ಸುರೇಂದ್ರನಗರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಹಾರ್ದಿಕ್​ಗೆ ತರುಣ್​ ಹೊಡೆದದ್ದೇಕೆ?

ಸುರೇಂದ್ರನಗರ: ನನ್ನ ಪತ್ನಿ ಗರ್ಭಿಣಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾಗ ಮತ್ತು ನನ್ನ ಮಗುವಿಗೆ ಅನಾರೋಗ್ಯವಾಗಿದ್ದಾಗ ಪಾಟಿದಾರ್​ ಆಂದೋಲನದಿಂದ ಸಕಾಲದಲ್ಲಿ ಔಷಧ ತಂದುಕೊಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪಾಟಿದಾರ್​ ಆಂದೋಲನದ ನೇತೃತ್ವ ವಹಿಸಿದ್ದ ಹಾರ್ದಿಕ್​ಗೆ ಹೊಡೆಯಲು ಅಂದೇ ನಿರ್ಧರಿಸಿದ್ದೆ. ಇದೀಗ ಅವಕಾಶ ಸಿಕ್ಕಿದ್ದರಿಂದ, ಆತನಿಗೆ ಹೊಡೆದೆ ಎಂದು ಹಾರ್ದಿಕ್​ ಪಟೇಲ್​ಗೆ ಕಪಾಳಮೋಕ್ಷ ಮಾಡಿದ ತರುಣ್​ ಗಜ್ಜಾರ್​ ಹೇಳಿದ್ದಾರೆ.

ಸುರೇಂದ್ರನಗರದಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಹಾರ್ದಿಕ್​ ಪಟೇಲ್​ ಭಾಷಣ ಮಾಡುತ್ತಿದ್ದಾಗ ಹಠಾತ್ತನೆ ವೇದಿಕೆ ಏರಿ ಬಂದ ತರುಣ್​ ಗಜ್ಜಾರ್​ ಕಪಾಳಮೋಕ್ಷ ಮಾಡಿದ್ದರು. ವೇದಿಕೆ ಮೇಲಿದ್ದವರು ಮತ್ತು ಕಾಂಗ್ರೆಸ್​ ಕಾರ್ಯಕರ್ತರು ತರುಣ್ ಅವರನ್ನು ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

ಸುರೇಂದ್ರನಗರ ಪೊಲೀಸ್​​ ಠಾಣೆಗೆ ತೆರಳಿದ್ದ ಹಾರ್ದಿಕ್​ ಪಟೇಲ್​ ತರುಣ್​ ವಿರುದ್ಧ ದೂರು ದಾಖಲಿಸಿದ್ದರು. ಥಳಿತದಿಂದ ಗಾಯಗೊಂಡಿದ್ದ ತರುಣ್​ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ತರುಣ್​ ಸುದ್ದಿಗಾರರೊಂದಿಗೆ ಮಾತನಾಡಿದರು.

ನನ್ನ ಪತ್ನಿ ತುಂಬು ಗರ್ಭಿಣಿಯಾಗಿದ್ದಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಆ ಸಂದರ್ಭದಲ್ಲಿ ಪಾಟಿದಾರ್​ ಆಂದೋಲನದ ಪ್ರತಿಭಟನೆಯಿಂದಾಗಿ, ಆಕೆಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ತೊಂದರೆಯಾಗಿತ್ತು. ಆಗಲೇ ಈ ವ್ಯಕ್ತಿಗೆ ಹೊಡೆದು, ಬುದ್ದಿಕಲಿಸಬೇಕು ಎಂದು ನಿರ್ಧರಿಸಿದ್ದೆ. ಅಹ್ಮದಾಬಾದ್​ನಲ್ಲಿ ನನ್ನ ಮಗುವಿಗೆ ಅನಾರೋಗ್ಯ ಉಂಟಾಗಿತ್ತು. ಆಗ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದೆ. ವೈದ್ಯರು ಹೇಳಿದ ಔಷಧ ತರಲು ಹೋದಾಗ, ಪಾಟಿದಾರ್​ ಆಂದೋಲನದಿಂದಾಗಿ ಔಷಧದ ಅಂಗಡಿಗಳೆಲ್ಲವೂ ಮುಚ್ಚಿದ್ದವು. ಆಗ ಹಾರ್ದಿಕ್​ ಮೇಲಿನ ಕೋಪ ಮತ್ತಷ್ಟು ಹೆಚ್ಚಾಗಿತ್ತು. ಅಂದಿನಿಂದಲೂ ಹಾರ್ದಿಕ್​ಗೆ ಹೊಡೆಯಲು ಅವಕಾಶಕ್ಕಾಗಿ ಕಾಯುತ್ತಿದ್ದೆ. ಸುರೇಂದ್ರನಗರದಲ್ಲಿ ಇಂದು ಆ ಅವಕಾಶ ಸಿಕ್ಕಿತು. ಅದನ್ನು ಬಳಸಿಕೊಂಡೆ ಎಂದು ತರುಣ್​ ಹೇಳಿದ್ದಾರೆ.

One Reply to “ಸುರೇಂದ್ರನಗರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಹಾರ್ದಿಕ್​ಗೆ ತರುಣ್​ ಹೊಡೆದದ್ದೇಕೆ?”

Comments are closed.