VIDEO: ಈ ಸಾಧ್ವಿ ಶಾಪ ಕೊಟ್ಟರೆ ಮನುಷ್ಯರು ಒಂದೂಕಾಲು ತಿಂಗಳಲ್ಲೇ ಸಾಯುತ್ತಾರಂತೆ! ಯಾರಿಗೆ ಶಾಪ ಕೊಟ್ಟಿದ್ದು?

ಮುಂಬೈ: ತಾವು ಶಾಪ ಕೊಟ್ಟ ಒಂದೂ ಕಾಲು ತಿಂಗಳಲ್ಲಿ ಮುಂಬೈನ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಹೇಮಂತ್​ ಕರ್ಕರೆ ಉಗ್ರನೊಬ್ಬ ಗುಂಡಿಗೆ ಬಲಿಯಾಗಿದ್ದಾಗಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಹೇಳಿ ವಿವಾದ ಸೃಷ್ಟಿಸಿದ್ದಾರೆ.

ಭೋಪಾಲ್​ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್​ನ ದಿಗ್ವಿಜಯ್​ ಸಿಂಗ್ ವಿರುದ್ಧ ಸೆಣಸಲಿರುವ ಸಾಧ್ವಿ ಸಭೆಯೊಂದರಲ್ಲಿ ಮಾತನಾಡುತ್ತ, ಹೇಮಂತ್​ ಕರ್ಕರೆ ನನ್ನನ್ನು ಸುಳ್ಳು ಆರೋಪದಲ್ಲಿ ಬಂಧಿಸಿದ್ದರು. ನನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಿರುಕುಳ ನೀಡಿದ್ದರು. ಸಾಕ್ಷ್ಯಾಧಾರದ ಕೊರತೆ ಇರುವುದರಿಂದ ನನ್ನನ್ನು ಬಿಡುವಂತೆ ಹಿರಿಯ ಅಧಿಕಾರಿಗಳು ಹೇಳಿದರೂ, ಸಾಕ್ಷ್ಯಾಧಾರವನ್ನು ಸೃಷ್ಟಿಸಿಯಾದರೂ ನನ್ನನ್ನು ಜೈಲು ಪಾಲಾಗಿಸುವುದಾಗಿ ಸವಾಲು ಹಾಕಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ತುಂಬಾ ನೊಂದಿದ್ದ ನಾನು, ನೀನು ಸರ್ವನಾಶ ಆಗುತ್ತೀಯ. ಸೂತಕ ಅಂಟಿಕೊಂಡಿರುವ ನಿನಗೆ ಒಂದೂಕಾಲು ತಿಂಗಳಲ್ಲಿ ಸಾವಾಗುತ್ತದೆ ಎಂದು ಹೇಳಿದ್ದೆ. ಅದರಂತೆ ನನ್ನನ್ನು ಬಂಧಿಸಿದಾಗಿನಿಂದ ಅವರಿಗೆ ಸೂತಕ ಅಂಟಿಕೊಂಡಿತ್ತು. ಇದಾಗಿ ಒಂದೂಕಾಲು ತಿಂಗಳು ಕಳೆಯುವಷ್ಟರಲ್ಲಿ ಉಗ್ರನೊಬ್ಬನ ಗುಂಡಿಗೆ ಅವರು ಬಲಿಯಾಗುವ ಮೂಲಕ ಸೂತಕ ಅಂತ್ಯವಾಯಿತು ಎಂದು ತಿಳಿಸಿದರು.
ಇದೇ ರೀತಿ 2008ರಲ್ಲಿ ಕಾಂಗ್ರೆಸ್​ ಆಡಳಿತದಲ್ಲಿತ್ತು. ಆಗ ನನ್ನನ್ನು ಬಂಧಿಸಿದ ಸರ್ಕಾರ ಸರ್ವನಾಶವಾಗುತ್ತೆ ಎಂದು ಹೇಳಿದ್ದೆ. ಅದಂತೆ ಕಾಂಗ್ರೆಸ್​ ಆಡಳಿತ ಕಳೆದುಕೊಂಡಿತು ಎಂದು ಹೇಳಿದರು. (ಏಜೆನ್ಸೀಸ್​)