ಗೆಲ್ಲಲೆಂದೇ ಇಲ್ಲಿಗೆ ಬಂದಿದ್ದೇನೆ ಮಧು ಬಂಗಾರಪ್ಪ ವಿಶ್ವಾಸದ ನುಡಿ

ಶಿವಮೊಗ್ಗ: ಎಲ್ಲರ ಸಹಮತದ ಮೇರೆಗೆ ನಾನು ಶಿವಮೊಗ್ಗದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿಯುತ್ತಿದ್ದೇನೆ. ಚುನಾವಣೆ ಗೆಲ್ಲಲೆಂದೇ ಇಲ್ಲಿಗೆ ಬಂದಿದ್ದೇನೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ವಿಶ್ವಾಸದ ನುಡಿಗಳನ್ನಾಡಿದರು.

ಅರಣ್ಯವಾಸಿಗಳು ಕಾಡು ತೊರೆಯಬೇಕು ಎಂಬ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪನ್ನು ಪುನರ್​ಪರಿಶೀಲನೆಗೆ ಒಳಪಡಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ ಮಧು, ನಂತರ ಮಾಧ್ಯಮಗಳೊಂದಿಗೆ ಪ್ರಸಕ್ತ ಲೋಕಸಭೆ ಚುನಾವಣೆಯ ಉಮೇದುವಾರಿಕೆ ಕುರಿತು ಮಾತನಾಡಿದರು.

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಚುನಾವಣೆಗೆ ನಾನು ಸ್ಪರ್ಧಿಸಬೇಕು ಎಂದು ಎಲ್ಲರೂ ಬಯಸಿದ್ದಾರೆ. ರಾಷ್ಟೀಯ, ರಾಜ್ಯ ಹಾಗೂ ಜಿಲ್ಲಾ ನಾಯಕರು ನನಗೆ ಮತ್ತೇ ಅವಕಾಶ ಕೊಟ್ಟಿದ್ದಾರೆ. ದೇವೆಗೌಡರು ಮನೆಗೆ ಬಂದು ಚುನಾವಣೆಗೆ ನಿಲ್ಲುವಂತೆ ಹೇಳಿ ಹೋಗಿದ್ದಾರೆ. ಮೈತ್ರಿ ಕೂಟದಿಂದ ಶಿವಮೊಗ್ಗಕ್ಕೆ ನಾನು ಅಧಿಕೃತ ಅಭ್ಯರ್ಥಿಯಾಗಿದ್ದೇನೆ. ಈ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿಯೇ ಬಂದಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.

ಅರಣ್ಯವಾಸಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಧು, “ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದೇಶದಿಂದ ಅಗಿರುವ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸರ್ಕಾರ ಎಲ್ಲರನ್ನು ಕಾಯುವ ಕೆಲಸ ಮಾಡಲಿದೆ,” ಎಂದರು.

ಇನ್ನು ಭಾರತೀಯ ಸೇನೆ ಉಗ್ರರ ಅಡಗುತಾಣಗಳ ಮೇಲೆ ನಡೆಸಿರುವ ದಾಳಿ ಕುರಿತು ಮಾತನಾಡಿ, ಇದು ದೇಶದ ಪ್ರತಿಯೊಬ್ಬರೂ ಹೆಮ್ಮೆಪಡುವ ವಿಚಾರ ಎಂದರು.