಜನರಿಗೆ ತಿಳಿಸಿದ ಮೋದಿಯವರು, ಇಲ್ಲಿನ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸ ಪ್ರಾರಂಭಿಸಲಾಗಿದೆ. ಕೇದಾರನಾಥ್​ದಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿಡಿಯೋ ಮೂಲಕವೇ ಮೇಲ್ವಿಚಾರಣೆ ಮಾಡಲಾಗುವುದು. ನಮ್ಮ ದೇಶದ ಜನರು ಸಿಂಗಾಪುರ, ಮತ್ತಿತರ ವಿದೇಶೀ ಸ್ಥಳಗಳಿಗೆ ಹೋಗುವ ಬದಲು ನಮ್ಮದೇ ದೇಶದ ಕೇದಾರನಾಥ್​ದಂಥ ಪವಿತ್ರ, ಸುಂದರ ಕ್ಷೇತ್ರಗಳಿಗೆ ಆಗಮಿಸಬೇಕು ಎಂದು ಕರೆ ನೀಡಿದರು.

ಮಾಧ್ಯಮದವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಚುನಾವಣೆ ವೇಳೆಯಲ್ಲಿ ಮಾಧ್ಯಮದವರ ಮೇಲೆ ಮಾನಸಿಕ ಹಾಗೂ ದೈಹಿಕ ಒತ್ತಡವಿರುತ್ತದೆ ಎಂದ ಮೋದಿಯವರು, ಚುನಾವಣಾ ಆಯೋಗಕ್ಕೂ ಧನ್ಯವಾದ ತಿಳಿಸಿದರು.

ಖಾವಿ ಶಾಲು ಹೊದ್ದು ಗುಹೆಯಲ್ಲಿ ಧ್ಯಾನಸ್ಥರಾಗಿರುವ ಫೋಟೋಗಳು ಈಗಾಗಲೇ ವೈರಲ್​ ಆಗಿವೆ. ಅಲ್ಲಿಂದ ಹೊರಬಂದು ಮಾಧ್ಯಮದವರ ಜತೆ ಮಾತನಾಡುವುದಕ್ಕೂ ಮೊದಲು ಜನರೆಡೆಗೆ ಕೈ ಬೀಸುತ್ತ ಹರ ಹರ ಮಹದೇವ ಎಂದು ಹೇಳುತ್ತ, ಅದನ್ನು ಹೇಳುವಂತೆ ನೆರೆದಿದ್ದ ಜನರಿಗೂ ಹೇಳಿದರು.
ನಂತರ ಅವರು ಕೇದಾರನಾಥ್​ದ ಅಭಿವೃದ್ಧಿ ಕಾರ್ಯಕ್ರಮಗಳ ವೀಕ್ಷಣೆಗೆ ತೆರಳಿದರು.

 

Leave a Reply

Your email address will not be published. Required fields are marked *