ಸ್ಮಾರ್ಟ್‌ ಫೋನ್‌ಗಾಗಿ ಗೆಳೆಯನನ್ನೇ ಕೊಂದು ಸುಟ್ಟವ ಅಂದರ್‌!

ಹೈದರಾಬಾದ್‌: ಸ್ಮಾರ್ಟ್‌ ಫೋನ್‌ ವಿಚಾರವಾಗಿ ತನ್ನ ಸ್ನೇಹಿತನನ್ನೇ ಕೊಲೆ ಮಾಡಿ ಸುಟ್ಟು ಹಾಕಿದ ಆರೋಪದ ಮೇಲೆ ಹೈದರಾಬಾದ್‌ ಪೊಲೀಸರು 19 ವರ್ಷದ ಯುವಕನನ್ನು ಬಂಧಿಸಿದ್ದಾರೆ.

ಜಿ ಪ್ರೇಮ್‌ ಸಾಗರ್‌(19) ಎಂಬಾತ ನೆರೆಮನೆಯ 17 ವರ್ಷದ ಡಿ. ಪ್ರೇಮ್‌ ಎಂಬಾತನನ್ನು ಉಪ್ಪಳದಿಂದ ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತನ ಮೇಲೆ ದಾಳಿ ಮಾಡಿ, ಬಳಿಕ ಮೃತದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಎಸಿಪಿ ತಿಳಿಸಿದ್ದಾರೆ.

ಮೋಟಾರ್‌ ಸೈಕಲ್‌ನಲ್ಲಿ ಲಾಂಗ್‌ ಡ್ರೈವ್‌ ಹೋಗೋಣ ಎಂದು ಹೇಳಿ ಕರೆದುಕೊಂಡು ಹೋಗಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾನೆ. ಅಲ್ಲಿ ಕೋಲಿನಲ್ಲಿ ದಾಳಿ ನಡೆಸಿ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ಆತನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಅಪ್ರಾಪ್ತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಅಪ್ರಾಪ್ತ ಪ್ರೇಮ್‌ ಕಾಣೆಯಾಗಿರುವ ಕುರಿತು ಆತನ ಪಾಲಕರು ಜು. 14ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರ ಬಳಿ ಆರೋಪಿ ಪ್ರೇಮ್‌ ಸಾಗರ್‌, ಮೊಬೈಲ್‌ ಫೋನ್‌ ಕೊಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್)