ಸುಮಲತಾ ಅಂಬರೀಷ್​ ಬಳಿ ನಾನ್ಯಾಕೆ ಕ್ಷಮೆ ಕೇಳಲಿ, ನನಗೇನು ಹುಚ್ಚಾ: ಎಚ್​.ಡಿ.ರೇವಣ್ಣ

ದೆಹಲಿ/ಬೆಂಗಳೂರು: ನಟಿ ಸುಮಲತಾ ಅಂಬರೀಷ್​ ಅವರ ಬಳಿ ನಾನ್ಯಾಕೆ ಕ್ಷಮೆ ಕೇಳಲಿ? ನನಗೇನು ಹುಚ್ಚಾ ಎಂದು ಹೇಳುವ ಮೂಲಕ ಸಚಿವ ಎಚ್​.ಡಿ.ರೇವಣ್ಣ ಅವರ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯ ರಾಜಕಾರಣ ನನಗೆ ಚೆನ್ನಾಗಿ ಗೊತ್ತಿದೆ ಬಿಡ್ರಿ, ಮಂಡ್ಯಕ್ಕೆ ಸುಮಲತಾ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಸುಮಲತಾ ಬಳಿ ನಾನ್ಯಾಕೆ ಕ್ಷಮೆ ಕೇಳಲಿ? ನನಗೇನು ಹುಚ್ಚಾ? ನಾನು ಕೆಟ್ಟ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ಅಪಾರ್ಥ ಕಲ್ಪಿಸಬೇಡಿ. ಯಾವುದೇ ಕೆಟ್ಟ ಭಾವನೆಯಿಂದ ಹೇಳಿಕೆ ನೀಡಿಲ್ಲ. ಹಿಂದು ಸಂಪ್ರದಾಯದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದೇನೆ. ಸುಮಲತಾ ಹಿಂದೆ ಯಾರಿದ್ದಾರೆಂದು ಸಮಯ ಬಂದಾಗ ಹೇಳುತ್ತೇನೆ ಎಂದು ತಿಳಿಸಿದರು.

ಸುಮಲತಾ ಕುರಿತು ರೇವಣ್ಣ ಹೇಳಿದ್ದೇನು?
ಗಂಡ ಸತ್ತು ಇನ್ನೂ ಆರು ತಿಂಗಳು ಕಳೆದಿಲ್ಲ. ಸುಮಲತಾಗೆ ರಾಜಕಾರಣ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದ್ದ ಅವರು ಕುಟುಂಬ ರಾಜಕಾರಣ, ರಾಜಕೀಯದಲ್ಲಿ ಸಹಜ ಎಂದು ಹೇಳಿದ್ದರು.

ಸುಮಲತಾ ಪ್ರತಿಕ್ರಿಯೆ ಏನು?
ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಬಾರದು. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಪೂಜಿಸುತ್ತಾರೆ. ಯಾರು ಏನೇ ಮಾತನಾಡಿಕೊಳ್ಳಲಿ. ನಾನಂತೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸುಮಲತಾ ಅಂಬರೀಷ್‌ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)