ಲಂಡನ್: ಬ್ರಿಟನ್ನಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ ಪ್ರಧಾನಿ ರಿಷಿ ಸುನಕ್ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಸದ್ಯದ ಫಲಿತಾಂಶದ ಟ್ರೆಂಡ್ ಪ್ರಕಾರ ಪ್ರತಿಪಕ್ಷ ಲೇಬರ್ ಪಾರ್ಟಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಸುನಕ್ ಅವರ ಕನ್ಸರ್ವೇಟಿವ್ ಪಾರ್ಟಿ ಕೇವಲ 61 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸೋಲಿನ ಸುಳಿವು ಸಿಗುತ್ತಿದ್ದಂತೆ ಅದನ್ನು ಒಪ್ಪಿಕೊಂಡಿರುವ ರಿಷಿ ಸುನಕ್, ಈ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಗೆಲುವು ಸಾಧಿಸಿದೆ ಮತ್ತು ನಾನು ಕೀರ್ ಸ್ಟಾರ್ಮರ್ ಅವರನ್ನು ಗೆಲುವಿಗಾಗಿ ಅಭಿನಂದಿಸುತ್ತೇನೆ. ಇಂದು ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಹಸ್ತಾಂತರವಾಗುತ್ತದೆ ಹಾಗೂ ಎಲ್ಲ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದ್ದಾರೆ.
ರಿಚ್ಮಂಡ್ ಮತ್ತು ನಾರ್ದರ್ನ್ ಅಲರ್ಟನ್‌ನಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ರಿಷಿ ಸುನಕ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ಷಮೆ ಕೋರಿದ ರಿಷಿ ಸುನಕ್, ಈ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದರು.
650 ಸದಸ್ಯರ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತಕ್ಕೆ 326 ಸ್ಥಾನಗಳನ್ನು ಗೆಲ್ಲುವ ಅಗತ್ಯವಿದೆ. ಪ್ರತಿಪಕ್ಷ ಲೇಬರ್ ಪಾರ್ಟಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಸುನಕ್ ಅವರ ಕನ್ಸರ್ವೇಟಿವ್ ಪಾರ್ಟಿ ಕೇವಲ 61 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಚುನಾವಣೋತ್ತರ ಸಮೀಕ್ಷೆಗಳು ಲೇಬರ್ ಪಕ್ಷ 410 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿವೆ.
ಇನ್ನೂ ಆರು ತಿಂಗಳು ಅಧಿಕಾರವಧಿ ಇದ್ದರೂ ಅವಧಿಪೂರ್ವ ಚುನಾವಣೆಗೆ ಹೋಗುವ ಮೂಲಕ ಪ್ರಧಾನಿ ರಿಷಿ ಸುನಕ್ ಅಚ್ಚರಿ ನಿರ್ಧಾರ ಕೈಗೊಂಡಿದ್ದರು. ಸಂಪೂರ್ಣ ಫಲಿತಾಂಶ ಹೊರಬಿದ್ದ ಬಳಿಕ ಸುನಕ್ ಅವರು ತನ್ನ ರಾಜೀನಾಮೆಯನ್ನು ರಾಜ್ಯದ ಮುಖ್ಯಸ್ಥ ಕಿಂಗ್ ಚಾರ್ಲ್ಸ್ III ಗೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ರಾಜನು ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷದ ನಾಯಕ ಸ್ಟಾರ್ಮರ್‌ಗೆ ಸರ್ಕಾರವನ್ನು ರಚಿಸಲು ಕೇಳಲಿದ್ದಾರೆ.
ಕೀರ್ ಸ್ಟಾರ್ಮರ್ ಅವರ ಲೇಬರ್ ಪಾರ್ಟಿಯು ಸವಾಲಿನ ಸಮಯದಲ್ಲಿ ಅಧಿಕಾರದ ಗದ್ದುಗೆಯನ್ನು ಏರುತ್ತಿದೆ. ಬ್ರಿಟನ್‌ನ ಜಡ ಆರ್ಥಿಕತೆ, ಸಾರ್ವಜನಿಕ ಸೇವೆಗಳು ಮತ್ತು ಕುಸಿಯುತ್ತಿರುವ ಜೀವನಮಟ್ಟದಂತಹ ಸವಾಲಗಳ ನಡುವೆ ಲೆಬರ್ ಪಾರ್ಟಿ ಅಧಿಕಾರಕ್ಕೆ ಏರುತ್ತಿದ್ದು, ಮುಂದೆ ಯಾವ ರೀತಿ ಇವುಗಳನ್ನು ನಿಭಾಯಿಸಲಿವೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಮೇಲಿ ಎಲ್ಲ ಅಂಶಗಳು ಕನ್ಸರ್ವೇಟಿವ್ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಗಿದೆ.
ಕೀರ್ ಸ್ಟಾರ್ಮರ್ ಅವರು ಬ್ರಿಟನ್‌ನ ಮುಂದಿನ ಪ್ರಧಾನ ಮಂತ್ರಿಯಾಗಲಿದ್ದಾರೆ. ಅವರ ಲೇಬರ್ ಪಕ್ಷವು ಸಂಸತ್ತಿನ ಚುನಾವಣೆಯಲ್ಲಿ ಭಾರಿ ಬಹುಮತವನ್ನು ಗೆಲ್ಲುವ ನಿರೀಕ್ಷೆಯಿದೆ, ರಿಷಿ ಸುನಕ್ ಅವರ ಪಕ್ಷವನ್ನು ಸೋಲಿಸುವ ಮೂಲಕ 14 ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಲಿದೆ. ಲೇಬರ್ ಪಾರ್ಟಿಗೆ ಈ ಗೆಲುವು ಖುಷಿ ನೀಡಿದರು ಕೂಡ ಅವರ ಮುಂದಿರುವ ಸವಾಲುಗಳು ಕೊಂಚ ಆತಂಕ ಹುಟ್ಟಿಸಿರುವುದಂತೂ ನಿಜ. (ಏಜೆನ್ಸೀಸ್)
ಪ್ರಧಾನಿ ಮೋದಿ ಯಾಕೆ ಟಿ20 ವಿಶ್ವಕಪ್ ಟ್ರೋಫಿ ಮುಟ್ಟಲಿಲ್ಲ? ಇಲ್ಲಿದೆ ನೋಡಿ ಅಸಲಿ ಕಾರಣ…
ತೂಕ ಕಳೆದುಕೊಳ್ಳಲು ಕಸರತ್ತು ಮಾಡುತ್ತಿದ್ದೀರಾ? ಈ ನಿಯಮಗಳನ್ನು ಅನುಸರಿಸಿ ಚಮತ್ಕಾರ ನೋಡಿ…