ಉದ್ಯಮಿಗಳನ್ನು ಭಾರಿ ಚಿಂತೆಗೀಡುಮಾಡಿದ ಹೈದರಾಬಾದ್​ನಲ್ಲಿ ನಡೆದ ಆಘಾತಕಾರಿ ಘಟನೆ

ಹೈದರಾಬಾದ್​: ನಾಲ್ವರು ಮುಸುಕುಧಾರಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಹೈದರಾಬಾದ್​ ಮೂಲದ ಉದ್ಯಮಿಯೊಬ್ಬರನ್ನು ಒಂದು ಕೋಟಿ ರೂ. ಹಣ ನೀಡಿದ ಬಳಿಕ ಅಪಹರಣಕಾರರು ಬಿಡುಗಡೆ ಮಾಡಿರುವ ಘಟನೆ ಮುತ್ತಿನ ನಗರಿಯಲ್ಲಿ ನಡೆದಿದೆ. ಈ ಘಟನೆಯಿಂದ ಹೈದರಾಬಾದ್​ ಉದ್ಯಮಿಗಳಿಗೆ ನಡುಕ ಶುರುವಾಗಿದೆ.

ಭಾನುವಾರ ರಾತ್ರಿ 11 ಗಂಟೆಗೆ ಗಜೇಂದ್ರ ಪರಾಕ್​ ಎಂಬ ಉದ್ಯಮಿಯನ್ನು ಅಪಹರಣ ಮಾಡಿದ ಅಪಹರಣಕಾರರು ನಗರದೊಳಗಿನ ಗೋಡೌನ್​ ಒಂದರಲ್ಲಿ ಇರಿಸಿದ್ದರು. ಬಿಡುಗಡೆ ಮಾಡಲು ಮೂರು ಕೋಟಿ ರೂ.ಗೆ ಬೇಡಿಕೆಯಿಟ್ಟು, ನೀಡದಿದಲ್ಲಿ ಉದ್ಯಮಿಯನ್ನು ಕೊಲೆ ಮಾಡುವುದಾಗಿ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದರು.

ಉದ್ಯಮಿ ಕುಟುಂಬ 1 ಕೋಟಿ ರೂ. ನೀಡಿದ ಬಳಿಕ ಆತನನ್ನು ಸೋಮವಾರ ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ. ಈ ವೇಳೆ ತೋಳು ಮುರಿತ ಹಾಗೂ ಕಣ್ಣಿನ ಗಾಯದ ಸ್ಥಿತಿಯಲ್ಲಿದ್ದ ಉದ್ಯಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ತನಿಖೆಯನ್ನು ಆರಂಭಿಸಿರುವ ಹೈದರಾಬಾದ್​ ಪೋಲಿಸರು ಉದ್ಯಮಿಯನ್ನು ಅಪಹರಿಸಿದ ಸ್ಥಳದಲ್ಲಿರುವ ಸಿಸಿಟಿವಿ ಫುಟೇಜ್​ ಅನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಪಹರಣಕಾರರು ಬಳಸಿದ ವಾಹನ ಹಾಗೂ ಅವರು ತೆರಳಿದ ಮಾರ್ಗವನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಉದ್ಯಮಿ ಗಜೇಂದ್ರ ಅಪಹರಣದ ಬಳಿಕ ನಗರದಲ್ಲಿರುವ ಇನ್ನಿತರ ಉದ್ಯಮಿಗಳು ತಮ್ಮ ರಕ್ಷಣೆ ಬಗ್ಗೆ ಚಿಂತಿಸುತ್ತಿದ್ದಾರೆ. ಇಂದು ಗಜೇಂದ್ರ, ನಾಳೆ ನಮ್ಮಲ್ಲಿಯೇ ಯಾರನ್ನಾದರೂ ಅಪಹರಿಸಬಹುದು ಎಂಬ ಚಿಂತೆಗೀಡಾಗಿದ್ದು, ಇದೇ ಭಯದಲ್ಲಿ ಬದುಕಲು ಆಗುವುದಿಲ್ಲ. ಬದಲಾಗಿ ಏನಾದರೂ ಮಾಡಬೇಕೆಂಬ ಯೋಚನೆಯಲ್ಲಿರುವುದಾಗಿ ಅಪಹರಣಕ್ಕೀಡಾಗಿ ಮರಳಿ ಬಂದ ಗಜೇಂದ್ರ ಪರಾಕ್ ಅವರ ಸ್ನೇಹಿತ ಹಾಗೂ ಉದ್ಯಮಿಯು ಆಗಿರುವ ಓರ್ವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)