ಈ ಪಾಕಿಸ್ತಾನಿ ಯುವಕನಿಗೆ ಭಾರತವೇ ಇಷ್ಟವಂತೇ

ನವದೆಹಲಿ: ಭಾರತದಲ್ಲಿ ಇಷ್ಟು ದಿನ ಬಂಧಿಯಾಗಿದ್ದ ಪಾಕಿಸ್ತಾನದ ಈ ಯುವಕ ತನ್ನ ದೇಶಕ್ಕೆ ಹೋಗಲು ಇಷ್ಟವೇ ಪಡುತ್ತಿಲ್ಲ. ನಾನು ಇಲ್ಲೇ ಇರುತ್ತೇನೆ. ನನಗೊಂದು ಅವಕಾಶ ಕೋಡಿ ಎಂದು ಇನ್ನಿಲ್ಲದಂತೆ ಬೇಡಿಕೊಳ್ಳುತ್ತಿದ್ದಾನೆ.

ಅನಧಿಕೃತವಾಗಿ ವಾಘಾ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ ಕಾರಣಕ್ಕೆ ಅಶ್ಫಕ್​ ಅಲಿ ಎಂಬ 16ರ ಪ್ರಾಯದ ಯುವಕನನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಒಂದು ವರ್ಷದಿಂದ ಭಾರತದಲ್ಲೇ ಜೈಲು ವಾಸ ಅನುಭವಿಸಿದ್ದ ಅಶ್ಫಕ್​ ಇಂದು ಬಿಡುಗಡೆಯಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ಫಕ್​, “ನನಗೆ ಅರಿವಿಲ್ಲದೆಯೇ ಗಡಿ ದಾಟಿ ಭಾರತ ಪ್ರವೇಶಿಸಿದ್ದೆ. ನಾನು ಭಾರತಕ್ಕೆ ಬಂದಿದ್ದೇನೆ ಎಂದು ಗೊತ್ತಾಗಿದ್ದೇ ಪೊಲೀಸರು ಬಂಧಿಸಿದಾಗ. ಪುನಃ ಪಾಕಿಸ್ತಾನಕ್ಕೆ ಹೋಗಲು ನನಗೆ ಇಷ್ಟವಿಲ್ಲ. ಭಾರತ ಒಳ್ಳೆಯ ದೇಶ. ನಾನಿಲ್ಲಿ ಕೆಲಸವನ್ನೂ ಪಡೆಯಬಲ್ಲೆ. ನಾನು ಇಲ್ಲೇ ಇರಲು ಭಾರತ ಸರ್ಕಾರ ನನಗೆ ಅವಕಾಶ ಕಲ್ಪಿಸಿಕೊಡಲಿ,” ಎಂದು ಅಶ್ಫಕ್​ ಮನವಿ ಮಾಡಿಕೊಂಡಿದ್ದಾನೆ.