ಮುಂದಿನ ಪ್ರಧಾನಿ ಅಭ್ಯರ್ಥಿ ನಿತಿನ್‌ ಗಡ್ಕರಿ? ಗಡ್ಕರಿ ಬಿಚ್ಚಿಟ್ಟ ಸತ್ಯ ಇಲ್ಲಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬದಲಾಗಿ ಬಿಜೆಪಿಯ ಸೈದ್ಧಾಂತಿಕ ಗುರು ಆರ್‌ಎಸ್‌ಎಸ್‌ ನಿತಿನ್‌ ಗಡ್ಕರಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಿದೆ ಎನ್ನುವ ಯಾವುದೇ ಯೋಜನೆ ಆರ್‌ಎಸ್‌ಎಸ್‌ ಮುಂದೆ ಇಲ್ಲ ಮತ್ತು ನನಗೂ ಕೂಡ ಆ ರೀತಿಯ ಆಕಾಂಕ್ಷೆಗಳಿಲ್ಲ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಈ ರೀತಿಯ ಯೋಚನೆಗಳು ನನ್ನಲ್ಲಿ ಅಥವಾ ಆರ್‌ಎಸ್‌ಎಸ್‌ನಲ್ಲಾಗಲಿ ಇಲ್ಲ. ರಾಷ್ಟ್ರವೇ ನಮಗೆ ಸರ್ವೋತ್ತಮವಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ನಾನು ಕನಸನ್ನು ಕಾಣುತ್ತಿಲ್ಲ. ಯಾರ ಬಳಿಗೂ ಹೋಗುವುದಿಲ್ಲ ಅಥವಾ ಆ ರೀತಿಯಾಗಿ ಯಾವುದೇ ಲಾಭಿಯನ್ನು ಮಾಡುವುದಿಲ್ಲ. ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ನಾನಿಲ್ಲ. ಇದನ್ನು ನಾನು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ.

ಬಿಜೆಪಿಯ ನಾಯಕತ್ವ ಬದಲಾವಣೆಗೆ ಆರ್‌ಎಸ್‌ಎಸ್‌ ಮುಂದಾಗಿದ್ದು, ನರೇಂದ್ರ ಮೋದಿ ಮತ್ತು ಪಕ್ಷದ ನಾಯಕತ್ವದ ಕುರಿತು ವಿಪಕ್ಷಗಳು ಟೀಕೆಗೆ ಗುರಿಮಾಡಿದ ಬೆನ್ನಲ್ಲೇ ಉತ್ತಮ ಕಾರ್ಯಗಳನ್ನು ಮಾಡುತ್ತಿರುವ ನರೇಂದ್ರ ಮೋದಿಜಿ ಅವರ ಹಿಂದೆ ನಾವೆಲ್ಲರೂ ದೃಢವಾಗಿ ನಿಂತಿದ್ದೇವೆ. ರಾಜಕೀಯದಲ್ಲಿ ನಾನು ಯಾವುದೇ ಲೆಕ್ಕಾಚಾರ ಮಾಡಿಲ್ಲ. ಯಾವುದೇ ಗುರಿಗಳನ್ನು ಹೊಂದಿಲ್ಲ. ನನ್ನ ದಾರಿಯನ್ನೇ ನಾನು ಅನುಸರಿಸುತ್ತೇನೆ. ನನಗೆ ಯಾವುದನ್ನೇ ವಹಿಸಿದರು ಅದನ್ನು ಮಾಡಿ ಮುಗಿಸುತ್ತೇನೆ ಎಂದು ಹೇಳಿದರು. (ಏಜೆನ್ಸೀಸ್)