ಯಾರದ್ದೋ ಹೆಸರಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ನಾನು ಬಂದಿಲ್ಲ: ಸುಮಲತಾಗೆ ಸಿಎಂ ಕುಮಾರಸ್ವಾಮಿ ಟಾಂಗ್‌

ಮಂಡ್ಯ: ಫೋನ್ ಕದ್ದಾಲಿಕೆ ನಾನೇಕೆ ಮಾಡಿಸಲಿ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಲ್ಲವೇ? ಅವರದ್ದೆ ಕೇಂದ್ರ ಸರ್ಕಾರವಿದೆ. ದೂರು ನೀಡಿ‌ ತನಿಖೆ ಮಾಡಿಸಬಹುದಲ್ಲವೇ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರಿಗೆ ತಿರುಗೇಟು ನೀಡಿದರು.

ಮಾಜಿ ಸಂಸದ, ರೈತ ನಾಯಕ ಜಿ. ಮಾದೇಗೌಡರ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊತ್ತಿದೆ ನಮಗೆ ಇವರು ಎಷ್ಟರ ಮಟ್ಟಿಗೆ ಚುನಾವಣಾ ಆಯೋಗ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು. ವೋಟ್​ ಅನ್ನು ಯಾರಿಗೆ ಹಾಕಬೇಕೆಂದು ಜನ ಈಗಾಗಲೇ ಡಿಸೈಡ್ ಮಾಡಿದ್ದಾರೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಮಾದೇಗೌಡರು ಹಿರಿಯರು. ಅವರ ಸಹಕಾರ, ಆಶೀರ್ವಾದ ಪಡೆಯಲು ಬಂದಿದ್ದೇನೆ. ಹಲವಾರು ಸಲಹೆ ಸೂಚನೆ ಕೂಡ ನೀಡಿದ್ದಾರೆ. ಈಗಾಗಲೇ ಮೈತ್ರಿ ಅಭ್ಯರ್ಥಿ ನಿಖಿಲ್ ಬಂದು ಆಶೀರ್ವಾದ ಪಡೆದಿದ್ದಾನೆ. ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿರುವಂತೆ ನನ್ನ ಬೆಂಬಲವೂ ಇದೆ ಎಂದು ಮಾದೇಗೌಡರು ಹೇಳಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಮುಖ್ಯ ನನಗೆ, ಹಲವಾರು ಯೋಜನೆಗಳಿಗೆ ಈಗಾಗಲೇ ಚಾಲನೆ ಕೊಟ್ಟಿದ್ದೇವೆ ಎಂದು ಹೇಳಿದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ, ಪಕ್ಷೇತರ ಅಭ್ಯರ್ಥಿ ಅಲ್ಲ ಅವರು. ಅವರ ಭಾಷಣದಲ್ಲಿ ಯಾವುದೇ ನೋವಿನ ಛಾಯೆ ಅವರ‌ ಮುಖದಲ್ಲಿ ಕಾಣುತ್ತಿಲ್ಲ. ಹಣ ಕೊಟ್ಟರೆ ಪಡೆದು ಮಜಾ ಮಾಡಿ ಅಂತಾರೆ. ತಾಯಿ ಹೃದಯವಿರುವ ಮಹಿಳೆ ಮಾತನಾಡುವ ರೀತಿನಾ ಇದು. ಇದನ್ನ ಬಹಿರಂಗ ಸಭೆಯಲ್ಲಿ ಜನತೆಗೆ ಹೇಳುತ್ತೇನೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಮಜಾ‌ ಮಾಡಲು ನಾನು ನೆರವು ನೀಡಲಿಲ್ಲ. ಕುಟುಂಬದ ಬಡತನ ಕಂಡು ನೀಡಿದ್ದೇನೆ. ಇವರ ಸಂಸ್ಕೃತಿ ಬೇರೆಯವರ ದುಡ್ಡು ಪಡೆದು ಮಜಾ ಮಾಡುವುದು. ಮಂಡ್ಯ ಜನತೆ ಕಷ್ಟ ಪಟ್ಟು ಜೀವನ ಮಾಡುವವರು ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಜನರ ಹತ್ತಿರ ಬಹಳ ಡ್ರಾಮಾ ನಡೆಯುವುದಿಲ್ಲ. ಕೆ.ಆರ್‌. ಪೇಟೆ ಕಾರ್ಯಕ್ರಮಕ್ಕೆ ಮೈಸೂರು ಹೋಟೆಲ್‌ನಲ್ಲಿ ಕುಳಿತು ಹಣ ಹಂಚಿಕೆ ಮಾಡಿದ್ದಾರೆ. ಯಾರು ಯಾರು ಹಣ ಕೊಟ್ಟಿದ್ದಾರೆ ನನಗೆ ಗೊತ್ತಿಲ್ವಾ? ಜಿಲ್ಲೆಯ ಜನತೆ ಜತೆ ಚೆಲ್ಲಾಟವಾಡಲು ಬಂದಿಲ್ಲ. ಯಾರದ್ದೋ ಹೆಸರಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಬಂದಿಲ್ಲ. ನಾನು ರೈತರ ಪರ ಕೆಲಸ ಮಾಡಲು ಬಂದಿದ್ದೇನೆ. ಅಂತ ಜಾಯಮಾನ ನನ್ನದಲ್ಲ. ದುಡ್ಡು ಪಡೆದು ಮಜಾ ಮಾಡಿ ನನಗೆ ವೋಟು ಮಾಡಿ ಅಂದರೆ ಜನ ಒಪ್ಪುತ್ತಾರಾ? ನಾನು ಹಳ್ಳಿ ಸುತ್ತುತ್ತೇನೆ. ನಿಮ್ಮ ಪರ ಕೆಲಸ ಮಾಡೋ ನಾನು ಬೇಕೋ, ಡ್ರಾಮ ಮಾಡೋರು ಬೇಕೋ ಅಂತ ಕೇಳುತ್ತೇನೆ ಎಂದರು. (ದಿಗ್ವಿಜಯ ನ್ಯೂಸ್)