ಸುಮಲತಾರ ಬಗ್ಗೆ ಎಚ್‌ ಡಿ ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ವಿಶ್ವನಾಥ್‌

ರಾಯಚೂರು: ಸುಮಲತಾ ಅಂಬರೀಷ್‌ ಅವರ ಕುರಿತು ಸಚಿವ ರೇವಣ್ಣ ಹಾಗೆ ಮಾತನಾಡಬಾರದಿತ್ತು. ನಾಲಿಗೆ ತಪ್ಪಿ ಮಾತನಾಡಿದ್ದಾರೆ. ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ.

ಸುಮಲತಾ ಬಗ್ಗೆ ರೇವಣ್ಣ ಹಾಗೆ ಮಾತನಾಡಬಾರದಿತ್ತು. ಸರ್ಕಾರದ ಪ್ರಮುಖ ಮಂತ್ರಿ ಬಾಯಲ್ಲಿ ಈ ರೀತಿಯ ಮಾತು ನಿರೀಕ್ಷಿಸಿರಲಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ನಾನು ಕ್ಷಮೆ ಕೇಳುತ್ತೇನೆ. ಸಚಿವ ರೇವಣ್ಣ ನಾಲಿಗೆ ತಪ್ಪಿ ಮಾತನಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರನ್ನು ಕಳ್ಳರು ಎಂದು ಹೇಳುತ್ತಾ ಮೋದಿ ಏನಾಗಿದ್ದಾರೆ? ದೇಶದ ರಕ್ಷಣಾ ವ್ಯವಸ್ಥೆಯ ರಫೇಲ್ ಕಡತ ಕಳ್ಳತನವಾಗಿದೆ. ವಿಶ್ವದಲ್ಲಿ ಇದು ದೇಶಕ್ಕೆ ಆದ ಅವಮಾನ. ಇಲ್ಲಿ ಚೌಕಿದಾರನೇ ಕಳ್ಳ ಆಗಿಬಿಟ್ಟನಾ? ಇದರಿಂದ ಮೋದಿ ರಫೇಲ್ ಹಗರಣದ ಭಾಗಿದಾರರು ಎಂಬುದು ಸಾಬೀತಾಗುತ್ತಿದೆ. ತಾವು ಮಾಡಿದ ಆರ್ಥಿಕ ಅಪರಾಧದಿಂದ ಕಳ್ಳತನವಾಗಿದೆ ಎನ್ನುತ್ತಿದ್ದಾರೆ. ಇಂತವರು ದೇಶದ ಜನರನ್ನು ಹೇಗೆ ರಕ್ಷಿಸುತ್ತಾರೆ ಎಂದು ಪ್ರಶ್ನಿಸಿದರು.

ಪಾಕಿಸ್ತಾನದ ವಿರುದ್ಧದ ದಾಳಿಯನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರು 22 ಸೀಟ್ ಗೆದ್ದು ಬಿಡುತ್ತೀವಿ ಎಂದು ತಮ್ಮ ಸತ್ಯ ಹೇಳಿಬಿಟ್ಟರು. ಮೋದಿಯನ್ನು ಜನರು ನಂಬಿದ್ದರು. ಆದರೆ ಈಗ ನಂಬಲು ಸಿದ್ಧರಿಲ್ಲ. ಎಲ್ಲಾ ಪಕ್ಷದಲ್ಲೂ ಕುಟುಂಬ ರಾಜಕಾರಣವಿದೆ. ಸಿದ್ದರಾಮಯ್ಯನ ಮನೆಯಲ್ಲಿಲ್ವಾ? ಯಡಿಯೂರಪ್ಪನವರ ಮನೆಯಲ್ಲಿಲ್ವಾ? ಕುಟುಂಬ ರಾಜಕಾರಣ ಎನ್ನುವ ಪ್ರಶ್ನೆ ದೇಶದಲ್ಲಿ ಉಳಿದಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)