ಮಂಡ್ಯದ ಮಣ್ಣಿನ ಸೊಸೆ ನಾನು, ನಿಮ್ಮ ಅಭಿಮಾನಕ್ಕೆ ಋಣಿಯಾಗಿರುತ್ತೇನೆ: ಸುಮಲತಾ ಅಂಬರೀಷ್‌

ಮಂಡ್ಯ: ನಾನು ನಿಮ್ಮ ಮನೆ ಮಗಳು, ಈ ಮಣ್ಣಿನ ಸೊಸೆ. ಅಂತಹ ಪ್ರೀತಿ ತೋರುತ್ತಿರುವ ನಿಮ್ಮ ಅಭಿಯಾನಕ್ಕೆ ನಾನು ಋಣಿಯಾಗಿರುತ್ತೇನೆ ಎಂದು ನಟಿ ಸುಮಲತಾ ಅಂಬರೀಷ್‌ ತಿಳಿಸಿದ್ದಾರೆ.

ಕ್ಷೇತ್ರ ಪರ್ಯಟನೆ ವೇಳೆ ಬೇವಿನಹಳ್ಳಿಯಲ್ಲಿ ಮಾತನಾಡಿದ ಅವರು, ಇಡೀ ನಾಡಿಗೆ, ದೇಶಕ್ಕೆ ಸಂದೇಶ ಕಳುಹಿಸಬೇಕು. ಪಕ್ಷ ನಮ್ಮ ಪರ ಇರುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ, ನೀವು ನನ್ನ ಪರ ನಿಲ್ಲಬೇಕು. ನೀವು ನನ್ನ ಪರ ನಿಂತರೆ ನಿಮ್ಮ ಪರವಾದ ನನ್ನ ಧ್ವನಿ ದೆಹಲಿಯಲ್ಲಿರುತ್ತದೆ ಎಂದು ಹೇಳಿದರು.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟಿಕೆಟ್ ಕೊಡಲ್ಲ ಎಂದಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿ, ಅಧಿಕೃತವಾಗಿ ನನಗಿನ್ನೂ ಮಾಹಿತಿ ಬಂದಿಲ್ಲ. ಅದು ಬರುವವರೆಗೂ ಕಾಯುತ್ತೇನೆ. ಆನಂತರ 2-3 ದಿನಗಳಲ್ಲಿ ನನ್ನ ನಿಲುವು ಸ್ಪಷ್ಟಪಡಿಸುವೆ. ಮಂಡ್ಯದ ಜತೆ ನಮಗೆ ಋಣಾನುಬಂಧ ಇದೆ ಎಂದರು.

ಕಾಂಗ್ರೆಸ್‌ಗೆ ಮಂಡ್ಯವೇ ಬೇಡವ ಅಂತ ಕಾರ್ಯಕರ್ತರು ಕೇಳುತ್ತಿದ್ದಾರೆ. ಕಾರ್ಯಕರ್ತರು, ಮುಖಂಡರಲ್ಲಿ ನಮ್ಮ ನಡೆ ಏನಿರಬೇಕು? ಯಾರ ಕಡೆ, ಯಾರ ಪರ ಕೆಲಸ ಮಾಡಬೇಕೆಂಬ ಗೊಂದಲವಿದೆ. ಹೀಗಾಗಿ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಯಾರದ್ದು? ನಾನು ತೆಗೆದುಕೊಳ್ಳುವ ನಿಲುವ ಯಾರಿಗೆ ಅನುಕೂಲ, ಯಾರಿಗೆ ಒಳ್ಳೆಯದು ಎನ್ನುವುದನ್ನು ನಾಯಕರು ಅರ್ಥಮಾಡಿಕೊಳ್ಳಬೇಕು. ಜನ ನನ್ನ ಪರ ಇದ್ದಾರೆ ಎಂಬ ಭರವಸೆ ಹಿನ್ನೆಲೆಯಲ್ಲಿ‌ ಮಂಡ್ಯಕ್ಕೆ ಬಂದಿದ್ದೀನಿ ಎಂದು ಹೇಳಿದರು.

ಜನರ ಅಭಿಪ್ರಾಯದಂತೆ ನಾನು ನಡೆದುಕೊಳ್ಳುತ್ತೇನೆ. ಸ್ಯಾಂಡಲ್‌ವುಡ್ ಯಾರ ಪರ ನಿಲ್ಲಬೇಕೆಂಬ ಚರ್ಚೆ ವಿಚಾರವಾಗಿ ಇದು ಟಿವಿ ಚಾನೆಲ್‌ಗಳಲ್ಲಷ್ಟೇ ಚರ್ಚೆಯಾಗುತ್ತಿದೆ. ಚರ್ಚೆಯಲ್ಲಿ ಯಾವ ಸ್ಯಾಂಡಲ್‌ವುಡ್ ನಟ – ನಟಿಯರು ಭಾಗವಹಿಸಿಲ್ಲ. ಧೈರ್ಯವಾಗಿರಿ ಅವರೆಲ್ಲ ನನ್ನ ಪರವಾಗಿದ್ದಾರೆ ಎಂದು ಹೇಳಿದರು.

ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಹಿನ್ನೆಲೆಯಲ್ಲಿ ಇಂದು ಕೂಡ ಕ್ಷೇತ್ರ ಪರ್ಯಟನೆ ಕೈಗೊಂಡಿರುವ ಸುಮಲತಾ ಅಂಬರೀಷ್‌ ಅವರು ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ನಿಮಿಷಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಹಲವು ಮುಖಂಡರ ಮನೆಗೆ ಭೇಟಿ ನೀಡಿದರು. ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿ ಹಲವು ಮುಖಂಡರು ಜತೆ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಬೆಂಬಲ ಯಾಚಿಸಿದ್ದಾರೆ.

ಮಂಡ್ಯ ತಾಲೂಕಿನ ಬೇವಿನಹಳ್ಳಿಗೆ ಬಂದ ಸುಮಲತಾ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ ಬಳಿಕ ಪೂರ್ಣ ಕುಂಭ ಸ್ವಾಗತವನ್ನು ಕೋರಲಾಯಿತು. ಈ ವೇಳೆ ಸುಮಲತಾಗೆ ಮಂಡ್ಯ ಗೌಡ್ತಿ ಬಿರುದು ನೀಡಿದ ಅಭಿಮಾನಿಗಳು ಘೋಷಣೆ ಕೂಗಿದರು. (ದಿಗ್ವಿಜಯ ನ್ಯೂಸ್)