ನಾನು ಹೌಸ್​ವೈಫ್​ (ಗೃಹಿಣಿಯರ ದುಗುಡ)

ಎಡಬಿಡದೆ ಕುಟುಂಬಕ್ಕಾಗಿ ದುಡಿದು ಪೋಷಿಸಿ ಪೊರೆದೂ ತಾನು ಅಮುಖ್ಯಳು ಎಂಬ ನೋಟವನ್ನು ಸಮಾಜ ಹಾಗೂ ಕೆಲವೊಮ್ಮೆ ತನ್ನದೇ ಕುಟುಂಬದಿಂದಲೂ ಸಹಿಸಿಕೊಳ್ಳಬೇಕಾದ ಸಂಕಟ ಅದೆಷ್ಟೋ ಗೃಹಿಣಿಯರದ್ದು. ಈ ಎಲ್ಲ ಭಾವನಾತ್ಮಕ ಒತ್ತಡ ಹಾಗೂ ಸಂಸಾರದ ಜವಾಬ್ದಾರಿಗಳ ನಡುವೆಯೂ ತಮ್ಮ ಮನಸ್ಥಿತಿಯನ್ನು ಆರೋಗ್ಯಕರವಾಗಿ ಇಟ್ಟು ಕೊಳ್ಳುವುದು, ಕಾಪಾಡಿ ಕೊಳ್ಳುವುದು ಇಂದಿನ ಅಗತ್ಯ.

‘ಬರೀ ಹೌಸ್​ವೈಫ್ ಅಷ್ಟೇ ಎಂದು ಹೇಳಿಕೊಳ್ಳಲು ಹಿಂಸೆಯಾಗುತ್ತದೆ. ಏನು ಮಾಡುತ್ತೀರಿ ಎಂದು ಯಾರೂ ಕೇಳದಿರಲಿ ಎಂದು ಬಯಸುತ್ತಿರುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಮನೆಯಲ್ಲಿರುವುದೇ ಉತ್ತಮ ಆಯ್ಕೆ ಎಂದೆನಿಸಿದರೂ ನೆಮ್ಮದಿಯಿಲ್ಲ. ಉದ್ಯೋಗಸ್ಥ ಮಹಿಳೆಯರನ್ನು ನೋಡಿದರೆ ಅವರೆಲ್ಲ ಅದೃಷ್ಟವಂತರು ಎನಿಸುತ್ತದೆ. ಯಾವುದೇ ರೀತಿಯಲ್ಲಿಯೂ ಹೇಳಿಕೊಳ್ಳುವಂತಹ ಕೊರತೆ ಎಂದೇನೂ ಇಲ್ಲವಾದರೂ ಒಂಥರ ಬೇಸರ, ಹತಾಶೆ ಆವರಿಸಿರುತ್ತದೆ. ಯಾರಾದರೂ ನಿನಗೇನು ಬಿಡು ಮನೆಯಲ್ಲಿ ಆರಾಮಾಗಿದ್ದೀಯ ಎಂದರೆ ತುಂಬ ಕೋಪ ಬರುತ್ತದೆ. ತಕ್ಕಮಟ್ಟಿಗೆ ಎಲ್ಲವನ್ನೂ ಸರಿತೂಗಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಆದರೂ ಮನಸ್ಸೇ ಸರಿ ಇಲ್ಲ’ ಎನ್ನುವುದು 36ರ ಗೃಹಿಣಿ ಸುಮತಿಯ ಅಳಲು.

ಸಾಮಾಜಿಕವಾಗಿ ಅಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಗೃಹಿಣಿಯ ಪಟ್ಟವನ್ನು ನಿಭಾಯಿಸುವುದು ಬಹಳ ಕಷ್ಟದ್ದು. ನಮ್ಮ ಸಮಾಜ ಮಹಿಳೆಯು ಸಮರ್ಥವಾಗಿ ಸಾಂಸಾರಿಕ ಜೀವನ ನಡೆಸುವುದರೊಂದಿಗೆ ವೈಯಕ್ತಿಕ ಸಾಧನೆ, ಸಂಪಾದನೆಗಳನ್ನೂ ಮಾಡಬೇಕೆಂದು ಬಯಸುತ್ತದೆ! ಅಂತೆಯೇ, ತಾನು ಅದು, ಇದು ಎಂದು ಪ್ರತಿಷ್ಠಿತ ವೃತ್ತಿಗಳನ್ನು ಹೇಳಿಕೊಳ್ಳುವವರ ನಡುವೆ ಹೌಸ್ ವೈಫ್ ಎಂದವಳನ್ನು ನಿಷ್ಪ್ರಯೋಜಕವಾಗಿಯೂ ನೋಡುತ್ತದೆ.

ಮನೆಯೆಂಬ ಜಗತ್ತು: ದಿನನಿತ್ಯದ ಕೆಲಸ ಕಾರ್ಯಗಳ ಸುತ್ತಲೇ ಬದುಕುವ ಗೃಹಿಣಿ ಎಷ್ಟು ಸಮರ್ಪಕವಾಗಿ ಮನೆಯೆಂಬ ಪ್ರಪಂಚದೊಳಗೆ ತನ್ನನ್ನು ತಾನು ನಿಭಾಯಿಸಿಕೊಳ್ಳುತ್ತಾಳೆ ಎಂಬುದರ ಮೇಲೆ ಆಕೆಯ ಮಾನಸಿಕ ಆರೋಗ್ಯ ಅವಲಂಬಿತವಾಗಿರುತ್ತದೆ. ಹೆಣ್ಣುಮಕ್ಕಳು ಹಣಕಾಸಿನ ಸಮಸ್ಯೆ, ಮಕ್ಕಳ ಭವಿಷ್ಯ, ಸಂಬಂಧಗಳಲ್ಲಿನ ಕಿರಿಕಿರಿ ಇವುಗಳ ಬಗ್ಗೆ ಹೆಚ್ಚಾಗಿ ಬಾಧಿತರಾಗುತ್ತಾರೆ. ಸಮಸ್ಯೆಗಳ ಬಗ್ಗೆ ಅನಗತ್ಯವೆನಿಸುವಷ್ಟು ತೀವ್ರವಾಗಿ ಚಿಂತಿಸುತ್ತ ಭಾವನಾತ್ಮಕ ಏರುಪೇರುಗಳಲ್ಲಿಯೇ ಕಳೆದು ಹೋದಾಗ ಅದು ಅವರ ಮಾನಸಿಕ, ದೈಹಿಕ ಆರೋಗ್ಯದೊಡನೆ ಕೌಟುಂಬಿಕ ವ್ಯವಸ್ಥೆಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟು ಮಾಡದೇ ಇರದು.

ಹೋಲಿಕೆ, ಸ್ಪರ್ಧೆ ಸಲ್ಲದು: ಅವರವರ ಬದುಕು ಅವರವರಿಗೆ. ಆತ್ಮತೃಪ್ತಿಯ ಕೊರತೆ ಹೆಚ್ಚಾದಾಗ ನಮ್ಮದಲ್ಲದ್ದು ನಮಗೆ ಅತ್ಯಂತ ಚೆನ್ನಾಗಿ ತೋರುವುದು ಸಾಮಾನ್ಯ. ಪರಿಪೂರ್ಣ ಎನ್ನುವುದು ಅವಾಸ್ತವಿಕ. ಗೃಹಿಣಿಯಾದ ತನಗೆ ವೃತ್ತಿ ಜೀವನವೇ ಸೊಗಸಾಗಿ ಕಂಡರೆ, ನೌಕರಿಯಲ್ಲಿರುವವರಿಗೆ ತನ್ನ ಜೀವನವೇ ಉತ್ತಮ ಎನಿಸದೆ ಇರದು ಎಂಬುದು ಗೃಹಿಣಿಯ ಮನದಲ್ಲಿರಬೇಕು. ಹಾಗಾಗಿ ಏನೇ ಇರಲಿ, ನಮ್ಮ ಸಾಮರ್ಥ್ಯ, ಪರಿಸ್ಥಿತಿ, ಅಗತ್ಯಕ್ಕೆ ತಕ್ಕಂತೆ ಜೀವನವನ್ನು ರೂಪಿಸಿಕೊಳ್ಳುವುದು ಮಹತ್ವ ಪಡೆಯಬೇಕೇ ಹೊರತು ಹೋಲಿಕೆ, ಸ್ಪರ್ಧೆಗಳು ಅನವಶ್ಯಕ.

ಈ ನಿಟ್ಟಿನಲ್ಲಿ ಬದುಕು ಕಟ್ಟಲು ಹೊರಟಲ್ಲಿ ಮನಸ್ಸಿಗೆ ಮುದ, ಮಿದುಳಿಗೆ ಕಸುವು ನೀಡುವ ಹಲವು ದಾರಿಗಳು ಕಾಣಸಿಗುವುದು ಖಚಿತ.

ಕಾಳಜಿಯ ಕೊರತೆ: ಬರೀ ಹೊರಗಿನ ಸವಲತ್ತು, ಸೌಕರ್ಯಗಳಿಂದಷ್ಟೇ ಸುಖ ಸಿಗದು. ತನ್ನವರಿಂದ ಸಣ್ಣದೊಂದು ಮೆಚ್ಚುಗೆ, ಪ್ರೀತಿಯ ಆರೈಕೆ, ಬೆಂಬಲ, ಆಪ್ತ ಒಡನಾಟ ಲಭ್ಯವಾಗದ ಬಿಡುವಿಲ್ಲದ ನಿರಂತರ ದುಡಿಮೆ ಭಾವನಾತ್ಮಕವಾಗಿ ಬರಿದಾಗಿಸುತ್ತದೆ. ಮನೆಯವರ ಕಾಳಜಿ ಮಾಡುವುದರಲ್ಲಿ ತನ್ನನ್ನೇ ತಾನು ಸಂಪೂರ್ಣ ನಿರ್ಲಕ್ಷಿಸಿಕೊಂಡರೆ ಮನಸ್ಸಿಗೂ ಸುಸ್ತು, ಆಯಾಸ. ವ್ಯಕ್ತಿತ್ವದ, ಆಂತರ್ಯದ ಪೋಷಣೆ ಇರದಿದ್ದಲ್ಲಿ ಮನಸ್ಸನ್ನು ಹತಾಶ ಭಾವ ಅವರಿಸಿಕೊಳ್ಳುವುದು. ಹಾಗಾಗೇ ಸಂಸಾರದಲ್ಲಿ ಪರಸ್ಪರ ಮೆಚ್ಚುಗೆ, ಭಾವನಾತ್ಮಕ ಬೆಸುಗೆ, ಎಲ್ಲರ ಸ್ವಪೋಷಣೆಗೂ ಆದ್ಯತೆ ಇರುವುದು ಮುಖ್ಯ ಎನಿಸುವುದು.

ಸ್ವ ಆರೈಕೆಯೂ ಆದ್ಯತೆಯಾಗಲಿ

ಹೌಸ್ ವೈಫ್ ಎಂದರೆ ಅವಳು ಕುಟುಂಬವನ್ನು ಪೋಷಿಸುವಾಕೆ. ಬರೀ ಒಂದಾದ ಮೇಲೊಂದರಂತೆ ಕೆಲಸಗಳನ್ನು ಎಳೆದುಕೊಂಡು ಅಚ್ಚುಕಟ್ಟಾಗಿ ಅವುಗಳನ್ನು ನಿಭಾಯಿಸುತ್ತಲೇ ಇರುವ ಯಂತ್ರವಲ್ಲ. ಕುಟುಂಬವನ್ನು ಪೊರೆಯಲು ಮೊದಲು ಅವರ ಮಾನಸಿಕ ಸಮತೋಲನ ಸರಿಯಾಗಿರಬೇಕು, ಒಳಗಿನ ಸಂತೋಷ ನೆಮ್ಮದಿಗಳನ್ನು ಕೌಟುಂಬಿಕ ವಾತಾವರಣ ಪ್ರತಿಫಲಿಸುವುದೇ ಹೊರತು ತಾವೇ ಜಝುರಿತವಾಗಿ ಎಲ್ಲರನ್ನೂ ಸಂತಸದಲ್ಲಿ ತೇಲಿಸುವುದು ಸಾಧ್ಯವಿಲ್ಲದ್ದು. ಹಾಗಾಗಿ ಸ್ವ-ಆರೈಕೆಯೆಡೆಗೂ ಗೃಹಿಣಿಯರು ಗಮನ ವಹಿಸುವುದು ಮುಖ್ಯ. ಸ್ವಪೋಷಣೆಗೂ ಜಗ್ಗದ ಖಿನ್ನ ಮನಸ್ಥಿತಿ, ಕೀಳರಿಮೆ, ದುಃಖ, ಹತಾಶೆಗಳು ಹೌಸ್ ವೈಫ್ ಆಗಿ ಮನೆಯಲ್ಲಿರುವುದರಿಂದಲೇ ಬಂದಿದೆ, ಇದು ಸಹಜವೆಂಬ ನಿರ್ಲಕ್ಷ್ಯ ತರವಲ್ಲ. ‘ಎಲ್ಲವನ್ನೂ ನಾವೇ ಸರಿದೂಗಿಸಬೇಕು’ ಎಂಬುದೇ ಹೆಚ್ಚು ವೇದನೆಗೆ ತಳ್ಳುತ್ತಿರ ಬಹುದು. ಅಗತ್ಯವಿದ್ದಾಗ ತಜ್ಞರ ಸಹಾಯ ಪಡೆಯಲು ಹಿಂಜರಿಕೆ ಬೇಡ.

ಪುರುಷರಿಗೆ ಕಿವಿಮಾತು

ಪತ್ನಿಯ ಮಾನಸಿಕ ಸ್ಯಾಸ್ಥ್ಯ ರಕ್ಷಣೆಯಲ್ಲಿ ಪುರುಷರ ಹಾಗೂ ಮನೆಯವರ ಪಾತ್ರ ಅಧಿಕವಾಗಿ ಇರುತ್ತದೆ.

  1. ನಿಮ್ಮ ಸಂಗಾತಿಯೋ, ತಾಯಿಯೋ ಗೃಹಿಣಿಯಾಗಿದ್ದಲ್ಲಿ ಅವರಿಗೂ ಅವರದೇ ಆದ ಸಮಯ, ಪೋಷಣೆ ಬೇಕು ಎಂಬುದು ಮನದಲ್ಲಿರಲಿ.
  2. ವೃತ್ತಿಯೊಂದೇ ವ್ಯಕ್ತಿಯ ಮಾನದಂಡವಲ್ಲ. ನಿಮ್ಮ ಜೀವನದಲ್ಲಿ ಆಕೆಯ ಪಾತ್ರ ದೊಡ್ಡದು. ಗೌರವಿಸಿ, ಆದರಪೂರ್ವಕವಾಗಿ ವರ್ತಿಸಿ.
  3. ನಿಮ್ಮ ಅವಶ್ಯಕತೆಗಳ ಪೂರೈಕೆ ಅವರ ಕರ್ತವ್ಯ ಎಂಬ ಮನಃಸ್ಥಿತಿ ಸಲ್ಲದು. ಹಾಗೆ ನೋಡಿದರೆ ಆಕೆಯ ಬಗೆಗಿನ ಮೆಚ್ಚುಗೆ, ಪ್ರೀತಿಯ ಮನವಿ, ಕಾಳಜಿ, ಪ್ರಮುಖ ನಿರ್ಧಾರಗಳನ್ನು ರ್ಚಚಿಸುವುದು ನಿಮ್ಮ ಕರ್ತವ್ಯವೂ ಹೌದು.
  4. ಗೃಹಿಣಿಯರಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಏರುಪೇರುಗಳು ಆಕೆ ಕೆಲಸವಿಲ್ಲದೇ ತಂದುಕೊಂಡಿದ್ದಾಳೆ ಎಂಬ ದೂಷಣೆ ಸಲ್ಲದು. ಉತ್ತಮ ಮಾನಸಿಕ ಸ್ಥಿತಿಯನ್ನು ಹೊಂದುವ ಕ್ರಮಗಳನ್ನು ಆಕೆಗೆ ತಿಳಿಸಿಕೊಡಿ, ಬೆಂಬಲಿಸಿ. ಅಗತ್ಯವಿದ್ದಲ್ಲಿ ತಜ್ಞರನ್ನು ಸಂರ್ಪಸುವಂತೆ ಪ್ರೇರೇಪಿಸಿ.
  5. ದೈಹಿಕ ಸ್ಥಿತಿಯೂ ಮಾನಸಿಕ ಸ್ವಾಸ್ಥ್ಯ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಮುಟ್ಟಿನ ದಿನಗಳಲ್ಲಾಗುವ ಕಿರಿಕಿರಿ, ಋತುಬಂಧದ ಸಮಯದಲ್ಲಾಗುವ ಮಾನಸಿಕ ವ್ಯತ್ಯಯದ ಬಗ್ಗೆ ತಿಳಿದುಕೊಳ್ಳಿ. ಆಕೆಯ ದೈಹಿಕ, ಭಾವನಾತ್ಮಕ ತೊಂದರೆಗಳಿಗೆ ಸ್ಪಂದಿಸಿ.
  6. ಆಕೆ ಸ್ವಕಾಳಜಿ ಮಾಡುತ್ತಿದ್ದಾಳೆಯೇ ಎಂದು ಗಮನವಿಡಿ. ಸಮಯಕ್ಕೆ ಸರಿಯಾಗಿ ಆಹಾರ, ಔಷಧ ತೆಗೆದುಕೊಳ್ಳುತ್ತಿರುವಳೇ ಎಂದು ತಿಳಿಯಿರಿ. ಒಬ್ಬಳೇ ಮಾಡಿಕೊಳ್ಳಬೇಕೆಂದು ಊಟೋಪಚಾರಗಳನ್ನು ನಿರ್ಲಕ್ಷಿಸುವ ಗೃಹಿಣಿಯರು ಜಾಸ್ತಿ.
  7. ನಿಮ್ಮ ಸಂವಹನದಲ್ಲಿ ಕಾಳಜಿಯಿರಲಿ. ಆರ್ಡರ್ ಬೇಡ. ರಿಕ್ವೆಸ್ಟ್ ಇರಲಿ. ನಾನು ಹೇಳಿದ್ದು ಆಕೆ ಮಾಡಿಬಿಡಬೇಕು ಎನ್ನುವ ಧೋರಣೆ ಸಲ್ಲ. ‘ನನಗೆ ಇದರ ಅಗತ್ಯವಿದೆ. ನಿನಗೆ ಮಾಡಲು ಸಾಧ್ಯವಾದರೆ ಒಳ್ಳೆಯದಿತ್ತು’ ಎನ್ನುವುದು ಸರಿಯಾದದ್ದು.
  8. ಆಕೆ ಅಪ್ಡೇಟ್ ಆಗಲು ಸಹಕರಿಸಿ. ಹೊರ ಪ್ರಪಂಚದ ಆಗುಹೋಗುಗಳ, ಟ್ರೆಂಡ್​ನ ಅರಿವಿಲ್ಲವೆಂದು ಮೂದಲಿಸದೇ ಗೊತ್ತಿರುವುದನ್ನು ಹಂಚಿಕೊಳ್ಳಿ, ಕಲಿಕೆಗೆ ಪ್ರೇರೇಪಿಸಿ.
ಹೀಗೆ ಮಾಡಿ…

ನೆನಪಿಡಿ, ಸಂಪಾದನೆ ಮಾಡಿದ್ದೇ ಕೆಲಸವಲ್ಲ. ಕುಟುಂಬವೂ ಕರ್ತವ್ಯವೇ. ಸಮಾಜ ಬದಲಾಗುತ್ತಿರುತ್ತದೆ. ‘ಗೃಹಿಣಿ ಅಷ್ಟೇ’ ಎಂಬ ಕೀಳರಿಮೆ ಸಲ್ಲ. ಸಮಾಜದ ತಿರಸ್ಕಾರಗಳಿಗೆ ಮನಸ್ಸು ಕೆಡಿಸುವಷ್ಟು ಮನ್ನಣೆ ಬೇಡ.

ದುಡಿಮೆ ಅನಿವಾರ್ಯ, ಅವಶ್ಯಕ. ದುಡಿಯುವುದರ ಉದ್ದೇಶ ಉತ್ತಮ ಬದುಕು ಕಟ್ಟಿಕೊಳ್ಳುವುದು. ಅದಕ್ಕೆ ದುಡಿದರಷ್ಟೇ ಸಾಲದು. ಸಂಸ್ಕಾರ, ಸತ್​ಚಿಂತನೆಯೂ ಬೇಕು. ಈ ನಿಟ್ಟಿನಲ್ಲಿ ನಿಮ್ಮ ಸ್ಥಾನದ ಮಹತ್ವವನ್ನು ಅವಲೋಕಿಸಿಕೊಳ್ಳಿ.

ನಾನು ಸಂಪಾದಿಸುತ್ತಿಲ್ಲ ಎಂಬ ಪಾಪಪ್ರಜ್ಞೆಯನ್ನು ದೂರವಿಡಿ. ಎಲ್ಲರೂ ಪರಸ್ಪರಾವಲಂಬಿಗಳೇ. ಆರ್ಥಿಕ ಅವಲಂಬನೆ ನಿಮಗಿರುವಂತೆಯೇ ನಿಮ್ಮ ಸಂಗಾತಿ, ಕುಟುಂಬಕ್ಕೂ ನಿಮ್ಮ ಮೇಲೆ ಹಲವಾರು ಸಾಂಸಾರಿಕ, ಭಾವನಾತ್ಮಕ ಅವಲಂಬನೆಗಳಿವೆ ಮತ್ತು ಅದನ್ನು ನೀವು ಮಾತ್ರ ಪೂರೈಸಬಲ್ಲಿರಿ ಎಂಬುದನ್ನು ನೆನಪಿನಲ್ಲಿಡಿ.

ದಿನಚರಿ ರೂಢಿಸಿಕೊಳ್ಳಿ. ಎಲ್ಲ ಕೆಲಸಗಳಿಗೂ, ವಿರಾಮಕ್ಕೂ, ಸ್ವ ಆರೈಕೆಗೂ ಸಮಯ ಹಂಚಿಕೊಳ್ಳಿ.

ಕ್ರಿಯಾತ್ಮಕತೆಯೂ ಕೆಲಸವೇ. ಕ್ರಿಯಾಶೀಲರಾಗಿ. ನಿಮ್ಮೊಳಗಿನ ಕಲಾವಿದೆಯನ್ನು ಪೋಷಿಸಿ. ಬರೆಯಿರಿ, ಹಾಡಿ, ನರ್ತಿಸಿ, ವ್ಯಾಯಾಮ ಮಾಡಿ. ನಕ್ಕು ನಲಿಯಲು ಬಿಡುವು ಮಾಡಿಕೊಳ್ಳಿ.

ಗೃಹಿಣಿಯಾದ ಮಾತ್ರಕ್ಕೆ ನೀವು ಎಲ್ಲವನ್ನೂ ಮಾಡಿಬಿಡುವ ಸೂಪರ್ ವುಮನ್ ಎನಿಸಿಕೊಳ್ಳಬೇಕಿಲ್ಲ. ಮನೆಯವರ, ಹೊರಗಿನ ಸಹಾಯ ಪಡೆದುಕೊಳ್ಳಲು ಹಿಂಜರಿಕೆ ಬೇಡ.

ಸಾಮಾಜಿಕವಾಗಿ ತೆರೆದುಕೊಳ್ಳಿ, ಹೊರಗೆ ಓಡಾಡಿ, ಪುಸ್ತಕ ಓದಿ, ಪ್ರವಾಸ ಮಾಡಿ, ಹೊಸ ಸ್ನೇಹ ಬೆಳೆಸಿ, ಆತ್ಮೀಯರೊಡನೆ ಮನಬಿಚ್ಚಿ ಮಾತಾಡಿ, ಹಗುರಾಗಿ.

ಮನಸ್ಸು ಪ್ರಫುಲ್ಲವಾಗಿರಲಿ. ಬೇಸರ, ಕೋಪ, ಕೊರತೆಗಳು, ಹೋಲಿಕೆ, ಖಾಲಿತನಗಳು ಮನಸ್ಸನ್ನು ಮುದುಡಿಸದಿರಲಿ. ಇಷ್ಟವಾದುದರಲ್ಲಿ ತೊಡಗಿಸಿಕೊಳ್ಳುವುದನ್ನು ಅಭ್ಯಸಿಸಿದರೆ ಅನವಶ್ಯಕ ಕಿರಿಕಿರಿಗಳಿರುವುದಿಲ್ಲ.

ಮನಕಲಕುವ ಮನರಂಜನೆ ಬೇಡ

ಟಿ.ವಿ, ಮೊಬೈಲು, ವಾಟ್ಸ್​ಆಪ್, ಫೇಸ್​ಬುಕ್ ಮನೆಯ ಜಗತ್ತನ್ನು ವಿಸ್ತಾರವಾಗಿಸಿವೆ. ಆದರೆ ಮನಸ್ಸಿಗೆ ಹಿತ ನೀಡಿ, ಮಿತಿಯಲ್ಲಿದ್ದರಷ್ಟೇ ಅವು ಮನರಂಜನೆ. ಏನನ್ನು ನೋಡುತ್ತಿದ್ದೇನೆ, ಅದು ತನ್ನೊಳಗೆ ಏನು ಮಾಡುತ್ತಿದೆ ಎಂಬ ಅರಿವು ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಯಾವುದೋ ಬೇಡವಾದ ಧಾರಾವಾಹಿಯ ಜಗಳ, ಸೋಷಿಯಲ್ ಮೀಡಿಯಾ ಗಾಸಿಪ್​ಗಳು ನೆಮ್ಮದಿಗೆ ಸಂಚು ತರಬಹುದು. ಅಲ್ಲದೆ ದಿನನಿತ್ಯದ ಕರ್ತವ್ಯಗಳು, ಮನೆ-ಮಕ್ಕಳನ್ನು ನಿರ್ಲಕ್ಷಿಸುವುದರ ಮಟ್ಟಿಗಿನ ಸೋಷಿಯಲ್ ಮೀಡಿಯಾ ಅವಲಂಬನೆ ಒಳಗಿನ ಖಿನ್ನತೆ, ಆತಂಕ, ಮಾನಸಿಕ ಏರುಪೇರಿನ ಲಕ್ಷಣವಾಗಿರಲೂಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಜೀವನದ ಜಂಜಾಟ, ಸವಾಲುಗಳಿಂದ ತಪ್ಪಿಸಿಕೊಳ್ಳಲು ಫ್ಯಾಂಟಸಿ, ಅನವಶ್ಯಕ ಸ್ನೇಹ ಸಂಬಂಧಗಳಿಗೆ ಮನಸ್ಸು ಹಾತೊರೆಯುತ್ತದೆ ಎಂಬುದು ಸಹ ನೆನಪಲ್ಲಿರಲಿ. ಅತಿ ಹೆಚ್ಚು ಅವಲಂಬನೆಯ ಹಿಂದಿರುವ ಕಾರಣವನ್ನು ಪರಿಶೀಲಿಸಿ, ಸಹಾಯಕ್ಕೆ ಮುಂದಾಗುವುದು ಉತ್ತಮ.

Leave a Reply

Your email address will not be published. Required fields are marked *