ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಸತೀಶ್​ ಜಾರಕಿಹೊಳಿ

ಬೆಂಗಳೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನಾನು ಈಗಾಗಲೇ ನಾಯಕನಾಗಿ ಬೆಳೆದಿದ್ದೇನೆ. ಸಚಿವನಾಗಿಯೇ ಕೆಲಸ ಮಾಡಬೆಕು ಎಂಬುದು ತಪ್ಪು ಕಲ್ಪನೆ ಎಂದು ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಸ್ಥಾನ ಹೋದ ಮೂರೇ ತಿಂಗಳಲ್ಲಿ ಗುಂಡ್ಲುಪೇಟೆ ಚುನಾವಣೆಯಲ್ಲಿ ಕೆಲಸ ಮಾಡಿ ನನ್ನ ಶಕ್ತಿಯನ್ನು ತೋರಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ನನ್ನ ಸಾಮರ್ಥ್ಯವನ್ನು ತೋರಿಸಿದ್ದೆ. ಅವಶ್ಯಕತೆ ಇದ್ದಾಗಲೆಲ್ಲ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂದು ಸತೀಶ್​ ತಿಳಿಸಿದರು.

ಇಂದು ಸಂಜೆ ನಾನು ದೆಹಲಿಗೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ನಾನು ರಾಹುಲ್​ ಅವರೊಂದಿಗೆ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಲು ತೆರಳುತ್ತಿದ್ದೇನೆ. ರಾಜ್ಯ ಕಾಂಗ್ರೆಸ್​ ನಾಯಕರು ಪರಿಷತ್​ ಚುನಾವಣೆ ಸಂಬಂಧ ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಹಾಗಾಗಿ ಅವರೊಂದಿಗೆ ತೆರಳಿಲ್ಲ. ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಸಿಕ್ಕರೆ ಅವರನ್ನು ಭೇಟಿ ಮಾಡುತ್ತೇನೆ. ಇಲ್ಲದಿದ್ದರೆ ಅವರು ಬೆಂಗಳೂರಿಗೆ ವಾಪಸಾದ ನಂತರ ಅವರನ್ನು ಭೇಟಿ ಮಾಡುತ್ತೇನೆ. ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ತಿಳಿಸಿದರು.