More

    ಹೈನೋದ್ಯಮ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅಪಾರ, ಸಂಸದ ಬಿ.ಎನ್. ಬಚ್ಚೇಗೌಡ ಅಭಿಮತ

    ಸೂಲಿಬೆಲೆ: ತಾಲೂಕಿನಲ್ಲಿ 1990ರಲ್ಲಿ ಕೇವಲ 80 ಹಾಲಿನ ಡೇರಿಗಳಿದ್ದವು, ಪ್ರಸ್ತುತ ಡೇರಿಗಳ ಸಂಖ್ಯೆ 200 ಆಗಿದೆ. ಇದಕ್ಕೆ ಹೈನು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ತಾಯಂದಿರ ಪರಿಶ್ರಮ ಕಾರಣ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

    ಹೋಬಳಿಯ ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಡೇರಿ ಕಟ್ಟಡ ಮತ್ತು ಸಿ.ಸಿ ರಸ್ತೆ ಹಾಗೂ ಭಾವಾಪುರ ಗ್ರಾಮದ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

    1991-92ರಲ್ಲಿ ಹಾಲು ಹೆಚ್ಚು ಸರಬರಾಜಾದರೆ ಆ ಹಾಲನ್ನು ಡೇರಿಯಲ್ಲಿ ಸ್ವೀಕರಿಸುತ್ತಿರಲಿಲ್ಲ, ಈಗ ತಂತ್ರಜ್ಞಾನದ ಕಾರಣ ಎಷ್ಟೇ ಹಾಲು ಉತ್ಪತ್ತಿಯಾದರೂ ಡೇರಿಗಳು ಸ್ವೀಕರಿಸುತ್ತವೆ. ಹೊಸಕೋಟೆ ತಾಲೂಕಿನಲ್ಲಿ ಹಾಲು ಚಿಲ್ಲಿಂಗ್ ಸೆಂಟರ್ ಅನ್ನು 76 ಎಕರೆ ಜಾಗದಲ್ಲಿ ಪ್ರಾರಂಭ ಮಾಡಿಸಿದ ಕಾರಣ ಇಲ್ಲಿನ ಯುವಕರಿಗೆ ಉದ್ಯೋಗ ಅವಕಾಶ ಲಭಿಸಿತು ಎಂದರು.

    ಹಾಲು ಒಕ್ಕೂಟ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಶೇ.95 ರಷ್ಟು ಸಂಘಗಳು ಸ್ವಂತ ಕಟ್ಟಡ ಹೊಂದಿವೆ. ಭುವನಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಬೋನಸ್ ಹಣ ಕೊಟ್ಟು 14 ಲಕ್ಷ ರೂ. ಲಾಭದಲ್ಲಿದೆ. ಹಾಲು ಉತ್ಪಾದಕರ ಸಂಘದವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆಂದು 12 ಲಕ್ಷ ರೂ.ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ, ರಾಸುಗಳಿಗೆ ಶೇ.50 ವಿಮೆ ಹಣ ಕೊಡಲಾಗುತ್ತಿದೆ, ಪ್ರತಿ ಡೇರಿಗೆ ಕಂಪ್ಯೂಟರ್ ನೀಡಲಾಗುತ್ತಿದೆ. ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಬಮುಲ್ ಅನುದಾನ 3.5 ಲಕ್ಷ ರೂ., ಕೆ.ಎಂ.ಎಫ್‌ನ 3 ಲಕ್ಷ ರೂ., ಧರ್ಮಸ್ಥಳ ಸಂಘ ಹಾಗೂ ಹಾಲು ಉತ್ಪಾದಕರ ಸಂಘದ ಸಹಯೋಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

    ಹೊಸಕೋಟೆ ತಾಲೂಕು ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಮಾತನಾಡಿದರು.
    ಕಾರ್ಯಕ್ರಮದಲ್ಲಿ ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಭುವನಹಳ್ಳಿ ಗೋಪಾಲಪ್ಪ, ಯುವ ಮುಖಂಡ ಜಿ.ನಾರಾಯಣಗೌಡ, ನಿವೃತ್ತ ಡಿಎಫ್‌ಒ ವೆಂಕಟೇಶ್, ಬೆಂಗಳೂರು ಡೇರಿ ನಿರ್ದೇಶಕ ಶಿವಾಜಿ ನಾಯಕ್, ಮೇಲ್ವಿಚಾರಕ ಮಂಜುನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts