ಸಾಫ್ಟ್​ವೇರ್ ಬಿಟ್ಟು ಜಲಕೃಷಿ

| ಭರತ್ ಶೆಟ್ಟಿಗಾರ್ ಮಂಗಳೂರು

ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ, ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿಯೂ ಆರಂಭಿಕ ಹಂತದಲ್ಲಿರುವ ಜಲಕೃಷಿ (Hydroponics/ soilless garden)ಯಲ್ಲಿ ಬಂಟ್ವಾಳ ಪುಂಜಾಲಕಟ್ಟೆ ಯುವಕ ಕಟ್ಟೆಮನೆ ಸೂರಜ್ ಅಜಿಲ ಯಶಸ್ಸು ಕಂಡಿದ್ದಾರೆ. ಮಣ್ಣಿನ ಅಗತ್ಯವೇ ಇಲ್ಲದೆ ಕೇವಲ ನೀರು ಹಾಗೂ ಪೋಷಕಾಂಶಯುಕ್ತ ದ್ರಾವಣಗಳ ಸಹಾಯದಿಂದ ತರಕಾರಿ ಬೆಳೆಗಳನ್ನು ಬೆಳೆಸುವುದೇ ಜಲಕೃಷಿ ಅಥವಾ ಹೈಡ್ರೋಫೋನಿಕ್ಸ್ ವಿಶೇಷತೆ.

ಬಿಟೆಕ್ ವಿದ್ಯಾಭ್ಯಾಸ ಮಾಡಿರುವ ಸೂರಜ್ ಅಜಿಲ ಬೆಂಗಳೂರು ಸಾಫ್ಟ್​ವೇರ್ ಸಂಸ್ಥೆಯೊಂದರಲ್ಲಿ 10 ವರ್ಷ ಉದ್ಯೋಗಿಯಾಗಿದ್ದರು. ಈ ವೇಳೆ ಅಮೆರಿಕ, ಇಂಗ್ಲೆಂಡ್, ಕೆನಡ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶ ಸುತ್ತಿದ್ದಾರೆ. ಅಮೆರಿಕನ್ನರು ಹೈಡ್ರೋಪೋನಿಕ್ಸ್ ಮೂಲಕ ತಮ್ಮ ದೈನಂದಿನ ಉಪಯೋಗಕ್ಕೆ ಬೇಕಾದ ತರಕಾರಿ ಬೆಳೆಯುತ್ತಿರುವುದು ಅವರನ್ನು ಹೆಚ್ಚು ಆಕರ್ಷಿಸಿತು. ಕೃಷಿಕ ಕುಟುಂಬದಿಂದಲೇ ಬಂದಿರುವ ತಾವೂ ಯಾಕೆ ಈ ಪ್ರಯೋಗ ಮಾಡಬಾರದು ಎಂಬ ಯೋಚನೆ ಬಂದಿತ್ತು.

ಕಾಕತಾಳೀಯವೆಂಬಂತೆ ಕೌಟುಂಬಿಕ ಕಾರಣಕ್ಕಾಗಿ ಉದ್ಯೋಗ ತೊರೆದು ಊರಿಗೆ ಬರಬೇಕಾಯಿತು. ಕೃಷಿಯಲ್ಲಿ ತೊಡಗಿಸಿ ಹೊಸತನ ಮಾಡಬೇಕೆಂದು ತೀರ್ವನಿಸಿ, ಜಲಕೃಷಿ ಆಯ್ಕೆ ಮಾಡಿದರು. ಆದರೆ, ಆಗ ಈ ಮಾದರಿಯ ಕೃಷಿ ದೇಶಕ್ಕೇ ಹೊಸತು. ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆಯೋಣವೆಂದರೆ ಅಧಿಕಾರಿಗಳಿಗೆ ಈ ಕುರಿತು ಗೊತ್ತೇ ಇಲ್ಲ. ಅಂತರ್ಜಾಲದಲ್ಲಿ ಹುಡುಕಾಡುತ್ತಿರುವಾಗ ಅಮೆರಿಕದ ಕೃಷಿ ವಿಜ್ಞಾನ ಪ್ರಾಧ್ಯಾಪಕ ಮಾರ್ಕ್ ಕ್ರೊಗ್ಗೆಲ್ ಎಂಬುವರ ಪರಿಚಯವಾಗಿ, ಅವರಿಂದ ತಾಂತ್ರಿಕ ಮಾಹಿತಿ ಪಡೆದು ಮನೆಯ ಟೆರೇಸ್​ನಲ್ಲಿ ಬೆಳೆಯಲು ಆರಂಭಿಸಿದರು. ಪ್ರಾಯೋಗಿಕವಾಗಿ ಕ್ಯಾಪ್ಸಿಕಂ, ಬದನೆ, ಬಸಳೆ, ಸ್ಟ್ರಾಬೆರ್ರಿ, ಕೊತ್ತಂಬರಿ ಸೊಪ್ಪು, ಹರಿವೆ, ಪುದೀನಾ, ಆಯುರ್ವೆದ ಗಿಡಗಳನ್ನು ಬೆಳೆದು ಯಶಸ್ವಿಯಾದರು. ಈಗ ಇತರರಿಗೆ ಮಾರ್ಗದರ್ಶನ ನೀಡುವಷ್ಟು ಅನುಭವ ಪಡೆದಿದ್ದಾರೆ.

ಬೆಳೆಯುವುದು ಹೇಗೆ?: ಮಣ್ಣು ಗಿಡದ ಕಾಂಡಗಳಿಗೆ ಆಧಾರ ನೀಡಿ ಗಿಡವನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಲು ಸಹಕಾರಿಯಾಗುತ್ತದೆ. ಆದರೆ, ಜಲಕೃಷಿಯಲ್ಲಿ ಮಣ್ಣು ಇಲ್ಲದಿರುವುದರಿಂದ ಗಿಡಗಳನ್ನು ನಿಲ್ಲುವಂತೆ, ಆಧಾರವಾಗಿಡಲು ವಿಶೇಷ ರೀತಿಯ ಚಟ್ಟಿಗಳು ಅಥವಾ ಕೊಳವೆ ಮಾದರಿಯನ್ನು ಮಾಡಿ ಅದರಲ್ಲಿ ಗಿಡಗಳನ್ನು ಬೆಳೆಸಬೇಕು. ಅಪಾರ್ಟ್​ವೆುಂಟ್​ಗಳಲ್ಲಿರುವರು ತಮ್ಮ ಬಾಲ್ಕನಿಗಳಿಗೆ ಸರಿಹೊಂದುವಂತಹ ಮಾದರಿ ಅನುಸರಿಸಬಹುದು. ಮಣ್ಣಿನಲ್ಲಿ ಗಿಡಗಳಿಗೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ಆದರೆ, ನೀರಿನಲ್ಲಿ ಆ ಪೋಷಕಾಂಶಗಳು ಇರುವುದಿಲ್ಲ. ಆದ್ದರಿಂದ ಪೋಷಕಾಂಶಯುಕ್ತ ದ್ರಾವಣವನ್ನು ನಿಗದಿತ ಪ್ರಮಾಣದಲ್ಲಿ ಸೇರಿಸಬೇಕು. ಗಿಡದ ಬೇರುಗಳು ಸದಾ ನೀರಿನಲ್ಲಿ ಮುಳುಗಿರುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಗಿಡಕ್ಕೂ ಬೇರೆ ಬೇರೆ ಪ್ರಮಾಣದಲ್ಲಿ ಪೋಷಕಾಂಶಯುಕ್ತ ದ್ರಾವಣ ಹಾಕಬೇಕು. ಉದಾಹರಣೆಗೆ ಟೊಮ್ಯಾಟೊ ಗಿಡಕ್ಕೆ ಹಾಕುವ ಪೋಷಕಾಂಶಗಳನ್ನು ಪಾಲಕ್ ಗಿಡಗಳಿಗೆ ಹಾಕುವಂತಿಲ್ಲ. ಇದರಿಂದ ಗಿಡ ಸಾಯಲೂಬಹುದು. ಮಾಹಿತಿಗೆ ಸೂರಜ್ ಅಜಿಲ ಮೊಬೈಲ್ ಸಂಖ್ಯೆ: 9886701956.

ಶೇ.10ರಷ್ಟು ನೀರು ಸಾಕು

ಮಂಜು ಬೀಳುವ ಜಾಗದಲ್ಲಿ ಅಥವಾ ಮರುಭೂಮಿಯಲ್ಲಿ ಮಣ್ಣಿನ ಅಗತ್ಯವಿಲ್ಲದೆ ಜಲಕೃಷಿ ಮಾಡಿ ಬೆಳೆ ತೆಗೆಯಬಹುದು. ನಗರಗಳಲ್ಲಿ ಅಪಾರ್ಟ್​ವೆುಂಟ್​ಗಳಲ್ಲಿ ವಾಸಿಸುವವರು, ಸಣ್ಣ ಜಾಗದಲ್ಲಿ ಮನೆಯಿರುವವರೂ ಜಲಕೃಷಿ ಅಳವಡಿಸಿಕೊಂಡಲ್ಲಿ ಮನೆಗೆ ಬೇಕಾದ ಸೊಪ್ಪು, ತರಕಾರಿ ಬೆಳೆಯಬಹುದು. ಮಣ್ಣಿನಲ್ಲಿ ಬೆಳೆಯುವ ಗಿಡಗಳಿಗಿಂತ ಶೇ.90ರಷ್ಟು ಕಡಿಮೆ ನೀರು ಸಾಕು ಎನ್ನುತ್ತಾರೆ ಸೂರಜ್.

 

ಅಮೆರಿಕದ ಕೆಲವು ಪ್ರದೇಶಗಳಲ್ಲಿ ಚಳಿಗಾಲದಲ್ಲಿ ವಿಪರೀತ ಐಸ್ ಬೀಳುತ್ತದೆ. ಆ ಚಳಿಗೆ ಮಣ್ಣಿನಲ್ಲಿ ಯಾವುದೇ ಬೆಳೆ ತೆಗೆಯಲು ಸಾಧ್ಯವಾಗುವುದಿಲ್ಲ. ಆದರೂ ಅಲ್ಲಿನ ಪ್ರತಿ ಮನೆಯವರು ಬೇಕಾದ ಬೆಳೆಗಳನ್ನು ತಾವೇ ಬೆಳೆಯುತ್ತಿದ್ದರು. ಅದೂ ಮಣ್ಣಿಲ್ಲದೆ ಕೇವಲ ದ್ರಾವಣಗಳ ಮೂಲಕ. ಇದು ನನ್ನನ್ನು ಹೆಚ್ಚು ಆಕರ್ಷಿಸಿ, ನಾನೂ ಯಾಕೆ ಬೆಳೆಯಬಾರದು ಎಂದೆನಿಸಿತ್ತು. ಈಗ ಎಲ್ಲ ರೀತಿಯ ಮಾಹಿತಿ ಪಡೆದು, ಬೆಳೆ ಬೆಳೆದು ಯಶಸ್ವಿಯಾಗಿದ್ದೇನೆ.

| ಸೂರಜ್ ಅಜಿಲ ಜಲಕೃಷಿ ಪರಿಣತ

Leave a Reply

Your email address will not be published. Required fields are marked *