ಗೈರಾಗಿರುವ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ, ಮರಳಿ ಬರಲಿದ್ದಾರೆ: ಎಚ್​ಡಿಕೆ

ಕೋಲ್ಕತಾ: ಕಾಂಗ್ರೆಸ್​ನ ನಾಲ್ವರು ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಕುರಿತು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಗೈರಾದವರು ಮರಳಿ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಕೋಲ್ಕತಾದಲ್ಲಿ ಶನಿವಾರ ನಡೆಯಲಿರುವ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಲೆಂದ ಕೋಲ್ಕತಾಗೆ ಆಗಮಿಸಿರುವ ಸಿಎಂ ಎಚ್ಡಿಕೆ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು.

“ನಾಲ್ವರು ಕಾಂಗ್ರೆಸ್​ ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಸರ್ಕಾರಕ್ಕೆ ಯಾವುದೇ ದಕ್ಕೆಯಾಗದು. ಈಗ ಗೈರಾದವರು ಮರಳಿ ಬಂದು ನಮ್ಮನ್ನು ಸೇರುವ ವಿಶ್ವಾಸವಿದೆ. ನಾನು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ,” ಎಂದು ತಿಳಿಸಿದರು.

ಬಿಜೆಪಿ ಶಾಸಕರು ಕಾಂಗ್ರೆಸ್​ನ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ” ಮೋದಿ ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಮಾತುಗಳನ್ನಾಡುತ್ತಾರೆ. ಆದರೆ, ರಾಜ್ಯದಲ್ಲಿ ಬಿಜೆಪಿಯು ಬೇರೆ ಪಕ್ಷದ ಶಾಸಕರಿಗೆ ಹಣದ ಆಮಿಷ ಒಡ್ಡುತ್ತಿದೆ. ಕರ್ನಾಟಕದಲ್ಲಿ ನಡೆಯುತ್ತಿರುವುದೇನು?,” ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.