ವಿಂಗ್ ಕಮಾಂಡರ್ ಅಭಿನಂದನ್,​ ದೇಶದ ಮೊದಲ ಮಹಿಳಾ ರಕ್ಷಣಾ ಮಂತ್ರಿ ತಮಿಳುನಾಡಿನವರು ಎಂಬುದೇ ಹೆಮ್ಮೆ

ಕನ್ಯಾಕುಮಾರಿ: ಭಾರತದ ವಾಯು ಗಡಿ ದಾಟಿ ಬಂದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋದ ಧೀರ ಪೈಲಟ್​ ​ ಅಭಿನಂದನ್​ ಮತ್ತು ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರು ತಮಿಳುನಾಡಿನವರು ಎಂದು ಹೇಳಲು ನನಗೆ ಸಂತೋಷವಿದೆ ಎಂದು ಮೋದಿ ಅವರು ಹೇಳಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದ ಅವರು, ಪೈಲಟ್​ ಅಭಿನಂದನ್​ ಮತ್ತು ನಿರ್ಮಲಾ ಸೀತಾರಾಮನ್​ ಅವರನ್ನು ಹೊಗಳಿದರು.

” ಶೌರ್ಯ ಮೆರೆದ ವಿಂಗ್​ ಕಮಾಂಡರ್​ ಅಭಿನಂದನ್​ ಅವರ ಬಗ್ಗೆ ಇಡೀ ದೇಶವೇ ಅಭಿಮಾನ ಪಡುತ್ತಿದೆ. ಅವರು ಈ ನೆಲದವರು. ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರು ನಿರ್ಮಲಾ ಸೀತಾರಾಮನ್​. ಅವರೂ ತಮಿಳುನಾಡಿನವರು. ಈ ವಿಚಾರಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ,” ಎಂದು ಅವರು ಹೇಳಿದರು.

ಮಧುರೈ ಮತ್ತು ಚೆನ್ನೈ ನಡುವಿನ ಅತ್ಯಂತ ವೇಗದ ತೇಜಸ್​ ರೈಲಿಗೆ ನಾನು ತಮಿಳುನಾಡಿನಲ್ಲಿಯೇ ಚಾಲನೆ ನೀಡಿದ್ದೆ. ಆ ರೈಲು ಮೇಕ್​ ಇನ್​ ಇಂಡಿಯಾಕ್ಕೆ ಉತ್ತಮ ಉದಾಹರಣೆ. ಅಷ್ಟೇ ಅಲ್ಲ, ತೇಜಸ್​ ರೈಲು ನಿರ್ಮಾಣವಾಗಿದ್ದೇ ಚೆನ್ನೈನ ಕೋಚ್​ ತಯಾರಿಕಾ ಘಟಕದಲ್ಲಿ ಎಂದರು.

ಸಮಾರಂಭದಲ್ಲಿ ಮೋದಿ ಮಾತು ಭಯೋತ್ಪಾದನೆ, ಸೇನೆ ಮತ್ತು ವಿರೋಧ ಪಕ್ಷಗಳ ಕಡೆಗೆ ತಿರುಗಿತು. ಮುಂಬೈನ 26/11ರ ಘಟನೆ ನಂತರ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ದೇಶ ಭಾವಿಸಿತ್ತು. ಆದರೆ, ಅಂಥದ್ದೇನೂ ಆಗಲಿಲ್ಲ. ಆದರೆ, ಉರಿ ಮತ್ತು ಪುಲ್ವಾಮ ಘಟನೆಗಳ ನಂತರ ಏನಾಗಿದೆ. ನಮ್ಮ ಸೈನಿಕರು ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಈ ದೇಶಕ್ಕೆ ಸೇವೆ ಸಲ್ಲಿಸುತ್ತಿರುವವರಿಗೆ ನಾನು ನಮನ ಸಲ್ಲಿಸುತ್ತೇನೆ ಎಂದರು. ಈ ಮೂಲಕ ವಿರೋಧ ಪಕ್ಷಗಳನ್ನು ಹಣಿದ ಮೋದಿ, ಸೇನೆ, ಸೈನಿಕರನ್ನು ಕೊಂಡಾಡಿದರು.

ದೇಶದ ಕೆಲ ನಾಯಕರ ಹೇಳಿಕೆಗಳು ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ. ಭಾರತಕ್ಕೆ ಹಾನಿಕಾರಕವಾಗಿದೆ. ಅವರ ಹೇಳಿಕೆಗಳು ಪಾಕಿಸ್ತಾನದ ಲೋಕಸಭೆಯಲ್ಲಿ ಮತ್ತು ಮಾಧ್ಯಮಗಳಲ್ಲಿ ಅತ್ಯಂತ ಖುಷಿಯಿಂದ ಪ್ರಸ್ತಾಪವಾಗಿದೆ. ಹೀಗೆ ಮಾತನಾಡುವವರನ್ನು ನಾನೊಂದು ಪ್ರಶ್ನೆ ಕೇಳುತ್ತೇನೆ. ನೀವು ನಮ್ಮ ಸೇನೆಯನ್ನು ಬೆಂಬಲಿಸುತ್ತೀರೋ ಅಥವಾ ಅವರನ್ನು ಅನುಮಾನಿಸುತ್ತೀರೋ ಎಂದೂ ಮೋದಿ ಪ್ರಶ್ನೆ ಮಾಡಿದರು.