ರಾಹುಲ್ ಆರೋಪಗಳು ಸುಳ್ಳು

ಪ್ಯಾರಿಸ್: ‘ನನಗೆ ಸುಳ್ಳು ಹೇಳುವ ಅಭ್ಯಾಸವಿಲ್ಲ. ಸಿಇಒ ಸ್ಥಾನದಲ್ಲಿ ಕುಳಿತು ಸುಳ್ಳು ಹೇಳಲು ಸಾಧ್ಯವೂ ಇಲ್ಲ. ನೀವು ಕೂಡ ಸುಳ್ಳು ಹೇಳಬೇಡಿ’ ಎಂದು ಡಸಾಲ್ಟ್ ಏವಿಯೇಷನ್ ಸಿಇಒ ಎರಿಕ್ ಟ್ರಾಪ್ಪಿಯರ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಮತ್ತು ವಿಪಕ್ಷಗಳ ಬಹುತೇಕ ಆರೋಪಗಳಿಗೆ ಟ್ರಾಪ್ಪಿಯರ್ ಎಎನ್​ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ರಾಹುಲ್ ಗಾಂಧಿ ಹೇಳುವ ರೀತಿಯಲ್ಲಿ 284 ಕೋಟಿ ರೂ. ಕಿಕ್​ಬ್ಯಾಕ್ ಪಡೆಯಲಾಗಿದೆ ಎನ್ನುವುದು ಸುಳ್ಳು. ಜಂಟಿ ಸಹಭಾಗಿತ್ವದ ಕಾರಣದಿಂದ ನಾವು ಮತ್ತು ರಿಲಯನ್ಸ್ ಕಂಪನಿ ಸುಮಾರು 800 ಕೋಟಿ ರೂ. ಹೂಡಿಕೆ ಮಾಡಬೇಕಿದೆ. ಅದರಲ್ಲಿ ಡಸಾಲ್ಟ್ ಪಾಲು 400 ಕೋಟಿ ರೂ. ಆಗಿದೆ. ಅದು 5 ವರ್ಷಗಳಲ್ಲಿ ಹೂಡಿಕೆಯಾಗುತ್ತದೆ. ಈಗಾಗಲೇ 40 ಕೋಟಿ ರೂ. ಹೂಡಿಕೆ ಮಾಡಿದ್ದೇವೆ. ಉಳಿದ ವಿಷಯಗಳ ಬಗ್ಗೆ ವದಂತಿ ಹರಿದುಬಿಡಲಾಗುತ್ತಿದೆ ಎಂದು ಟ್ರಾಪ್ಪಿಯರ್ ವಿವರಿಸಿದ್ದಾರೆ.

ಆಫ್​ಸೆಟ್​ಗೆ ಎಚ್​ಎಎಲ್ ನಿರಾಸಕ್ತಿ: ಒಪ್ಪಂದದ ಮಾತುಕತೆಯ ಪ್ರಾಥಮಿಕ ಹಂತಗಳಲ್ಲಿ 126 ವಿಮಾನಗಳ ಖರೀದಿಗೆ ಭಾರತ ಸರ್ಕಾರ ಒಲವು ಹೊಂದಿತ್ತು. ಅದರಲ್ಲಿ 18 ಯುದ್ಧ ವಿಮಾನಗಳನ್ನು ನೇರವಾಗಿ ಯುದ್ಧಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಪೂರೈಕೆಯಾಗಬೇಕಿತ್ತು. ಉಳಿದ 108 ವಿಮಾನಗಳ ತಯಾರಿಕೆ ಜವಾಬ್ದಾರಿಯನ್ನು ಎಚ್​ಎಎಲ್ ಹಾಗೂ ರಿಲಯನ್ಸ್​ಗೆ ಕಂಪನಿಗೆ ನೀಡುವ ಬಗ್ಗೆ ಮಾತುಕತೆ ಬಾಕಿ ಇತ್ತು. ಈ ಹಂತದಲ್ಲಿ ತಂತ್ರಜ್ಞಾನ ಹಂಚಿಕೆಯ ಪ್ರಸ್ತಾಪ ಕೂಡ ಇತ್ತು. ಆದರೆ ಸೇನೆಯ ತುರ್ತು ಅಗತ್ಯಕ್ಕೆ ತಕ್ಕಂತೆ ಭಾರತವು ಒಪ್ಪಂದವನ್ನು ಮಾರ್ಪಡಿಸಿತು. ಹೀಗಾಗಿ 36 ವಿಮಾನಗಳನ್ನು ಯುದ್ಧಕ್ಕೆ ಸನ್ನದ್ಧವಾಗಿರುವ ಹಂತದಲ್ಲಿ ಖರೀದಿಸಿ, ಕೇವಲ ಆಫ್​ಸೆಟ್ ಒಪ್ಪಂದಕ್ಕೆ ಸಮ್ಮತಿ ನೀಡಲಾಯಿತು. ಇತ್ತೀಚಿಗೆ ಎಚ್​ಎಎಲ್ ಅಧ್ಯಕ್ಷರು ಹೇಳಿದಂತೆ ಆಫ್​ಸೆಟ್ ಒಪ್ಪಂದಕ್ಕೆ ಎಚ್​ಎಎಲ್ ಸ್ಪರ್ಧಿಯೇ ಆಗಿರಲಿಲ್ಲ ಎಂದು ಟ್ರಾಪ್ಪಿಯರ್ ಹೇಳಿದ್ದಾರೆ.

ರಾಹುಲ್ ಆರೋಪ

# ಅನಿಲ್ ಅಂಬಾನಿ ಕಂಪನಿಗೆ ಡಸಾಲ್ಟ್ ಕಂಪನಿಯಿಂದ 284 ಕೋಟಿ ರೂಪಾಯಿ ಕಿಕ್​ಬ್ಯಾಕ್ ಬಂದಿದೆ

# ಪ್ರಧಾನಿ ನರೇಂದ್ರ ಮೋದಿಯನ್ನು ರಕ್ಷಿಸಲು ಡಸಾಲ್ಟ್ ಕಂಪನಿ ಸಿಇಒ ಸುಳ್ಳು ಹೇಳುತ್ತಿದ್ದಾರೆ

# ಡಸಾಲ್ಟ್ ಕಂಪನಿ ನೀಡಿದ್ದ ದುಡ್ಡಿನಿಂದ ರಿಲಯನ್ಸ್ ಭೂಮಿ ಖರೀದಿಸಿದೆ.

ಡಸಾಲ್ಟ್ ತಿರುಗೇಟು

# ಜಂಟಿ ಸಹಭಾಗಿತ್ವದಲ್ಲಿ 40 ಕೋಟಿ ರೂಪಾಯಿ ಮಾತ್ರ ಹೂಡಿಕೆ.

# ಹಿಂದಿನ ಸರ್ಕಾರದ ಪ್ರಸ್ತಾಪಿತ ಮೊತ್ತಕ್ಕಿಂತಲೂ ಕಡಿಮೆ ಹಣಕ್ಕೆ ಯುದ್ಧ ವಿಮಾನ ಖರೀದಿ.

# ನನ್ನ ದೇಶದ ಕಾನೂನು ನನಗೆ ತಿಳಿದಿದ್ದು, ಪಾರದರ್ಶಕವಾಗಿ ಒಪ್ಪಂದ ನಡೆದಿದೆ.

ಶೇ.9 ದರ ಇಳಿಕೆ!

ಯುದ್ಧ ವಿಮಾನ ಖರೀದಿಯ ಮೂಲ ಲೆಕ್ಕಾಚಾರದ ಹಾದಿ ತಪ್ಪಿಸಲಾಗುತ್ತಿದೆ. ಈ ಹಿಂದಿನ ಒಪ್ಪಂದದಲ್ಲಿ 126 ವಿಮಾನಗಳ ಪ್ರಸ್ತಾಪವಿದ್ದರೂ ಯುದ್ಧಕ್ಕೆ ಸನ್ನದ್ಧವಾಗಿರುವ ವಿಮಾನಗಳ ಸಂಖ್ಯೆ ಕೇವಲ 18 ಇತ್ತು. ಹಾಲಿ ಒಪ್ಪಂದದಲ್ಲಿ ಇದು 36ಕ್ಕೆ ಏರಿಕೆಯಾಗಿದೆ. ಹೀಗಾಗಿ 18 ವಿಮಾನಗಳ ಖರೀದಿಗೆ ಭಾರತ ನೀಡುತ್ತಿದ್ದ ಹಣದಲ್ಲಿಯೇ 36 ವಿಮಾನ ಖರೀದಿಯಾಗಲಿದೆ. ಜತೆಗೆ ಪ್ರತಿ ವಿಮಾನಕ್ಕೆ ಶೇ.9 ಬೆಲೆ ವಿನಾಯಿತಿ ಕೂಡ ಸಿಕ್ಕಿದೆ ಎಂದು ಡಸಾಲ್ಟ್ ಸಿಇಒ ತಿಳಿಸಿದ್ದಾರೆ.

-ಠಿ; 30 ಸಾವಿರ ಕೋಟಿಯ ಲೆಕ್ಕ?

ಏರ್ ಮಾರ್ಷಲ್ ಆರ್.ನಂಬಿಯಾರ್ ನೀಡಿದ ಮಾಹಿತಿ ಪ್ರಕಾರ ರಫೇಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಒಟ್ಟು ನಾಲ್ಕು ಭಾಗಗಳಿವೆ. ಡಸಾಲ್ಟ್, ಥೇಲ್ಸ್​ಮ ಸಫ್ರಾನ್ ಹಾಗೂ ಎಂಬಿಡಿಎ ಕಂಪನಿಗಳು ಇದರಲ್ಲಿವೆ. ಇದರಲ್ಲಿ ಡಸಾಲ್ಟ್ ಕಂಪನಿ ಪಾಲಿಗೆ 30 ಸಾವಿರ ಕೋಟಿ ರೂ. ಸಿಗಲಿದೆ. ಉಳಿದ ಮೂರು ಕಂಪನಿಗಳು ಯುದ್ಧ ವಿಮಾನಕ್ಕೆ ಪೂರಕವಾದ ಶಸ್ತ್ರಾಸ್ತ್ರ ಪೂರೈಕೆ ಮಾಡಲಿವೆ. ಡಸಾಲ್ಟ್ ಪಾಲಿನ 30 ಸಾವಿರ ಕೋಟಿ ರೂ.ಗಳಲ್ಲಿ ಆಫ್​ಸೆಟ್ ಒಪ್ಪಂದಕ್ಕೆ ಪೂರಕವಾಗಿ ಭಾರತದಲ್ಲಿ -ಠಿ;6,500 ಕೋಟಿ ಹೂಡಿಕೆ ಮಾಡಬೇಕಿದೆ. ಇದರಲ್ಲಿ ರಿಲಯನ್ಸ್ ಜತೆಗಿನ ಸಹಭಾಗಿತ್ವವು ಕೇವಲ 800 ಕೋಟಿ ರೂ. ಆಗಿದೆ. ಈ ಆಫ್​ಸೆಟ್ ಒಪ್ಪಂದದಲ್ಲಿ ರಿಲಯನ್ಸ್ ಹೊರತಾಗಿ 30 ಕಂಪನಿಗಳಿವೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ನಾನು ಯಾವುದೇ ಸುಳ್ಳು ಹೇಳಿಲ್ಲ. ನನ್ನ ದೇಶದ ಕಾನೂನಿನ ಬಗ್ಗೆ ಗೌರವವಿದ್ದು, ಅದಕ್ಕೆ ವಿರುದ್ಧವಾಗಿ ನಾನು ನಡೆದುಕೊಂಡಿಲ್ಲ. ಆದರೆ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ಪಾರದರ್ಶಕವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.

| ಎರಿಕ್ ಟ್ರಾಪ್ಪಿಯರ್ ಡಸಾಲ್ಟ್ ಏವಿಯೇಷನ್ ಸಿಇಒ

ಇಂದು ಸುಪ್ರೀಂ ವಿಚಾರಣೆ

ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಖರೀದಿ ಪ್ರಕ್ರಿಯೆ ಹಾಗೂ ಹಣಕಾಸು ವಿವರ ಆಧರಿಸಿ ಬುಧವಾರ ಮಹತ್ವದ ವಿಚಾರಣೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠದಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದ ಭವಿಷ್ಯ ನಿರ್ಧಾರವಾಗಲಿದೆ.

ಸುಪ್ರೀಂ ಕೋರ್ಟ್​ನಲ್ಲಿ ಮೋದಿಯ ರಫೇಲ್ ಕಳ್ಳತನ ಬಯಲಾಗಿದೆ. ವಾಯುಪಡೆಯನ್ನು ಕೇಳದೆ 30 ಸಾವಿರ ಕೋಟಿ ರೂ.ಗಳನ್ನು ಅಂಬಾನಿ ಕಿಸೆಗೆ ಹಾಕಿರುವುದು ಖಾತ್ರಿಯಾಗಿದೆ. ಪಿಕ್ಚರ್ ಇನ್ನೂ ಬಾಕಿಯಿದೆ ಗೆಳೆಯ.

| ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ