ಹಿಂದುತ್ವದ ಪರ ಇರುವ ಒಳ್ಳೆಯ ಲೀಡರ್ ನಾನು, ಮುಖ್ಯಮಂತ್ರಿ ಆಗುವ ಅವಕಾಶವಿದೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್

ಬಾಗಲಕೋಟೆ: ಒಂದೊಂದು ಕಾಲದಲ್ಲಿ ಒಂದೊಂದು ಯುಗ ಇರುತ್ತದೆ. ಆಯಾ ಯುಗದಲ್ಲಿ ಬೇರೆ ಬೇರೆ ಬೆಳವಣಿಗೆಯಾಗುತ್ತದೆ. 75ರ ಮೇಲಾಗಿದ್ರೆ ಆಡ್ವಾಣಿ ತರಹ ರಿಟೈರ್ಡ್ ಮಾಡುತ್ತಿದ್ದರು. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ. ನನಗೂ ಕರ್ನಾಟಕದ ಸಿಎಂ ಆಗುವ ಅವಕಾಶವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಹಿರಿಯ ನಾಯಕ. ಕೆಳಮಟ್ಟದಿಂದ ಪಕ್ಷ ಕಟ್ಟಿದ್ದೇನೆ. ಯಾರೂ ಎಂಎಲ್‌ಎ ಇರದಿದ್ದಾಗಲೂ ನಾನು ಶಾಸಕ ಆಗಿದ್ದವ. ಹಿರಿಯರನ್ನೇ ಕಡೆಗಣಿಸಿದರಾ ಎಂಬ ಪ್ರಶ್ನೆಗೆ ಆಡ್ವಾಣಿ ಉದಾಹರಣೆ ಕೊಟ್ಟ ಯತ್ನಾಳ್‌, ಬಿಜೆಪಿಯಲ್ಲಿ ಆಡ್ವಾನಿಯವರ ಪರಿಸ್ಥಿತಿ ಏನಾಗಿದೆ. ಕಾಲ ಕಾಲದಲ್ಲಿ ಒಂದೊಂದು ಯುಗ ಇರುತ್ತದೆ. ಆ ಯುಗದಲ್ಲಿ ಬೇರೆ ಬೇರೆ ಬೆಳವಣಿಗೆಯಾಗುತ್ತದೆ. ನನಗೇನು 75 ವಯಸ್ಸಾಗಿಲ್ಲ. 75ರ ಮೇಲಾಗಿದ್ರೆ ಆಡ್ವಾಣಿ ತರಹ ರಿಟೈರ್ಡ್ ಮಾಡುತ್ತಿದ್ದರು ಎಂದು ಹೇಳಿದರು.

ಇನ್ನೂ ನನಗೆ ಭವಿಷ್ಯವಿದೆ. ಕರ್ನಾಟಕದ ನಂಬರ್ ಒನ್ ಆಗುವ ಅವಕಾಶವಿದೆ. ಕರ್ನಾಟಕ ಸಿಎಂ ಆಗುವ ಅವಕಾಶವಿದೆ. ನನ್ನ ಮೇಲೆ ಯಾವುದಾದಾರೂ ಭ್ರಷ್ಟಾಚಾರ ಆರೋಪವಿದೆಯೇ? ಏನಾದರೂ ಹಗರಣ ಮಾಡಿದೆನಾ? ಏನೂ ಇಲ್ಲ‌. ಹಿಂದುತ್ವದ ಪರ ಇರುವ ಒಳ್ಳೆಯ ಲೀಡರ್ ಎಂದು ಜನ ನನ್ನ ಒಪ್ಪಿದ್ದಾರೆ. ನನ್ನ ಭವಿಷ್ಯ ನನಗಿದೆ. ನನಗೆ ಯುಗಾಂತ್ಯವಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸ್ಥಾನಕ್ಕಾಗಿ ಯಾವುದೇ ಸ್ವಾಮೀಜಿಗಳ ಮೂಲಕ ಹೇಳಿಸಿ ಲಾಬಿ ಮಾಡಿಲ್ಲ. ಕಾಡಿಬೇಡಿ ಪಡೆಯುವವ ನಾನಲ್ಲ. ಪಕ್ಷವೇ ಗುರುತಿಸಿ ಕೊಡಬೇಕು ಎಂದರು.

ಪಕ್ಷ ಯಾವ್ಯಾವ ಕಾರಣಗಳಿಂದ ನಿರ್ಣಯ ಕೈಗೊಂಡಿರುತ್ತದೆ. ಅದರಲ್ಲಿ ಒಳ್ಳೆಯ ಉದ್ದೇಶವಿದ್ದಿರಬಹುದು. ನಾನು ರಾಜ್ಯಾಧ್ಯಕ್ಷನಾಗಬೇಕೆಂದು ಪ್ರಯತ್ನ ಮಾಡಿಲ್ಲ. ಕೇಂದ್ರದ ಮಂತ್ರಿಯಾಗಬೇಕೆಂದು ಪ್ರಯತ್ನ ಮಾಡಿಲ್ಲ. ಈಗ ಮಂತ್ರಿಯಾಗಲು ನಾ ಯಾರ ಮನೆ ಮುಂದೆ ಹೋಗಿ ನಿಂತಿಲ್ಲ. ಯಡಿಯೂರಪ್ಪ ಮನೆಗೆ ಹೋಗಿಲ್ಲ. ಮುಂದೆಯೂ ಹೋಗೋದಿಲ್ಲ. ಸ್ವಾಮಿಗಳ ಮೂಲಕ ಯಡಿಯೂರಪ್ಪ ನವರಿಗೆ ಒತ್ತಡ ಹಾಕಿಲ್ಲ. ಮುಂದಿನ ಸಂಪುಟದಲ್ಲೂ ಒತ್ತಾಯ ಮಾಡೋದಿಲ್ಲ. ಕಾಡಿಬೇಡಿ ಕೈಕಾಲು ಹಿಡಿದು ಮಂತ್ರಿಯಾಗುವಷ್ಟು ಕೆಳ ರಾಜಕಾರಣ ಮಾಡುವವ ನಾನಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲ ಬಾರಿ ಔದಾರ್ಯ ತೋರಬೇಕಾಗುತ್ತದೆ. ತ್ಯಾಗ ಮಾಡಬೇಕಾಗುತ್ತದೆ. ಸುಮ್ಮನೆ ಮಂತ್ರಿ ಮಾಡದಿದ್ದರೆ ಭಿನ್ನಮತ ಎಂದು ಚಿಲ್ಲರೆ ರಾಜಕಾರಣ ನಾವು ಮಾಡೋದಿಲ್ಲ. ಅಸಮಾಧಾನ ನನಗಿಲ್ಲ. ಮಾಧ್ಯಮದವರೆ ಊಹಾಪೋಹ ಸೃಷ್ಟಿ ಮಾಡ್ತಿರಿ. ನಾನೊಬ್ಬ ಹಿರಿಯ ನಾಯಕ. ಬಿಜೆಪಿ ಕಟ್ಟುವುದರಲ್ಲಿ ನನ್ನದು ಪಾತ್ರವಿದೆ. ನಾ ಏನು ಮಧ್ಯ ಬಂದು ಯಾರದ್ದಾದರೂ ಕೈಕಾಲು ಹಿಡಿದು ರಾಜಕಾರಣ ಮಾಡಿದವನಲ್ಲ. ವಿಜಯಪುರ ಲೋಕಸಭಾ ಕ್ಷೇತ್ರದ ಮೊದಲ ಬಿಜೆಪಿ ಸಂಸದ ನಾನು ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *