ಹೈನುಗಾರಿಕೆ ಕೃಷಿ ಪದ್ಧತಿ ಅವಿಭಾಜ್ಯ ಅಂಗ

ವಿಜಯವಾಣಿ ಸುದ್ದಿಜಾಲ ಬೀದರ್
ಹೈನುಗಾರಿಕೆ ಸಮಗ್ರ ಕೃಷಿ ಪದ್ಧತಿಯ ಅವಿಭಾಜ್ಯ ಅಂಗ. ಕೃಷಿ ಮತ್ತು ಹೈನುಗಾರಿಕೆ ಜತೆಯಾಗಿ ಸಾಗಿದರೆ ಕೃಷಿ ಚಟುವಟಿಕೆಗಳು ಲಾಭದಾಯಕವಾಗಿ ಉಳಿಯುತ್ತವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾ ರಾಜೇಂದ್ರ ನಿಟ್ಟೂರಕರ್ ಹೇಳಿದರು.
ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಪಶು ವೈದ್ಯಕೀಯ ಇಲಾಖೆಯು ಪಶು ವೈದ್ಯಾಧಿಕಾರಿಗಳಿಗಾಗಿ ವಿಸ್ತೀರ್ಣ ಚಟುವಟಿಕೆಗಳ ಬಲಪಡಿಸುವಿಕೆ ಅಡಿ ಆಯೋಜಿಸಿದ್ದ ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ರೈತರು ಕೃಷಿ ಜತೆಗೆ ಕಡ್ಡಾಯವಾಗಿ ಹೈನುಗಾರಿಕೆ ಅಳವಡಿಸಿಕೊಳ್ಳಬೇಕು. ಇದರಿಂದ ಆರ್ಥಿಕವಾಗಿ ಸದೃಢರಾಗಬಹುದು ಎಂದರು.
ಆಧುನಿಕ ತಳಿಗಳ ಹೈನುಗಾರಿಕೆಯಲ್ಲಿ ಪಶುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕುವುದು ಅಗತ್ಯ. ಇದಕ್ಕಾಗಿ ಪಶು ವೈದ್ಯಕೀಯ ಇಲಾಖೆಯಿಂದ ಪ್ರತಿ ಹಳ್ಳಿಯಲ್ಲಿರುವ ಪಶು ಚಿಕಿತ್ಸಾಲಯ ಮೂಲಕ ಉತ್ತಮ ಸೇವೆ ಸಿಗುವಂತೆ ಕಾಳಜಿ ವಹಿಸಬೇಕು ಎಂದರು. ಬೀದರ್ ಬರದ ಸ್ಥಿತಿಗೆ ತುತ್ತಾಗಿದ್ದು, ಜಾನುವಾರುಗಳಿಗೆ ಸೂಕ್ತ ಮೇವು ಮತ್ತು ನೀರಿನ ವ್ಯವಸ್ಥೆ ಆಗಬೇಕಿದೆ. ಬರ ಸ್ಥಿತಿ ಎದುರಿಸಲು ಈಗಿಂದಲೇ ತಯಾರಿ ಆರಂಭಿಸಬೇಕು. ಮೇವು ದೊರಕುವ ವ್ಯವಸ್ಥೆ ಇಲಾಖೆ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ರವಿಕುಮಾರ ಭೂರೆ ಮಾತನಾಡಿ, ಮೇವು ಬೆಳೆಸುವವರನ್ನು ಗುರುತಿಸಿ ಮೇವು ಖರೀದಿಸಲು ಸಿದ್ಧತೆ ಮಾಡಿಕೊಳ್ಳಬೇಕು. ನೀರಿನ ವ್ಯವಸ್ಥೆಗೆ ಗಮನಹರಿಸಬೇಕು ಎಂದರು.
ಸೌಹಾರ್ದ್​ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಮಾತನಾಡಿ, ಯವಕರು ಸಣ್ಣ ವರಮಾನದ ಉದ್ಯೋಗದ ಆಸೆಗೆ ನಗರಗಳಿಗೆ ವಲಸೆ ಹೋಗುವ ಬದಲು ಹಳ್ಳಿಗಳಲ್ಲೇ ಸ್ವಯಂ ಕೃಷಿ ಮಾಡಿ ಆತ್ಮಾಭಿಮಾನದಿಂದ ಬದುಕುವ ಅಗತ್ಯವಿದೆ. ಹೈನುಗಾರಿಕೆಗೆ ಉತ್ತಮ ಅವಕಾಶಗಳಿವೆ. ಇದರಿಂದ ಕುಟುಂಬ ಮಾತ್ರವಲ್ಲ ದೇಶವೂ ಸುಭದ್ರವಾಗುತ್ತದೆ ಎಂದು ಹೇಳಿದರು. ನಬಾರ್ಡ್​ ವ್ಯವಸ್ಥಾಪಕ ರಾಮರಾವ ಇತರರಿದ್ದರು. ಡಾ.ನರಸಪ್ಪ ಪ್ರಾಸ್ತಾವಿಕ ಮಾತನಾಡಿ ನಿರೂಪಣೆ ಮಾಡಿದರು. ಡಾ.ನಾಗರಾಜ ಸ್ವಾಗತಿಸಿದರು.