ನಾನು ಮಾನವ ಧರ್ಮದ ಸೇವಕ

ತಿ.ನರಸೀಪುರ: ನಾನು ಧರ್ಮ ಪ್ರಚಾರಕನಾಗಲಿ, ರಕ್ಷಕನಾಗಲಿ ಅಲ್ಲ. ನಾನು ಮಾನವ ಧರ್ಮದ ಸೇವಕ. ನಮ್ಮ ನಡವಳಿಕೆಯಲ್ಲಿ ಸಮಾಜದ ಸುಖ, ಶಾಂತಿ ನೆಮ್ಮದಿ ಕಾಣುವಂತಾಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದ ಕೊನೆಯ ದಿನವಾದ ಮಂಗಳವಾರ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಕುಂಭಮೇಳವನ್ನು ದಕ್ಷಿಣ ಭಾರತಕ್ಕೆ ತರುವಲ್ಲಿ ಅನೇಕ ಶ್ರೀಗಳು ಶ್ರಮವಹಿಸಿದ್ದಾರೆ. ಭಕ್ತರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ತಮ್ಮ ಮನದ ಕಲ್ಮಶ, ಕೆಟ್ಟ ಆಲೋಚನೆಗಳನ್ನು ದೂರ ಮಾಡಿಕೊಂಡು ಒಳ್ಳೆಯದನ್ನು ಮಾಡುವ ಸಂಕಲ್ಪ ಮಾಡಲಿ ಎಂದು ಅಶಿಸಿದರು.
ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ನಾವೆಲ್ಲರೂ ಒಗ್ಗಟ್ಟಿನಿಂದ ಸಂಸ್ಕೃತಿ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡೋಣ. ಕುಂಭಮೇಳದ ಮುಖಾಂತರ ಕಾವೇರಿ ಮಾತೆಯಲ್ಲಿ ರೈತರ ಬದುಕನ್ನು ಕಾಪಾಡುವಂತೆ ಪ್ರಾರ್ಥಿಸಿ ಎಂದು ಕೋರಿದರು.

ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜಗತ್ತಿನ ಜೀವಿಗಳ ರಕ್ಷಣೆಗೆ ಹಾಗೂ ವಿನಾಶಕ್ಕೆ ನೀರು ಕಾರಣ ಎಂದು ಮಹಾವಿಷ್ಣು ಹೇಳುತ್ತಾರೆ. ನಮಗೆ ಮೂರು ಶರೀರಗಳಿವೆ. ಸ್ಥೂಲ ಶರೀರವನ್ನು ತೊಳೆದುಕೊಳ್ಳಲು ನೀರು ಬೇಕು. ಸೂಕ್ಷ್ಮ ಶರೀರದಲ್ಲಿ ಜ್ಞಾನ ಉಪಾಸನೆಯ ಮೂಲಕ ನಾವು ಅಂತಃಕರಣ ಶುದ್ಧಿ ಮಾಡಿಕೊಳ್ಳಬೇಕು. ನಮ್ಮ ಪಾಪ ಕರ್ಮಗಳನ್ನು ತೊಳೆದುಕೊಳ್ಳಲು ಸ್ನಾನ ಮಾಡುತ್ತೇವೆ ಎನ್ನುವುದೇ ಆದರೂ ಅಂತಃಕರಣದ ಪಾಪಗಳು ಮೊದಲಿಗೆ ದೂರವಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಂಸದ ಎಲ್.ಆರ್. ಶಿವರಾಮೇಗೌಡ, ಮಾಜಿ ಸಂಸದ ಜಿ. ಮಾದೇಗೌಡ, ಶಾಸಕರಾದ ಆರ್. ಧರ್ಮಸೇನಾ, ಕೆ. ಮಹದೇವ್, ಎಂ. ಅಶ್ವಿನ್‌ಕುಮಾರ್, ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಬೆಟ್ಟದಪುರದ ಸ್ವಾಮೀಜಿ, ವಾಟಾಳು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಐಜಿಪಿ ಶರತ್‌ಚಂದ್ರ, ಎಸ್‌ಪಿ ಅಮಿತ್ ಸಿಂಗ್, ಎಎಸ್‌ಪಿ ಪಿ.ವಿ. ಸ್ನೇಹ, ಎಸಿ ಶಿವೇಗೌಡ ಇತರರು ಹಾಜರಿದ್ದರು.

ಸಂಗಮದಲ್ಲಿ ಸಿಎಂಗೆ ನೀರಿನ ಪ್ರೋಕ್ಷಣೆ: ಇದಕ್ಕೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ, ಆದಿಚುಂಚನಗಿರಿ ಸ್ವಾಮೀಜಿ ಸೇರಿ ಹಲವು ಸ್ವಾಮೀಜಿಗಳೊಂದಿಗೆ ಯಾಗ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಸಂಗಮದಲ್ಲಿ ಅವರ ಸ್ನಾನಕ್ಕೆ ನಿಯೋಜಿಸಿದ್ದ ಸ್ಥಳಕ್ಕೆ ತೆರಳಿದರಾದರೂ ಪುಣ್ಯಸ್ನಾನ ಮಾಡದೆ ಕೇವಲ ನೀರಿನ ಪ್ರೋಕ್ಷಣೆ ಮಾಡಿಕೊಂಡರು. ಸಚಿವ ಜಿ.ಟಿ. ದೇವೇಗೌಡ ಅವರು ಮಾತ್ರ ಪುಣ್ಯಸ್ನಾನ ಮಾಡಿದರು.
ಇದೇ ವೇಳೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಹಲವು ಯತಿವರ್ಯರು, ಗಣ್ಯರು ಪುಣ್ಯಸ್ನಾನ ಮಾಡಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿಗಳನ್ನು ಸ್ವಾಮೀಜಿಗಳ ಜತೆಯಲ್ಲಿ ಛತ್ರಿ, ಚಾಮರ, ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿ ಸಂಗಮಕ್ಕೆ ಕರೆತರಲಾಯಿತು. ಬೆಳಗ್ಗೆ ತ್ರಿವೇಣಿ ಸಂಗಮದಲ್ಲಿ ಲಲಿತಸಹಸ್ರನಾಮ, ಹೋಮ, ಹವನ, ಪೂರ್ಣಾವತಿ ಮೊದಲಾದ ಪೂಜಾ ಕಾರ್ಯಗಳು ಜರುಗಿದವು.