ಅಟಲ್​ಜಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ, ಮೋದಿ ಸಂತಾಪ

ನವದೆಹಲಿ: ಅಜಾತಶತ್ರು ಎಂದೇ ಹೆಸರಾಗಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ರಾತ್ರಿ 7.30ಕ್ಕೆ ವಾಜಪೇಯಿ ನಿವಾಸಕ್ಕೆ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತದೆ.

ದೆಹಲಿಯ 6A ಕೃಷ್ಣ ಮೆನನ್ ಮಾರ್ಗದಲ್ಲಿರುವ ಅಟಲ್‌ಜಿ ನಿವಾಸದಲ್ಲಿ ವಾಜಪೇಯಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ ತಯಾರಿ ನಡೆಯುತ್ತಿದೆ.

ವಾಜಪೇಯಿ ನಿಧನಕ್ಕೆ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದು, ಮಾಜಿ ಪ್ರಧಾನಿ ವಾಜಪೇಯಿ ನಿಧನ ದುಃಖ ತಂದಿದೆ. ಸ್ವಲ್ಪ ಸಮಯದ ಬಳಿಕ ನಿವಾಸಕ್ಕೆ ಪಾರ್ಥಿವ ಶರೀರ ರವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶಕ್ಕಾಗಿಯೇ ಬದುಕಿದ್ದರು

ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದು, ಭಾರತ ನಮ್ಮ ಅಚ್ಚುಮೆಚ್ಚಿನ ಅಟಲ್​ಜಿ ಅವರ ಮರಣದ ದುಃಖದಲ್ಲಿದೆ. ಅವರ ನಿಧನದಿಂದಾಗಿ ಒಂದು ಯುಗದ ಅಂತ್ಯವಾಗಿದೆ. ಅವರು ದೇಶಕ್ಕಾಗಿಯೇ ಬದುಕಿದ್ದರು ಮತ್ತು ದಶಕಗಳ ಕಾಲ ದೇಶಕ್ಕಾಗಿಯೇ ದೃಢವಾಗಿ ಸೇವೆ ಸಲ್ಲಿಸಿದರು. ನನ್ನ ಆಲೋಚನೆಗಳ ಪ್ರಕಾರ ಅವರ ಕುಟುಂಬ, ಬಿಜೆಪಿ ಕಾರ್ಯಕರ್ತರು ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಓಂ ಶಾಂತಿ ಎಂದು ಶಾಂತಿ ಮಂತ್ರ ಜಪಿಸಿದ್ದಾರೆ.

ಶ್ರೇಷ್ಠ ಮುತ್ಸದ್ಧಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪ್ರತಿಕ್ರಿಯಿಸಿ, ವಾಜಪೇಯಿ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ. ಅವರ ನಿಧನದಿಂದಾಗಿ ಒಂದು ಯುಗವೇ ಅಂತ್ಯವಾಗಿದ್ದು, ಅವರೊಬ್ಬ ಶ್ರೇಷ್ಠ ಮುತ್ಸದ್ಧಿಯಾಗಿದ್ದರು ಎಂದು ಟ್ವೀಟ್‌ ಮಾಡಿದ್ದಾರೆ. (ಏಜೆನ್ಸೀಸ್)