ನಾನು ಪ್ರಧಾನಿ ಆಕಾಂಕ್ಷಿ ಅಲ್ಲ, ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸಿದ್ದೇನೆ: ಎಚ್‌ ಡಿ ದೇವೇಗೌಡ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿಯವರು ತನ್ನ ಸ್ಥಾನದ ಗೌರವ ಬಿಟ್ಟು ಮಾತನಾಡುತ್ತಾರೆ. ನಾನೊಬ್ಬನೇ ಸ್ಟ್ರಾಂಗ್ ಎನ್ನುವ ರೀತಿ ಮಾತನಾಡುತ್ತಾರೆ. ಸುಮ್ಮನೆ ಬಂಬಡಾ ಹೊಡೆಯುವುದರಲ್ಲಿ ಅರ್ಥ ಇಲ್ಲ. ನನ್ನ ಅವಧಿಯಲ್ಲಿ‌ ಇದಕ್ಕಿಂತಲೂ ಸುಭದ್ರ ಆಡಳಿತ ನೀಡಿದ್ದೇನೆ. ಇತಿಹಾಸ ತಿರುಚಲು ಆಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಎಂದೂ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿಲ್ಲ. ಇದೊಂದು ಕುತಂತ್ರ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬರಬಾರದೆಂಬ ಕಾರಣಕ್ಕೆ ಹೆಣೆದ ಕುತಂತ್ರ. ನನ್ನ ವಿರೋಧ‌ ಮಾಡಿದವರು ಎಲ್ಲರೂ ಸ್ವರ್ಗದಲ್ಲಿದ್ದಾರೆ. ನಾನಿನ್ನೂ ಜೀವಂತ‌ ಇದ್ದೇನೆ. ನನ್ನೊಂದಿಗೆ ದೈವ ಶಕ್ತಿ ಇದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದೇ ನಾನು ಎಂದರು‌.

ರಾಷ್ಟ್ರದ ದೃಷ್ಟಿಯಿಂದ ಮೋದಿ ಆಡಳಿತ ಸರಿಯಿಲ್ಲ. ಬಹುಮತ ಇದ್ದಾಗ್ಯೂ ಮೋದಿ ಸರಿಯಾದ ಆಡಳಿತ ನೀಡಲಿಲ್ಲ. ಮಾಯಾವತಿ, ಮಮತಾ ಬ್ಯಾನರ್ಜಿ, ಶರದ್‌ ಪವಾರ್‌, ಚಂದ್ರಬಾಬು ನಾಯ್ಡು ಇನ್ನೂ ಅನೇಕರು ಪ್ರಧಾನಿಯಾಗುವ‌ ಅರ್ಹತೆ ಹೊಂದಿದ್ದಾರೆ. ನಾನು ಪ್ರಧಾನಿ ಆಕಾಂಕ್ಷಿ ಅಲ್ಲ. ಕಾಂಗ್ರೆಸ್ ಬೆಂಬಲವಿಲ್ಲದೇ ಪ್ರಧಾನಿ ಆಗಲು ಸಾಧ್ಯವಿಲ್ಲ. ನಾನು ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದರು.

ಮೋದಿ ಅವರ ದುರಾಡಳಿತದ ವಿರುದ್ಧ ಜಾತ್ಯತೀತ ಪಕ್ಷಗಳು ಒಂದಾಗಿವೆ. ಎಚ್.ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ 21 ಜಾತ್ಯತೀತ ಪಕ್ಷಗಳ ಮುಖಂಡರು ಒಂದಾಗಿ ಒಗ್ಗಟ್ಟು ಪ್ರದರ್ಶಿಸಿಯಾಗಿದೆ. ಆರು ಜನ ಮುಖ್ಯಮಂತ್ರಿಗಳು ಸೇರಿದರು. ಮೋದಿ‌ ಆಡಳಿತದಲ್ಲಿ‌ ವ್ಯವಸ್ಥೆ ಸರ್ವನಾಶ ಆಗಿದೆ. ಇದನ್ನು ತಡೆಯಲು ಎಲ್ಲರೂ ಒಟ್ಟಾಗಿದ್ದೇವೆ. ಎಲ್ಲರೂ ಕೂತು ಮಾತನಾಡಿ ಪ್ರಧಾನಿ ಅಭ್ಯರ್ಥಿ ಕುರಿತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.