23ನೇ ವಾರ್ಡ್‌ನಲ್ಲಿ ನೈರ್ಮಲ್ಯದ ಕೊರತೆ

ಚಾಮರಾಜನಗರ: ನಗರಸಭೆಯ 23ನೇ ವಾರ್ಡ್ ವ್ಯಾಪ್ತಿಯ ಬಡಾವಣೆಗಳು ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲ್ಯದ ಕೊರತೆಯಿಂದಾಗಿ ಅಭಿವೃದ್ಧಿಯಾಗದೆ ಸೊರಗಿವೆ.
23ನೇ ವಾರ್ಡ್ ವ್ಯಾಪ್ತಿಯಲ್ಲಿ ಶಂಕರಪುರ ಬಡಾವಣೆ, ಭ್ರಮರಾಂಬ ಬಡಾವಣೆ, ರಾಘವೇಂದ್ರ ದೇವಸ್ಥಾನ, ಉಪ್ಪಾರ ಬಡಾವಣೆ ಹಾಗೂ ನಾಯಕರ ಬಡಾವಣೆಗಳಿದ್ದು, ಇಲ್ಲಿ ಪ್ರಮುಖವಾಗಿ ಸೂಕ್ತ ಚರಂಡಿ, ರಸ್ತೆಗಳಿಲ್ಲ. ಜತೆಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಬಯಲು ಶೌಚ ಇಲ್ಲಿನ ನಿವಾಸಿಗಳನ್ನು ಕಂಗೆಡಿಸಿದೆ.
ಸೂಕ್ತ ರಸ್ತೆಗಳಿಲ್ಲ: 23ನೇ ವಾರ್ಡ್ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಸೂಕ್ತ ರಸ್ತೆಗಳಿಲ್ಲ. ಇರುವ ರಸ್ತೆಯೂ ಸಹ ಹಳ್ಳಕೊಳ್ಳಗಳಿಂದ ಕೂಡಿದ್ದು ಓಡಾಡಲು ತೊಂದರೆಯಾಗುತ್ತದೆ. ಮಳೆಗಾಲದಲ್ಲಿ ಇಲ್ಲಿನ ಬಹುತೇಕ ರಸ್ತೆಗಳು ಕೆಸರುಮಯವಾಗಿ ಸಂಚಾರ ದುಸ್ತರವಾಗುತ್ತದೆ.

ಸೇವಾ ಭಾರತಿ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೇ ನಿವಾಸಿಗಳು ತ್ಯಾಜ್ಯಗಳನ್ನು ಸುರಿಯುತ್ತಾರೆ. ನಗರಸಭೆ ವ್ಯಾಪ್ತಿಯ ಈ ಬಡಾವಣೆಗಳಲ್ಲಿ ಪೌರಕಾರ್ಮಿಕರು ಕಸ ಸಂಗ್ರಹಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್, ಪೇಪರ್ ಸೇರಿದಂತೆ ಇತರೆ ತ್ಯಾಜ್ಯಗಳನ್ನು ರಸ್ತೆಯಲ್ಲಿಯೇ ಸುರಿಯುತ್ತಿದ್ದು, ಇದನ್ನು ಸಹ ವಿಲೇವಾರಿ ಮಾಡದೆ ಹಾಗೆ ಬಿಡಲಾಗಿದೆ. ಇದರಿಂದ ತ್ಯಾಜ್ಯದ ರಾಶಿ ಕೊಳೆತು ಅನೈರ್ಮಲ್ಯವನ್ನುಂಟುಮಾಡುತ್ತಿದೆ.
ಹೂಳು ತುಂಬಿದ ಚರಂಡಿಗಳು: ವಾರ್ಡ್ ವ್ಯಾಪ್ತಿಗೆ ಬರುವ ಬಹುತೇಕ ಬಡಾವಣೆಗಳಲ್ಲಿ ಚರಂಡಿಯದ್ದೇ ಪ್ರಮುಖ ಸಮಸ್ಯೆಯಾಗಿದೆ. ಇಲ್ಲಿನ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಲ್ಲುವುದರಿಂದ ಗಬ್ಬುನಾರುತ್ತಿದ್ದು ನಿವಾಸಿಗಳಿಗೆ ತೊಂದರೆಯಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಚರಂಡಿಗಳೇ ಮುಚ್ಚಿ ಹೋಗಿದ್ದು ನೀರು ಸರಾಗವಾಗಿ ಹರಿಯಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟವರು ಇಲ್ಲಿ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆಸಲು ಕ್ರಮವಹಿಸಬೇಕಿದೆ.
ಬಯಲು ಶೌಚಕ್ಕೆ ಹೋಗುವ ಜನರು: ನಗರಸಭೆ ವ್ಯಾಪ್ತಿಯ 23ನೇ ವಾರ್ಡ್‌ನ ಎಲ್ಲ ಬಡಾವಣೆಗಳಲ್ಲಿಯೂ ನಗರಸಭೆಯು ವೈಯಕ್ತಿಕ ಶೌಚಗೃಹಗಳ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಇಲ್ಲಿನ ಕೆಲ ನಿವಾಸಿಗಳು ಮನೆಗಳಲ್ಲಿ ಶೌಚಗೃಹಗಳನ್ನು ನಿರ್ಮಿಸಿಕೊಂಡರು ಬಯಲು ಶೌಚಕ್ಕೆ ಹೋಗುತ್ತಾರೆ. ಉಳಿದಂತೆ ಜಾಗದ ಸಮಸ್ಯೆ ಇರುವವರು ಇನ್ನೂ ಸಹ ಶೌಚಗೃಹಗಳ ನಿರ್ಮಾಣಕ್ಕೆ ಮುಂದಾಗಿಲ್ಲ. ಇದರಿಂದ ಇವರಿಗೆ ಬಯಲು ಶೌಚ ಅನಿವಾರ್ಯವಾಗಿದೆ.

ಬಡಾವಣೆಗಳ ಖಾಲಿ ಜಾಗಗಳಲ್ಲಿ ಬೆಳೆದಿರುವ ಜಾಲಿ ಮುಳ್ಳಿನ ಪೊದೆಗಳೇ ನಿವಾಸಿಗಳಿಗೆ ಶೌಚಗೃಹಗಳಾಗಿದ್ದು ರಸ್ತೆ ಅಕ್ಕಪಕ್ಕವನ್ನು ಬಿಟ್ಟಿಲ್ಲ. ಇದರಿಂದ ಇಲ್ಲಿನ ಪ್ರದೇಶ ಗಬ್ಬು ನಾರುತ್ತಿದ್ದು, ಅನೈರ್ಮಲ್ಯಕ್ಕೆ ಕಾರಣವಾಗಿದ್ದು ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇದು ಹಲವು ಸಾಂಕ್ರಾಮಿಕ ರೋಗಗಳ ಆಹ್ವಾನಕ್ಕೂ ಕಾರಣವಾಗಿದೆ.

ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ಸಾಮೂಹಿಕ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿನ ನಿವಾಸಿಗಳು ಇದನ್ನು ಉಪಯೋಗಿಸದೆ ಬಯಲು ಶೌಚಕ್ಕೆ ತೆರಳುತ್ತಿರುವುದು ಅವರ ಅವೈಜ್ಞಾನಿಕತೆಯನ್ನು ಎತ್ತಿ ತೋರುತ್ತಿದೆ. ಇನ್ನಾದರೂ ಬಯಲು ಶೌಚಕ್ಕೆ ಹೋಗುವುದನ್ನು ಬಿಟ್ಟು ತಮ್ಮ ಮನೆಗಳಲ್ಲಿಯೇ ಶೌಚಗೃಹಗಳನ್ನು ನಿರ್ಮಿಸಿಕೊಳ್ಳುವ ನಿಟ್ಟಿನಲ್ಲಿ ನಿವಾಸಿಗಳು ಮುಂದಾಗಬೇಕಿದೆ.

ಕುಡಿಯುವ ನೀರಿನ ಸಮಸ್ಯೆ: 23 ನೇ ವಾರ್ಡ್ ವ್ಯಾಪ್ತಿಯ ಉಪ್ಪಾರ ಬಡಾವಣೆ ಹಾಗೂ ನಾಯಕರ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ನಿವಾಸಿಗಳಿಗೆ ತೊಂದರೆಯಾಗಿದೆ. ವಾರ್ಡ್ ವ್ಯಾಪ್ತಿಯಲ್ಲಿ 2 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ನೀರಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಸಾಧ್ಯವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ನೀರಿನ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ.

23 ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಸಮಸ್ಯೆಯನ್ನು ಹೊರತುಪಡಿಸಿದರೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಈಗಾಗಲೇ ಶಂಕರಪುರ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಉಳಿದಂತೆ ನಾಯಕರ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಮುಗಿದಿದೆ. ಸಾಮೂಹಿಕ ಶೌಚಗೃಹ ಹಾಗೂ ವೈಯಕ್ತಿಕ ಶೌಚಗೃಹಗಳಿದ್ದರೂ ಇಲ್ಲಿನ ಕೆಲ ನಿವಾಸಿಗಳು ಬಯಲು ಶೌಚಕ್ಕೆ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ನಗರಸಭೆ ವತಿಯಿಂದ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು.
ಗಾಯತ್ರಿ ಚಂದ್ರಶೇಖರ್ ವಾರ್ಡ್‌ನ ಸದಸ್ಯೆ